ವಿಜಯನಗರದಲ್ಲಿರುವ ಸೆಸ್ಕ್ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕೆರೆಹುಂಡಿ ರಾಜಣ್ಣ, ಹನುಮಯ್ಯ, ಹಾಲಿನ ನಾಗರಾಜ್, ವಳಗೆರೆ ಗಣೇಶ್, ಕಸುವಿನಹಳ್ಳಿ ಮಂಜೇಶ್, ಮುದ್ದಹಳ್ಳಿ ಮಧು ಇನ್ನಿತರರಿದ್ದರು
- ಕೃಷಿ, ಗೃಹಬಳಕೆಗೆ ಸಮರ್ಪಕ ವಿದ್ಯುತ್ ಪೂರೈಸಲು ಪಟ್ಟು
- ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರ ಪ್ರತಿಭಟನೆ
ಮೈಸೂರು: ಕೃಷಿ, ಗೃಹಬಳಕೆಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ರೈತರು ವಿಜಯನಗರದ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ, ಕೇಂದ್ರ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬರದ ನೆಪದಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳು, ಚುನಾಯಿತ ಪ್ರತಿನಿಧಿಗಳು ಕೃಷಿ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ ಸುಮಾರು 30 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ಎರಡ್ಮೂರು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಗೃಹಬಳಕೆ ವಿದ್ಯುತ್ ಪೂರೈಕೆಯಲ್ಲೂ ಅನಿಯಮಿತವಾಗಿ ವ್ಯತ್ಯಯ ಮಾಡುತ್ತಿದ್ದು, ಹಳ್ಳಿಯಲ್ಲಿರುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ವ್ಯತ್ಯಯದಿಂದಾಗಿ ರಾತ್ರಿ ವೇಳೆ ತೋಟದ ಮನೆಯಲ್ಲಿ ಇರುವ ಕೃಷಿ ಪಂಪ್‌ಸೆಟ್ ಬಳಕೆದಾರರು, ಗೃಹಬಳಕೆದಾರರು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ದೀಪ ಹಚ್ಚಿ ಕಾಡು ಪ್ರಾಣಿಗಳ ರಕ್ಷಣೆ ಪಡೆಯುವ ಪರಿಸ್ಥಿತಿ ಇದ್ದು, ಬರದ ನಡುವೆ ಅಲ್ಪ ಸ್ವಲ್ಪ ಅಂತರ್ಜಲ ಉಳಿದಿದೆ. ರೈತರು ಜೀವನೋಪಾಯಕ್ಕಾಗಿ ಕೃಷಿ ಪಂಪ್ ಸೆಟ್ ಮೂಲಕ ನೀರೆತ್ತಿ ತರಕಾರಿ, ಸೊಪ್ಪು ಬೆಳೆಯುತ್ತಿದ್ದಾರೆ. ಇದಕ್ಕೂ ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಕೃಷಿಕರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಿಡಿಕಾರಿದರು.
ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ವಿದ್ಯುತ್ ಸಂಗ್ರಹಕ್ಕೆ ಸಂಬಂಧಪಟ್ಟಂತೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್‌ಗೆ ಆದ್ಯತೆ ನೀಡಬೇಕು. ಕೈಗಾರಿಕೆಗಳಿಗೂ ಶಿಫ್ಟ್ ಮುಖಾಂತರ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ಐಟಿ-ಬಿಟಿ ಕಂಪನಿಗಳಿಗೆ ಹೆಚ್ಚಿನ ಮಾನ್ಯತೆ ನೀಡಿ ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ತಾರತಮ್ಯ ಮಾಡುವುದು ಸರಿಯಲ್ಲ. ಇದರಿಂದ ಕೃಷಿ ಕ್ಷೇತ್ರವು ತೊಂದರೆ ಅನುಭವಿಸುವ ಪರಿಸ್ಥಿತಿಯನ್ನು ಸರ್ಕಾರವೇ ನಿರ್ಮಾಣ ಮಾಡುತ್ತಿವೆ. ಇಂತಹ ತಾರತಮ್ಯ ನೀತಿಯನ್ನು ಬಿಟ್ಟು ಕೃಷಿ ಪಂಪ್‌ಸೆಟ್‌ಗಳು ಮತ್ತು ಗ್ರಾಮೀಣ ಭಾಗಕ್ಕೂ ಸಮರ್ಪಕವಾಗಿ ವಿದ್ಯುತ್ ನೀಡಬೇಕು. ತಕ್ಷಣ ಸರ್ಕಾರ, ಇಂಧನ ಸಚಿವರು ಈ ಬಗ್ಗೆ ಗಮನ ಹರಿಸದಿದ್ದರೆ ರೈತರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧಿಕಾರಾವಧಿಯ ನೂರು ದಿನದ ಸಂತೋಷದಲ್ಲಿರುವ ಡಿ.ಕೆ.ಶಿವಕುಮಾರ್ ಸರ್ಕಾರವು ರೈತರಿಗೆ ಗಿಫ್ಟ್ ಕೊಟ್ಟಿದ್ದು, ಅದು ಏನೆಂದರೆ ‘ನಾಲೆಗಳಿಗೆ ನೀರಿಲ್ಲ, ಬೆಳೆ ಹಾಕಬೇಡಿ’, ಪಂಪ್‌ಸೆಟ್‌ಗಳಿಗೆ ವಿದ್ಯುತ್ ಇಲ್ಲ, ಬೆಳೆ ಹಾಕಬೇಡಿ’, ‘ಬರದಲ್ಲಿ ದುಡ್ಡಿಲ್ಲ, ಪರಿಹಾರ ಕೇಳಬೇಡಿ’ ಎಂಬುದಾಗಿದೆ. ಇದುವೇ ಈ ಸರ್ಕಾರದ ನೂರು ದಿನದ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೆಸ್ಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಮುಗಿಸಲಾಯಿತು. ಕೆರೆಹುಂಡಿ ರಾಜಣ್ಣ, ಹನುಮಯ್ಯ, ಹಾಲಿನ ನಾಗರಾಜ್, ವಳಗೆರೆ ಗಣೇಶ್, ಕಸುವಿನಹಳ್ಳಿ ಮಂಜೇಶ್, ಮುದ್ದಹಳ್ಳಿ ಮಧು, ದೇವಿರಮ್ಮನಹಳ್ಳಿ ಪುಟ್ಟಸ್ವಾಮಿ, ಹುಂಡಿ ಮಹೇಶ್, ಚಿದಂಬರ, ಸ್ಯಾಂಡರಳ್ಳಿ ಬಸವರಾಜು, ನಾಗರಾಜಪ್ಪ, ಹೊನ್ನೇಗೌಡನಳ್ಳಿ ಮಹೇಶ್, ಸಿದ್ದಯ್ಯನ ಹುಂಡಿ ಸೋಮಣ್ಣ, ಕೀರ್ತಿ, ಮಾದಪ್ಪ, ವಳಗೆರೆ ಮಹೇಶ್, ಶಿವಾನಂದ ಇನ್ನಿತರರಿದ್ದರು.