ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ ಉದ್ಘಾಟಿಸಿದರು. ಕೆ.ಎಸ್. ಶಿವಕುಮಾರ್, ಅಂಶಿ ಪ್ರಸನ್ನಕುಮಾರ್, ಕೆ.ಆರ್. ನಟರಾಜ, ಕೆ. ನಾಗರಾಜ ಹಾಗೂ ಇತರರು ಇದ್ದರು.
ಮೈಸೂರು: ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸಮರ್ಪಕವಾಗಿ ನೀರು ನಿರ್ವಹಣೆ ಬಗ್ಗೆ ಅರಿವು ಮೂಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ ಸಲಹೆ ನೀಡಿದರು.
ಕೃಷಿ ಇಲಾಖೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಸಾವಯವ ಕೃಷಿ ಸಂಶೋಧನಾ ಕೇಂದ್ರ ಮತ್ತು ವಿಸ್ತರಣಾ ಶಿಕ್ಷಣ ಘಟಕ, ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ನೈಸರ್ಗಿಕ ಕೃಷಿ ಕುರಿತು ರೈತರು ಮತ್ತು ವಿಜ್ಞಾನಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರ ಸ್ಥಿತಿಗತಿಗಳ ಬಗ್ಗೆ ಆಡಳಿತ ವರ್ಗ, ರಾಜಕಾರಣಿಗಳು, ಅಧಿಕಾರಿಗಳು ಗಮನಹರಿಸಬೇಕು. ಕೃಷಿ ಕ್ಷೇತ್ರದ ಸಮಸ್ಯೆಗಳು, ಯಾಂತ್ರೀಕರಣ ಮಾಡಲು ಬೇಕಾದ ಸವಲತ್ತು, ರೈತರ ಆರ್ಥಿಕ ಸಬಲತೆ, ಖರ್ಚು ಕಡಿಮೆ ಮಾಡಿ, ಆದಾಯ ಹೆಚ್ಚಿಸುವುದು, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಬೆಳಕು ಚೆಲ್ಲಬೇಕು ಎಂದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಸ್. ಶಿವಕುಮಾರ್ ಮಾತನಾಡಿ, ರೈತರು ಪ್ರತಿನಿತ್ಯ ಸಂಕಷ್ಟ ಎದುರಿಸುತ್ತಾರೆ. ಕೆಲವೊಮ್ಮೆ ಪ್ರಕೃತಿಯೇ ಅವರ ವಿರುದ್ಧ ಇರುತ್ತದೆ. ಬೆಳೆಗೆ ರೋಗಗಳು ಕೂಡ ಕಾಡುತ್ತವೆ. ಪರಿಸ್ಥಿತಿ ಈ ರೀತಿ ಇರುವಾಗ ಚೀನಾದಲ್ಲಿ ಇರುವಂತೆ ಸಹಕಾರಿ ಕೃಷಿ ವ್ಯವಸ್ಥೆ ಜಾರಿಗೆ ಬಂದಲ್ಲಿ ಅನುಕೂಲವಾಗಬಹುದು ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಹೈದರಬಾದ್‌ನ ಇಕ್ರಿಸ್ಯಾಟ್ ನಿವೃತ್ತ ಉಪ ಮಹಾನಿರ್ದೇಶಕ ಡಾ.ಸಿ.ಎಲ್. ಲಕ್ಷ್ಮೀಪತಿಗೌಡ, ರೈತರನ್ನು ಸಣ್ಣ ರೈತ, ದೊಡ್ಡ ರೈತ ಅನ್ನಬೇಡಿ. ಅನ್ನ ನೀಡುವವರೆಲ್ಲರೂ ರೈತರೇ. ಶೂನ್ಯ ಬಂಡವಾಳ ಕೃಷಿ, ಕಡಿಮೆ ಬಾಹ್ಯ ಹೂಡಿಕೆ ಕೃಷಿ, ಪುನರ್ ಉತ್ಪಾದಕ ಕೃಷಿ, ಸಾಂಪ್ರದಾಯಿಕ ಕೃಷಿ, ಪರಂಪರಾನುಗತ ಕೃಷಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಸುಸ್ಥಿರ ಕೃಷಿ, ಅಧುನಿ ಕೃಷಿ- ಹೀಗೆ ಬೇರೆ ಬೇರೆ ಹೆಸರುಗಳಿಂದ ಕೃಷಿಯನ್ನು ಗುರುತಿಸುತ್ತಿರುವುದನ್ನು ನೋಡಿದರೆ ತಲೆ ಸುತ್ತು ಬರುತ್ತದೆ. ಈ ಗೊಂದಲ ನಿವಾರಿಸಬೇಕು ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ಕೆ.ಆರ್. ನಟರಾಜ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ನಿರ್ದೇಶಕ ಕೆ. ನಾಗರಾಜ, ಆತ್ಮಾ ಯೋಜನೆ ಉಪ ನಿರ್ದೇಶಕ ಸಿ. ಸತೀಶ, ಧನಂಜಯ, ಕೃಷಿ ತಂತ್ರಜ್ಞರ ಸಂಸ್ಥೆ ಕಾರ್ಯದರ್ಶಿ ಕೆ.ಆರ್. ರವೀಂದ್ರ ಇದ್ದರು.