ಶಾಂತಿಪುರದ ಹೊಗೆಸೊಪ್ಪು ಹರಾಜು ಪ್ರಾಂಗಣದಲ್ಲಿ ಖರೀದಿದಾರರನ್ನು ರೈತರು ಕೂಡಿಹಾಕಿ ಆಕ್ರೋಶ ವ್ಯಕ್ತಪಡಿಸಿದರು. 
ಮೈಸೂರು

ಹೊಗೆಸೊಪ್ಪು ಖರೀದಿದಾರರನ್ನು ಕೂಡಿಹಾಕಿದ ರೈತರು

ಪ್ರಮುಖ ಮುಖ್ಯಾಂಶಗಳು

  • tobacco
ಎಚ್.ಡಿ.ಕೋಟೆ: ತಂಬಾಕು ಖರೀದಿದಾರರಿಂದ ಬೆಲೆ ತಾರತಮ್ಯವಾಗುತ್ತಿದೆ ಎಂದು ಆರೋಪಿಸಿ ರೈತರು ಹರಾಜು ಪ್ರಕ್ರಿಯೆ ತಡೆದು, ಹರಾಜು ಪ್ರಾಂಗಣದಲ್ಲಿ ಖರೀದಿದಾರರನ್ನು ಕೂಡಿ ಹಾಕಿದ ಘಟನೆ ಗುರುವಾರ ಶಾಂತಿಪುರ (ಹೆಬ್ಬಳ್ಳ) ತಂಬಾಕು ಹರಾಜು ಮಾರುಕಟ್ಟೆಯಲ್ಲಿ ನಡೆಯಿತು.
ಎಂದಿನಂತೆ ಗುರುವಾರ ತಂಬಾಕು ಹರಾಜು ಪ್ರಕ್ರಿಯೆ ಪ್ರಾರಂಭವಾಗಿ ಕೆಜಿ ಹೊಗೆಸೊಪ್ಪಿಗೆ ಐಟಿಸಿ ಕಂಪನಿಯವರಿಗೆ 250 ರೂ. ನಂತೆ ಸುಮಾರು ನೂರಕ್ಕೂ ಹೆಚ್ಚು ಹೊಗೆಸೊಪ್ಪು ಪಿಂಡಿಗಳು ಮಾರಾಟವಾದವು. ಹರಾಜಿನಲ್ಲಿ ಭಾಗವಹಿಸಿದ ಕೆಲವು ಖಾಸಗಿ ತಂಬಾಕು ಖರೀದಿದಾರರು ಒಂದು ಪಿಂಡಿಗೆ 150 ರೂ. ನಿಂದ 170 ರೂ. ಬೆಲೆ ನೀಡಲು ಮುಂದಾದರು. ಇದರಿಂದ ಕೆರಳಿದ ರೈತರು ಒಂದೇ ಗುಣಮಟ್ಟದ ಸೊಪ್ಪಿಗೆ ಒಂದು ಕಂಪನಿಯವರು ಉತ್ತಮ ದರ ನೀಡಿದರೆ, ಇನ್ನುಳಿದ ಕಂಪನಿಯವರು ಕಡಿಮೆ ಬೆಲೆಗೆ ಕೊಂಡುಕೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಖರೀದಿದಾರರು, ನಾವು ಬಲವಂತವಾಗಿ ಹೊಗೆಸೊಪ್ಪು ಖರೀದಿ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ನಮಗೆ ನಷ್ಟವಾದರೂ ರೈತರಿಗೆ ಅನುಕೂಲವಾಗಲಿ ಎಂದು ತಂಬಾಕು ಖರೀದಿ ಮಾಡುತ್ತಿದ್ದೇವೆ ಎಂದಾಗ ರೈತರು ಮತ್ತಷ್ಟು ಆಕ್ರೋಶಗೊಂಡು ಖರೀದಿದಾರರನ್ನು ಹರಾಜು ಪ್ರಾಂಗಣದಲ್ಲಿ ಕೂಡಿಹಾಕಿದ ಘಟನೆ ನಡೆಯಿತು.
ಮಾರುಕಟ್ಟೆ ಹರಾಜು ಅಧೀಕ್ಷಕ ವಿಜಯಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದೆ. ಇದರಿಂದ ಹೊಗೆಸೊಪ್ಪು ಬೆಳೆದ ರೈತರಿಗೂ ಸಮಸ್ಯೆಯಾಗಿದೆ. ಯುದ್ಧದ ಕಾರಣದಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ರೈತರು ಇದನ್ನೆಲ್ಲಾ ತಿಳಿದುಕೊಳ್ಳಬೇಕು ಎಂದು ಸಮಾಧಾನ ಪಡಿಸಲು ಮುಂದಾದಾಗ ಅವರ ವಿರುದ್ಧವೂ ರೈತರು ತಿರುಗಿಬಿದ್ದರು. ಆರ್‌ಎಂ ಅವರು ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದರು. ನಂತರ ಎಚ್.ಡಿ.ಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಂಗಾಧರ್ ಸ್ಥಳಕ್ಕೆ ಆಗಮಿಸಿ ಆರ್‌ಎಂ ಕರೆಸುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ಗಾಲ್ಫ್ ದೇಶಗಳಲ್ಲಿನ ಯುದ್ಧದ ಕಾರಣದಿಂದ ನಾವು ಈಗಾಗಲೇ ಖರೀದಿ ಮಾಡಿರುವ ಹೊಗೆಸೊಪ್ಪನ್ನು ರಫ್ತು ಮಾಡಲು ಆಗುತ್ತಿಲ್ಲ.ಹೀಗಾಗಿ ನಮಗೂ ಸಾಕಷ್ಟು ನಷ್ಟವಾಗಿದೆ. ನಾವು ನಷ್ಟ ಮಾಡಿಕೊಂಡು ಹೊಗೆಸೊಪ್ಪು ಖರೀದಿಸಲು ಸಾಧ್ಯವಿಲ್ಲ ಎನ್ನುವ ಮಾತು ತಂಬಾಕು ಖರೀದಿದಾರರಿಂದ ಕೇಳಿಬಂತು.