ಹಾಡಹಗಲೇ ಹುಲಿಯೊಂದು ತೋಟದಲ್ಲಿ ಓಡಾಡುತ್ತಿರುವುದು ಕಂಡುಬಂದಿದ್ದು 
ಮೈಸೂರು

ತೋಟದಲ್ಲಿ ಹುಲಿ ಕಂಡ ರೈತರು ಜಮೀನು ಬಿಟ್ಟು ದೌಡು

ಹನಗೋಡು ಹೋಬಳಿ ವಡ್ಡಂಬಾಳು ಗ್ರಾಮದಲ್ಲಿ ಹಾಡಹಗಲೇ ಪ್ರತ್ಯಕ್ಷ

ಹನಗೋಡು: ಹಾಡಹಗಲೇ ಹುಲಿಯೊಂದು ತೋಟದಲ್ಲಿ ಓಡಾಡುತ್ತಿರುವುದು ಕಂಡುಬಂದಿದ್ದು, ಈ ದೃಶ್ಯ ಕಂಡ ರೈತರು ಭಯಭೀತರಾಗಿ ಜಮೀನು ಬಿಟ್ಟು ಗ್ರಾಮಕ್ಕೆ ಓಡಿಬಂದ ಘಟನೆ ಗುರುವಾರ ನಡೆದಿದೆ.
ಹೋಬಳಿಯ ವಡ್ಡಂಬಾಳು ಗ್ರಾಮದಲ್ಲಿ ವಡ್ಡಂಬಾಳು ಗ್ರಾಮದ ಜಿನ್ನರಾಜು ಅವರಿಗೆ ಸೇರಿದ ತೋಟದಲ್ಲಿ ಹುಲಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ತೋಟದ ಸುತ್ತಮುತ್ತಲಿನ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರು ಹುಲಿಯನ್ನು ಕಂಡ ತಕ್ಷಣ ಕೆಲಸ ನಿಲ್ಲಿಸಿ ಗ್ರಾಮಕ್ಕೆ ತೆರಳಿದ್ದಾರೆ. ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹುಲಿಯನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿರುವ ಪ್ರತ್ಯಕ್ಷದರ್ಶಿ ಅಶ್ವತ್ಥ್ ಅವರು, ತೋಟದಲ್ಲಿ ಕಾಣಿಸಿಕೊಂಡ ಹುಲಿ ನಂತರ ಲಕ್ಷ್ಮಣ ತೀರ್ಥ ನದಿಯ ದಂಡೆಯಲ್ಲಿರುವ ಕುರುಚಲು ಪೊದೆಯೊಳಗೆ ಅಡಗಿದೆ ಎಂದು ತಿಳಿಸಿದ್ದಾರೆ.
ಹುಲಿ ಓಡಾಟದ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಲಿ ಹೆಜ್ಜೆ ಪತ್ತೆ: ಹನಗೋಡು ಗ್ರಾಮದ ಶಿವಣ್ಣ ಹಾಲನಾಯಕ ಅವರ ಜಮೀನಿನಲ್ಲಿ ನಿರ್ಮಾಣ ಹಂತದಲ್ಲಿರುವ ಅಜ್ಜಯ್ಯನ ಪೀಠ ದೇವಸ್ಥಾನದ ಮುಂಭಾಗ ಗುರುವಾರ ಮುಂಜಾನೆ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಈ ಸುದ್ದಿ ಹರಡುತ್ತಿದ್ದಂತೆಯೇ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಹುಲಿಯ ಚಲನವಲನ ಕಂಡುಬರುತ್ತಿದ್ದು, ಕೆಲ ದಿನಗಳವರೆಗೆ ನಿಟ್ಟುಸಿರು ಬಿಟ್ಟಿದ್ದ ಜನತೆಗೆ ಮತ್ತೆ ಹುಲಿಯ ಪ್ರತ್ಯಕ್ಷತೆ ಹಾಗೂ ಹೆಜ್ಜೆ ಗುರುತುಗಳು ಹೊಸದಾಗಿ ಭಯ ಹುಟ್ಟಿಸಿವೆ. ವಿಶೇಷವಾಗಿ ವಡ್ಡಂಬಾಳು, ಕೂಡ್ಲೂರು, ಹನಗೋಡು, ಶೆಟ್ಟಹಳ್ಳಿ, ಕಚುವಿನಹಳ್ಳಿ, ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಜಮೀನಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.