ಎಚ್.ಡಿ. ಕೋಟೆಯ ಕೊಲ್ಲೇಗೌಡನಹಳ್ಳಿಯಲ್ಲಿ ರೈತ ರಾಚಪ್ಪ ಬೆಳೆದಿರುವ ಚಿಯಾ ಬೆಳೆ
ಮೈಸೂರು: ದಕ್ಷಿಣ ಮತ್ತು ಉತ್ತರ ಅಮೆರಿಕಾದ ಮೆಕ್ಸಿಕೋ ಮತ್ತು ಗ್ವಾಟೆಮಾಲಾ ಮೂಲದ ಚಿಯಾ ಬೀಜವನ್ನು ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯ ಕೊಲ್ಲೇಗೌಡನಹಳ್ಳಿಯ ರೈತ ರಾಚಪ್ಪ ಬೆಳೆಯುವ ಮೂಲಕ ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ.
ಚಿಯಾ ಬೀಜಗಳು ಪುದೀನಾ ಕುಟುಂಬಕ್ಕೆ ಸೇರಿದ ಸಸ್ಯವಾಗಿದ್ದು, ಸಣ್ಣ ಗಾತ್ರದ ಕಪ್ಪು ಅಥವಾ ಬಿಳಿ ಬೀಜ ಹೊಂದಿರುತ್ತದೆ. ಒಮೆಗಾ-3 ಫ್ಯಾಟಿ ಆಮ್ಲಗಳು, ನಾರಿನಾಂಶ, ಪ್ರೋಟೀನ್ ಹಾಗೂ ಖನಿಜಗಳಿಂದ ಸಮೃದ್ಧವಾಗಿರುವ ಈ ಬೀಜವನ್ನು ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯದ ದೃಷ್ಟಿಯಿಂದ ಹೆಚ್ಚಾಗಿ ಸೇವಿಸುತ್ತಿರುವ ಹಿನ್ನೆಲೆಯಲ್ಲಿ ಚಿಯಾ ಬೀಜಕ್ಕೆ ಉತ್ತಮ ಬೇಡಿಕೆ ಬಂದಿದೆ.
ರಾಚಪ್ಪ ಒಟ್ಟು 12 ಎಕರೆ ಜಮೀನು ಹೊಂದಿದ್ದು, ಈ ಪೈಕಿ 8 ಎಕರೆಯಲ್ಲಿ ಚಿಯಾ ಬೆಳೆದಿದ್ದಾರೆ. ಒಂದು ಎಕರೆಯಲ್ಲಿ ಸರಾಸರಿ 4 ಕ್ವಿಂಟಾಲ್ ಬೆಳೆ ದೊರೆಯುತ್ತದೆ. ಪ್ರಸ್ತುತ ಕ್ವಿಂಟಾಲ್‌ಗೆ 21 ಸಾವಿರ ರೂ. ಇದೆ. ಒಂದು ಬಾರಿ ಇದರ ಬೆಲೆ ಕ್ವಿಂಟಾಲ್‌ಗೆ 31 ಸಾವಿರ ರೂ.ವರೆಗೂ ಏರಿಕೆಯಾಗಿತ್ತು. ಈ ಬೆಳೆಯ ನಿರ್ವಹಣೆಗೆ ಖರ್ಚು ಕಡಿಮೆ ಇರುವ ಹಿನ್ನೆಲೆಯಲ್ಲಿ ಕ್ವಿಂಟಾಲ್‌ಗೆ 20 ಸಾವಿರ ರೂ. ಸಿಕ್ಕರೂ ನಷ್ಟವೇನು ಆಗುವುದಿಲ್ಲ ಅನ್ನುತ್ತಾರೆ ರಾಚಪ್ಪ.
ಎಚ್.ಡಿ. ಕೋಟೆ ತಾಲೂಕು ಸುತ್ತಮುತ್ತ ಅರಣ್ಯ ಪ್ರದೇಶ ಇರುವ ಹಿನ್ನೆಲೆಯಲ್ಲಿ ವನ್ಯಜೀವಿಗಳ ಉಪಟಳ ಹೆಚ್ಚಾಗಿದ್ದು, ವನ್ಯಜೀವಿಗಳು ಆಗಿಂದಾಗೆ ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆಗಳನ್ನು ನಾಶ ಮಾಡುತ್ತವೆ. ಆದರೆ, ಈ ಚಿಯಾ ಬೆಳೆಯನ್ನು ಯಾವುದೇ ವನ್ಯಜೀವಿಗಳಾಗಲಿ ಅಥವಾ ಹಸು, ಕುರಿಗಳು ತಿನ್ನುವುದಿಲ್ಲ. ಹೀಗಾಗಿ ಬೆಳೆ ಸಂರಕ್ಷಣೆ ಮಾಡುವ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ದಶಕದ ಹಿಂದೆ ಮಾರುಕಟ್ಟೆ ಸಮಸ್ಯೆ ಕಂಡು ಬಂದಿತ್ತು. ಆದರೆ, ಇದೀಗ ಚಿಯಾ ಬಳಕೆದಾರರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮೈಸೂರು ಎಪಿಎಂಸಿ ಸೇರಿದಂತೆ ವಿವಿಧ ಕಡೆಗಳಲ್ಲಿ ಉತ್ತಮ ಮಾರುಕಟ್ಟೆ ದೊರೆಯುತ್ತಿದೆ. ಅಲ್ಲದೆ, ವರ್ತಕರು ನೇರವಾಗಿ ರೈತರ ಹೊಲಕ್ಕೆ ಬಂದು ಬೆಳೆಯನ್ನು ಖರೀದಿಸುತ್ತಾರೆ. ಬೆಳೆ ಕಟಾವಿಗೂ ಇದೀಗ ಯಂತ್ರ ಬಂದಿದ್ದು, ಎಕರೆಗೆ 4 ಸಾವಿರ ರೂ. ನೀಡಿದರೆ ಸಾಕು. ಒಂದು ಬಾರಿ ಬೆಳೆ ಬೆಳೆದು ಅಲ್ಪ ಪ್ರಮಾಣದ ರಸಗೊಬ್ಬರ ಹಾಗೂ ಸಾವಯಯವ ಗೊಬ್ಬರ ಹಾಗೂ ಸಮರ್ಪಕವಾಗಿ ನೀರು ಪೂರೈಕೆ ಮಾಡಿದರೆ ಸಮೃದ್ಧ ಬೆಳೆಯನ್ನು ಪಡೆಯಬಹುದು ಎಂಬುದು ರಾಚಪ್ಪ ಅವರ ಅನುಭವದ ಮಾತು.