ಎಚ್.ಡಿ.ಕೋಟೆ ತಾಲೂಕು ಚಕ್ಕೋಡನಹಳ್ಳಿ ಗ್ರಾಮದ ಬಳಿ ವ್ಯಕ್ತಿ ಮೇಲೆ ದಾಳಿ ಮಾಡಿದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅರಿವಳಿಕೆ ನೀಡಿ ಸೆರೆ ಹಿಡಿದಿರುವುದು. 
ಮೈಸೂರು

ಕರಡಿ ದಾಳಿಯಿಂದ ರೈತನಿಗೆ ಗಾಯ

ಎಚ್.ಡಿ.ಕೋಟೆ: ತಾಲೂಕಿನ ನಾಗರಹೊಳೆ ಅರಣ್ಯ ಪ್ರದೇಶದ ವೀರನಹೊಸಹಳ್ಳಿ ವ್ಯಾಪ್ತಿಯ ಚಾಕಹಳ್ಳಿ-ಚಕ್ಕೋಡನಹಳ್ಳಿ ಗ್ರಾಮದ ಬಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದೆ ಗಾಯಗೊಳಿಸಿದೆ.
ಚಕ್ಕೋಡನಹಳ್ಳಿ ಗ್ರಾಮದ ಶಿವಪ್ಪ ಗಾಯಗೊಂಡವರು. ಗುರುವಾರ ಮಧ್ಯಾಹ್ನ ಜಮೀನಿನಲ್ಲಿ ಕೆಲಸ ಮಾಡುವಾಗ ಕರಡಿಯೊಂದು ಏಕಾಏಕಿ ದಾಳಿ ಮಾಡಿದೆ. ಗಾಬರಿಗೊಂಡ ರೈತ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದಲ್ಲಿದ್ದ ರೈತರು ಕೂಗಾಡಿದಾಗ ಕರಡಿ ಸ್ಥಳದಿಂದ ಓಡಿ ಹೋಗಿದೆ. ಶಿವಪ್ಪ ಅವರ ಕುತ್ತಿಗೆ ಮತ್ತು ಭುಜಕ್ಕೆ ಗಾಯವಾಗಿದ್ದು, ಸ್ಥಳೀಯರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು.
ರೈತರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಕರಡಿ ಇರುವ ಸ್ಥಳ ಪತ್ತೆ ಮಾಡಿದರು. ಮೇಲಧಿಕಾರಿಗಳ ಮಾರ್ಗದರ್ಶನದಂತೆ ಪಶುವೈದ್ಯ ಡಾ.ರಮೇಶ್ ಕರಡಿಗೆ ಅರಿವಳಿಕೆ ನೀಡಿದ ನಂತರ ಸೆರೆ ಹಿಡಿದರು.
20 ವರ್ಷದ ಹೆಣ್ಣು ಕರಡಿಯಾಗಿದ್ದು ಆರೋಗ್ಯವಾಗಿದೆ. ಮೇಲಧಿಕಾರಿಗಳ ಮಾರ್ಗದರ್ಶನದಂತೆ ಮರಳಿ ಕಾಡಿಗೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಳಿಗೊಳಗಾದ ರೈತನಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ತಿಳಿಸಿದ್ದಾರೆ.