ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣ ಮಾಡಲು ರೈತರನ್ನು ಒಕ್ಕಲೆಬ್ಬಿಸುತ್ತಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಬಡಗಲಪುರ ನಾಗೇಂದ್ರ, ಎ.ಎಲ್.ಕೆಂಪೇಗೌಡ, ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ಪಿ.ಮರಂಕಯ್ಯ ಇತರರಿದ್ದರು. 
ಮೈಸೂರು

ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ವಿರೋಧಿಸಿ ರೈತರ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರೈತ ಸಂಘದಿಂದ ಪ್ರತಿಭಟನೆ
  • ರೈತರನ್ನು ಒಕ್ಕಲೆಬ್ಬಿಸುತ್ತಿರುವ ಕ್ರಮಕ್ಕೆ ವಿರೋಧ
ಮೈಸೂರು; ಮೈಸೂರು ತಾಲೂಕಿನ ವರುಣ ಹೋಬಳಿಯ ಗುಡುಮಾದನಹಳ್ಳಿಯ ಬಳಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಸಿದ್ಧಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ, ಆಸ್ಪತ್ರೆ ನಿರ್ಮಾಣ ಮಾಡಲು ರೈತರನ್ನು ಒಕ್ಕಲೆಬ್ಬಿಸುತ್ತಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ಈ ಜಾಗದಲ್ಲಿ 80 ಕುಟುಂಬಗಳು ಕಳೆದ 65-70 ವರ್ಷಗಳಿಂದ ಬೇಸಾಯ ಮಾಡುತ್ತಿದ್ದಾರೆ. ತೆಂಗು, ಅಡಿಕೆ ಬೆಳೆದಿದ್ದಾರೆ. ಈ ಪ್ರದೇಶಕ್ಕೆ ದಳವಾಯಿ ಕೆರೆಯಿಂದ, ವರುಣ ನಾಲೆಯಿಂದ ಪೂರೈಕೆಯಾಗುವ ನೀರಿನಲ್ಲಿ ವರ್ಷಕ್ಕೆ ಎರಡು ಫಸಲು ಭತ್ತ ಬೆಳೆಯುತ್ತಿದ್ದಾರೆ. ಜತೆಗೆ ಗ್ರಾಮದಲ್ಲಿ 400 ಹಸುಗಳು, ವಿವಿಧ ಜಾನುವಾರುಗಳಿಗೆ ಬೇಕಾಗಿರುವ ಹುಲ್ಲನ್ನು ಇಲ್ಲಿಯೇ ಬೆಳೆಯಲಾಗುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು. 
ಇಂತಹ ಫಲವತ್ತಾದ ಪ್ರದೇಶದ 20 ಎಕರೆ ಜಾಗವನ್ನು ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿದೆ. ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಪ್ರಯತ್ನಿಸಲಾಗುತ್ತಿದೆ. ಇದನ್ನು ತಡೆಹಿಡಿದು ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದರು.

ಬೇಡಿಕೆ ಏನು..?

ನಿಮ್ಹಾನ್ಸ್ ಆಸ್ಪತ್ರೆಯನ್ನು ಬೇರೆ ಕಡೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವ ಮೂಲಕ ಗುಡುಮಾದನಹಳ್ಳಿಯ ರೈತರ ಜಮೀನು ಉಳಿಸಬೇಕು. ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರೊಬ್ಬರು ರೈತ ಹೋರಾಟಗಾರರ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾರೆ. ಅಲ್ಲದೆ, ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇವರ ವಿರುದ್ಧ ದೂರು ದಾಖಲಿಸಿ ಕರ್ತವ್ಯದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. 
ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಎ.ಎಲ್.ಕೆಂಪೇಗೌಡ, ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ಪಿ.ಮರಂಕಯ್ಯ, ನೇತ್ರಾವತಿ, ಆನಂದೂರು ಪ್ರಭಾಕರ್, ಮಹೇಶ್ ಕೆಆರ್‌ಪುರ, ಕೆ.ಕುಮಾರಸ್ವಾಮಿ, ಬೆಂಕಿಪುರ ಚಿಕ್ಕಣ್ಣ ಇ ತರರಿದ್ದರು.