ಸರಗೂರು ತಾಲೂಕಿನ ಬಿ.ಮಟಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಯಲ್ಲಿ ಮೃತಪಟ್ಟ ಮಾದ ಅವರ ಪತ್ನಿಗೆ ಪರಿಹಾರದ ಚೆಕ್ ಅನ್ನು ಅಧಿಕಾರಿಗಳು ನೀಡಿದರು. 
ಮೈಸೂರು

ಮಲ ವಿಸರ್ಜನೆಗೆ ತೆರಳಿದ್ದ ಡಾನೆ ದಾಳಿಗೆ ರೈತ ಬಲಿ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಸರಗೂರು: ತಾಲೂಕಿನ ಬಿ. ಮಟಕರೆ ಎಸ್ಟಿ ಕಾಲನಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಕಾಡಾನೆ ದಾಳಿಗೆ ರೈತರೊಬ್ಬರು ಮೃತಪಟ್ಟಿದ್ದಾರೆ. 
ಗ್ರಾಮದ ಮಾದ (75) ಮೃತರು. ಬಿ.ಮಟಕರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಳೆಯೂರು ವಲಯದ ಎಸ್ಟಿ ಕಾಲನಿ ಗ್ರಾಮದಲ್ಲಿ ಮಲವಿಸರ್ಜನೆಗೆ ತಮ್ಮ ಜಮೀನಿನ ಕಡೆ ಹೋಗುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿ, ತುಳಿದು ಹಾಕಿದೆ. ಮಾದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸಾಕಷ್ಟು ಹೊತ್ತಾದರೂ ಮಾದ ಅವರು ಮನೆಗೆ ಬಾರದಿದ್ದರಿಂದ ಅವರ ಮೊಬೈಲ್‌ಗೆ ಕಾಲ್ ಮಾಡಿದ್ದಾರೆ. ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕುಟುಂಬದವರು ಜಮೀನಿಗೆ ಹುಡುಕಿಕೊಂಡು ಹೋಗಿದ್ದಾರೆ. ಆಗ ಬಂಡೀಪುರ ಗ್ಯಾಸ್ ಗೋಡೌನ್ ಪಕ್ಕದ ರಸ್ತೆಯ ಬಳಿ ಮಾದ ಅವರ ಮೃತದೇಹ ಕಂಡುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 
ಪೊಲೀಸರು, ಅರಣ್ಯ ಇಲಾಖೆಯ ಎಸಿಎಫ್ ಪ್ರಭಾಕರನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಜನರನ್ನು ಸಮಾಧಾನಪಡಿಸಲು ಮುಂದಾದರು.
ಸಿಸಿಎಫ್ ಪ್ರಭಾಕರನ್ ಮಾತನಾಡಿ, ಮುಂದೆ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಗುಂಡಿ ಹಾಗೂ ಬ್ಯಾರಿಕೇಡ್ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ಸರಿ ಮಾಡಲಾಗುವುದು. ಮಾದ ಅವರ ಪತ್ನಿಗೆ ಐದು ವರ್ಷ ಮಾಸಾಶನ, ಕುಟುಂಬದವರಿಗೆ ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿದ ಅವರು, 20 ಲಕ್ಷ ರೂ. ಪರಿಹಾರದ ಚೆಕ್ ಅನ್ನು ನೀಡಿದರು.
ಮೃತನ ಪತ್ನಿಗೆ ಪ್ರತಿ ತಿಂಗಳು ಮಾಸಿಕ 4 ಸಾವಿರ ರೂ. ಮಾಸಾಶನ ನೀಡಲು ದಾಖಲೆಗಳನ್ನು ಸ್ಥಳದಲ್ಲೇ ಅಧಿಕಾರಿಗಳು ಸಿದ್ಧಪಡಿಸಿದರು. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತದೇಹ ನೀಡಲಾಯಿತು.