ಕೆ.ಆರ್.ನಗರದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ತಾಲೂಕು ರೈತ ವೇದಿಕೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ತಾಲೂಕು ಮಟ್ಟದ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಸಿ.ಎನ್.ಮಂಜೇಗೌಡ, ಇಂಗಲಕುಪ್ಪೆ ಕೃಷ್ಣೇಗೌಡ, ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಅರ್ಜುನಹಳ್ಳಿ ರಾಮಪ್ರಸಾದ್, ಶಿವರಾಮು, ಗರುಡಗಂಭ ಸ್ವಾಮಿ, ಸಿ.ಕೆ.ರವೀಂದ್ರ, ಎಂ.ಜೆ.ಕುಮಾರ್, ಕೆ.ಆರ್.ಜಿತೇಂದ್ರ, ಕನುಗನಹಳ್ಳಿ ವಿಶ್ವನಾಥ್, ಎಸ್.ಟಿ.ರವಿಕುಮಾರ್ ಇದ್ದರು. 
ಮೈಸೂರು

ರೈತ ದಿನಾಚರಣೆಗೆ ಒತ್ತಾಯಿಸಿ ಸಿಎಂಗೆ ಪತ್ರ

ಲಲಾಟಾಕ್ಷ ಎಸ್
ಕೆ.ಆರ್.ನಗರ: ಅನ್ನ ಕೊಡುವ ರೈತನಿಗೆ ಸರ್ಕಾರಗಳು ಸೌಲಭ್ಯಗಳನ್ನು ಕೊಡದೆ ವಂಚಿಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಭರವಸೆಗಳನ್ನು ನೀಡಿ ನಂತರ ಕೊಟ್ಟ ಮಾತನ್ನು ಮರೆಯುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ಪಟ್ಟಣದ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಗುರುವಾರ ತಾಲೂಕು ರೈತ ವೇದಿಕೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ತಾಲೂಕು ಮಟ್ಟದ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ದಿನಾಚರಣೆಗಳನ್ನು ಮಾಡುವ ಸರ್ಕಾರಗಳಿಗೆ ರೈತ ದಿನಾಚರಣೆಯನ್ನು ಮಾಡಲು ಮನಸ್ಸಿಲ್ಲ. ನಾನು ಸರ್ಕಾರವೇ ರೈತ ದಿನಾಚರಣೆಯನ್ನು ಆಚರಿಸುವಂತೆ ಹಾಗೂ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಜತೆಗೆ ಸದನದಲ್ಲಿ ಚರ್ಚಿಸುತ್ತೇನೆ. ಎಂದು ಭರವಸೆ ನೀಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೊಡುಗೆ ದೇಶದ ವಿವಿಧ ಭಾಗಗಳ ರೈತಾಪಿ ಜನಾಂಗಕ್ಕೆ ಅಪಾರವಾಗಿದೆ. ಅವರ ಅವಧಿಯಲ್ಲಿ ನೀರಾವರಿ ಸೌಲಭ್ಯಗಳು, ಕಾಲುವೆಗಳು ನಿರ್ಮಾಣವಾಗಿವೆ. ಕೆ.ಆರ್.ನಗರ ಕ್ಷೇತ್ರಕ್ಕೂ ಕೂಡ ನೀರಾವರಿ ಅನುಕೂಲ ಮಾಡಿಕೊಟ್ಟಿದ್ದಾರೆ. ರೈತರ ಶಕ್ತಿ ಹೆಚ್ಚಾಗಬೇಕಾದರೆ ರೈತರು ಸಂಘಟಿತರಾಗಿ ಹೋರಾಟ ಮಾಡಬೇಕು. ಪ್ರತಿ ಗ್ರಾಮದಲ್ಲೂ ರೈತ ಸಂಘಟನೆಗಳು ಹೆಚ್ಚೆಚ್ಚು ಸ್ಥಾಪಿತವಾಗಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘಟನೆ ಅಧ್ಯಕ್ಷ ಇಂಗಲಕುಪ್ಪೆ ಕೃಷ್ಣೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಿರುವುದೇ ಆಗಿದೆ. ಇಂತಹ ರೆಸಾರ್ಟ್‌ಗಳನ್ನು ಮುಚ್ಚಿಸಿದರೆ ವನ್ಯಜೀವಿಗಳು ಮತ್ತು ಮಾನವ ಸಂಘರ್ಷ ತಾನಾಗಿಯೇ ಕಡಿಮೆ ಆಗಲಿದೆ. ತಂಬಾಕಿಗೆ ಉತ್ತಮ ಬೆಲೆ ಇಲ್ಲ. ಇಂತಹ ಸಂದರ್ಭದಲ್ಲಿ ರೈತರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತಾದರೂ ಗೌರವ ಇದ್ದರೆ ರೈತರ ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸಿದರು.
ಬೇರೆ ಕಾರ್ಯಕ್ರಮಗಳಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ದಿನಾಚರಣೆಯನ್ನು ಕಡ್ಡಾಯವಾಗಿ ಮಾಡಬೇಕು. ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಜಾರಿಗೆ ತರಬೇಕು. ಇಡೀ ದೇಶಕ್ಕೆ ನಮ್ಮ ರಾಜ್ಯವೇ ಮಾದರಿಯಾಗಲಿ. ಕೆಲವರು ರೈತ ಸಂಘ ಮತ್ತು ಹಸಿರು ಶಾಲುಗಳನ್ನು ಬಂಡವಾಳ ಮಾಡಿಕೊಂಡು ಜಿ ಕೆಟಗರಿ ಸೈಟುಗಳು, ಮಕ್ಕಳಿಗೆ ಫಾರಿನ್ ವಿದ್ಯಾಭ್ಯಾಸ ಸೇರಿದಂತೆ ಬೆಳಗ್ಗೆ ಹೋರಾಟ ಮಾಡುವುದು ರಾತ್ರಿ ಹೋಗಿ ಕಾಲಿಗೆ ಬೀಳುವುದು ಇಂತಹ ಅಸಹ್ಯಕರ ಕೆಲಸಗಳನ್ನು ಮಾಡುತ್ತಿದ್ದಾರೆ. ಸರ್ಕಾರಕ್ಕೆ ನಾಮಿನಿಗಳಾದವರಿಂದ ರೈತರ ಹೋರಾಟಕ್ಕೆ ನ್ಯಾಯ ಕೊಡಿಸಲು ಹೇಗೆ ಸಾಧ್ಯ? ರೈತಪರ ಸರ್ಕಾರಗಳನ್ನು ತರಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದರು.
ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮು, ಸ್ವರಾಜ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ಗರುಡಗಂಭ ಸ್ವಾಮಿ, ರೈತ ಮುಖಂಡ ಸಿ.ಕೆ.ರವೀಂದ್ರ, ಕರ್ನಾಟಕ ರಾಜ್ಯ ರೈತ ಪರ್ವ ಸಂಘದ ಗೌರವಾಧ್ಯಕ್ಣ ಎಂ.ಜೆ.ಕುಮಾರ್, ಯುವ ರೈತ ವೇದಿಕೆ ಕನುಗನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಕೆ.ಆರ್.ಜಿತೇಂದ್ರ, ಪ್ರಗತಿಪರ ರೈತರಾದ ಕನುಗನಹಳ್ಳಿ ವಿಶ್ವನಾಥ್, ಅರುಣ್, ಜೆಡಿಎಸ್ ರೈತ ಘಟಕದ ಅಧ್ಯಕ್ಷ ಜಿ.ಪಿ.ಮಂಜು, ರೈತ ಮುಖಂಡರಾದ ಸಂಪತ್, ಚೇತನ್, ಮಂಚನಾಯಕ, ಬಾಲೂರು ನಾಗೇಂದ್ರ, ದಾಮೋದರ್, ಪತ್ರಕರ್ತ ಎಸ್.ಟಿ.ರವಿಕುಮಾರ್, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ತಾಲೂಕು ಯುವ ರೈತ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿ ರಾಮಪ್ರಸಾದ್ ಇದ್ದರು.