ಪಿರಿಯಾಪಟ್ಟಣದ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ವರ್ತನೆಯನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸಿದರು. ಬಸಲಾಪುರ ಕೆಂಪಯ್ಯ, ಮುತ್ತುರಾಜು, ಭುವನಹಳ್ಳಿ ಲೋಕೇಶ್, ಹೊನ್ನೂರಯ್ಯ, ಜವರೇಗೌಡ,ಕುಮಾರ್ ಸೇರಿದಂತೆ ಇತರರು ಇದ್ದರು. 
ಮೈಸೂರು

ರೈತರು, ಇಲಾಖೆ ಸಿಬ್ಬಂದಿ ನಿಂದನೆಗೆ ಆಕ್ರೋಶ

ಪಿರಿಯಾಪಟ್ಟಣ: ತಾಲೂಕಿನ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಮ್ಮ ಕಚೇರಿಯ ಸಿಬ್ಬಂದಿ ಮತ್ತು ರೈತರಿಗೆ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆಂದು ರೈತರು ಬುಧವಾರ ಸ್ಥಳದಲ್ಲೇ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಕಲ್ಲಂಗಡಿ ಸೇರಿದಂತೆ ವಿವಿಧ ಬೆಳೆಗಳಿಗೆ ಹನಿ ನೀರಾವರಿ ಪೈಪ್‌ಲೈನ್ ಅಳವಡಿಕೆಗೆ ಸಂಬಂಧಿಸಿದ ನಿಯಮಾವಳಿಗಳಿಂದ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ರೈತರು ಅಧಿಕಾರಿಗಳ ಬಳಿ ಮನವಿ ಸಲ್ಲಿಸಲು ಪಟ್ಟಣದ ತೋಟಗಾರಿಕೆ ಇಲಾಖೆಗೆ ಹೋದಾಗ ಅಲ್ಲಿದ್ದ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಗುರುಸ್ವಾಮಿ ಅವರು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ರೈತರೊಂದಿಗೂ ಉದ್ಧಟತನ ತೋರಿದ್ದಾರೆ ಎಂದು ರೈತರು ಆರೋಪಿಸಿದರು.
ಅಲ್ಲದೆ ಜಿ.ಗುರುಸ್ವಾಮಿ ವಿರುದ್ಧ ತೋಟಗಾರಿಕೆ ಇಲಾಖೆ ಕಚೇರಿ ಮುಂಭಾಗ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಚೇರಿಯಲ್ಲಿ ನಡೆದ ಮಾತಿನ ಚಕಮಕಿಯ ವೇಳೆ ಸಹಾಯಕ ನಿರ್ದೇಶಕರು, ಮಹಿಳಾ ಉದ್ಯೋಗಿ, ಪ್ರಥಮ ದರ್ಜೆ ಸಹಾಯಕರು ಹಾಗೂ ಇಲಾಖೆಯ ವ್ಯವಸ್ಥಾಪಕರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದು ಕಚೇರಿ ಸಿಬ್ಬಂದಿ ಸಹ ದೂರಿದರು. ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಇಲಾಖೆಯ ಸುಗಮ ಕಾರ್ಯ ನಿರ್ವಹಣೆ ಮತ್ತು ಸಿಬ್ಬಂದಿ ಹಿತದೃಷ್ಟಿಯಿಂದ ಜಿ.ಗುರುಸ್ವಾಮಿ ಅವರನ್ನು ತಕ್ಷಣ ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಸಮರ್ಥ ಹಾಗೂ ಸಿಬ್ಬಂದಿ ಸ್ನೇಹಿ ಅಧಿಕಾರಿಯನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ತಪ್ಪೊಪ್ಪಿಕೊಂಡ ಅಧಿಕಾರಿ: ಈ ಕುರಿತು ಪ್ರತಿಕ್ರಿಯಿಸಿದ ತೋಟಗಾರಿಕೆ ಸಹಾಯಕ ನಿರ್ದೇಶಕ ಜಿ.ಗುರುಸ್ವಾಮಿ, ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ವೇಳೆ ಕೆಲಸದ ಒತ್ತಡ ಹೆಚ್ಚಾಗಿದ್ದ ಕಾರಣ ಕಚೇರಿ ಸಮಯ ಮುಗಿದರೂ ಕೆಲ ಕಾರ್ಯ ಪೂರ್ಣಗೊಳಿಸಬೇಕಾದ ಪರಿಸ್ಥಿತಿ ಎದುರಾಯಿತು. ಸಿಬ್ಬಂದಿಯನ್ನು ಸ್ವಲ್ಪ ಸಮಯ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಮನವಿ ಮಾಡಿದ್ದೆ. ಈ ವೇಳೆ ನಡೆದ ಮಾತಿನ ಚಕಮಕಿಯಲ್ಲಿ ತಾಳ್ಮೆ ಕಳೆದುಕೊಂಡು ಅಸಮರ್ಪಕ ಪದಗಳನ್ನು ಬಳಸಿದ್ದೇನೆ. ಇದು ನನ್ನ ತಪ್ಪು. ಇದಕ್ಕಾಗಿ ಸಿಬ್ಬಂದಿ ಹಾಗೂ ರೈತರಲ್ಲಿ ಕ್ಷಮೆ ಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಸೌಹಾರ್ದವಾಗಿ ಕಾರ್ಯನಿರ್ವಹಿಸುವುದಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತರಾದ ಬಸಲಾಪುರ ಕೆಂಪಯ್ಯ, ಮುತ್ತುರಾಜು, ಭುವನಹಳ್ಳಿ ಲೋಕೇಶ್, ಹೊನ್ನೂರಯ್ಯ, ಜವರೇಗೌಡ, ಕುಮಾರ್ ಇತರರು ಇದ್ದರು.