ಕಬಿನಿ ನಾಲೆ, ಕೆರೆ ಕಟ್ಟೆಗಳಿಗೆ ನೀರು ಬಿಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ ನಗರದ ಕಾಡಾ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕೆರೆಹುಂಡಿ ರಾಜಣ್ಣ, ವಳಗೆರೆ ಗಣೇಶ್, ಎಚ್.ಗುಂಡ್ಲ, ಚಿದಂಬರ, ಗಣೇಶ್, ಮುದ್ದಹಳ್ಳಿ ಮಧು, ಸುಜ್ಜಲೂರು ಜಯಸ್ವಾಮಿ, ಬಿದರಳ್ಳಿ ಮಾದಪ್ಪ ಇತರರು ಇದ್ದರು.
- ಹುಲ್ಲಹಳ್ಳಿ ರಾಂಪುರ ನಾಲೆಗಳಿಗೆ ನೀರು ಬಿಡುವಲ್ಲಿ ಸರ್ಕಾರ ವಿಫಲವಾಗಿದೆ
- ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ವೃದ್ಧಿಗೆ ಅನುಕೂಲ
ಮೈಸೂರು:ಕಬಿನಿ ನಾಲೆ, ಕೆರೆ-ಕಟ್ಟೆಗಳಿಗೆ ನೀರು ಬಿಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದ ಕಾಡಾ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಕುವೆಂಪು ಉದ್ಯಾನದಿಂದ ಕಾಡಾ ಕಚೇರಿವರೆಗೆ ಮೆರವಣಿಗೆ ನಡೆಸಿ ಚುನಾಯಿತ ಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ನೀರಾವರಿ ಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ಮೈಸೂರು ಮತ್ತು ಚಾಮರಾಜನಗರ ಕಬಿನಿ ವ್ಯಾಪ್ತಿಯ ನಾಲೆಗಳಿಗೆ, ಹುಲ್ಲಹಳ್ಳಿ ರಾಂಪುರ ನಾಲೆಗಳಿಗೆ ನೀರು ಬಿಡುವಲ್ಲಿ ಸರ್ಕಾರ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಮುಖ್ಯಮಂತ್ರಿಗಳ ಹಿಂಬಾಲಕರಾಗಿ ತಿರುಗಾಡಲು ಪ್ರಾರಂಭವಾಗಿದ್ದು, ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ಗಮನಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನೀರನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಇಲ್ಲಿಯ ಚುನಾಯಿತ ಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿ ರೈತರನ್ನು ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವಲ್ಲಿ ವಿಫಲರಾಗಿದ್ದು, ಅಂತರ್ಜಲ ಕುಸಿತದ ಪರಿಣಾಮ ಕಂಗಾಲಾಗಿದ್ದಾರೆ. ತೆಂಗು, ಬಾಳೆ, ಕಬ್ಬು ನಾಟಿ ಮಾಡಿದ್ದು ಈ ಬೆಳೆಗಳಿಗೆ ನೀರು ಇಲ್ಲದೆ ಒಣಗಿವೆ. ಇದರಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಕಬಿನಿ ಜಲಾಶಯದಲ್ಲಿ 74 ಅಡಿ ನೀರು ಸಂಗ್ರಹವಾಗಿದೆ. ಆದರೂ, ನೀರು ಬಿಡುವಲ್ಲಿ ಮೀನಮೇಷ ಎಣಿಸಲಾಗುತ್ತಿದೆ. ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ವೃದ್ಧಿಗೆ ಅನುಕೂಲವಾಗುತ್ತದೆ. ಆದರೆ, ಅಧಿಕಾರಿಗಳು ನೀರು ಎತ್ತುವ ಯಂತ್ರಗಳ ದುರಸ್ತಿ ಎಂದು ಹೇಳುತ್ತಾ ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವಲ್ಲಿ ಸಬೂಬು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ತಕ್ಷಣ ಅಧಿಕಾರಿಗಳು ಹೆಚ್ಚುವರಿ ಯಂತ್ರ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು. ಹೊಸ ಕೆರೆಗಳಿಗೆ ಹೆಚ್ಚುವರಿ ಯೋಜನೆಯನ್ನು ಪ್ರಕಟಣೆ ಮಾಡಲು ಈ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಈಗ ಕಾಮಗಾರಿ ಆರಂಭಗೊಂಡಿರುವ ಕಬಿನಿ ನಾಲೆ ದುರಸ್ತಿ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳ ಗುಣಮಟ್ಟ ಕಾಪಾಡಬೇಕು. ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಕೆರೆ-ಕಟ್ಟೆಗಳಿಗೆ ಮತ್ತು ನಾಲೆಗಳಿಗೆ ಒಂದು ವಾರದೊಳಗೆ ನೀರು ಬಿಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಕಾವೇರಿ ನೀರಾವರಿ ನಿಗಮದ (ದಕ್ಷಿಣ) ಮುಖ್ಯ ಇಂಜಿನಿಯರ್ ಮಂಜುನಾಥ್, ಫೆ.15ರಿಂದ ನಾಲೆಗಳಿಗೆ, ಕೆರೆಕಟ್ಟೆಗಳಿಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಸಂಘದ ಖಜಾಂಚಿ ಕೆರೆಹುಂಡಿ ರಾಜಣ್ಣ, ಜಿಲ್ಲಾಧ್ಯಕ್ಷ ವಳಗೆರೆ ಗಣೇಶ್, ಎಚ್.ಗುಂಡ್ಲ, ಚಿದಂಬರ, ಗಣೇಶ್, ಮುದ್ದಹಳ್ಳಿ ಮಧು, ಸುಜ್ಜಲೂರು ಜಯಸ್ವಾಮಿ, ಬಿದರಳ್ಳಿ ಮಾದಪ್ಪ, ದೇವಿರಮ್ಮನಹಳ್ಳಿ ಸಿದ್ದಬಸಪ್ಪ, ಶ್ರೀಕಂಠ ಸ್ವಾಮಿ, ದೇವಿರಮ್ಮನಹಳ್ಳಿ ಹುಂಡಿ ನವೀನ್, ಬಸವರಾಜು, ನಾಗರಾಜಪ್ಪ ಅಂಡುವಿನಹಳ್ಳಿ ಮಹೇಶ್, ಕುರಹಟ್ಟಿ ರಾಜೇಶ್, ಪುನೀತ್, ಕಸುವಿನಹಳ್ಳಿ ಗುರು, ಮೊಳಕುಂಡಿ ಸೋಮ ಇತರರಿದ್ದರು.