ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪ್ರಾಧ್ಯಾಪಕ ಡಾ.ಸಿ.ಕೆ.ಪುಟ್ಟಸ್ವಾಮಿ ದಂಪತಿಯನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಪ್ರೊ.ಎನ್.ಉಷಾರಾಣಿ, ಪ್ರೊ.ಕೆ.ಜೆ.ಜೋಸೆಫ್, ಪ್ರೊ.ನಿರಂಜನ ವಾನಳ್ಳಿ, ಪ್ರೊ.ಎಂ.ಎಸ್.ಸಪ್ನಾ, ಪ್ರೊ.ಎನ್. ಮಮತಾ ಇನ್ನಿತರರಿದ್ದರು.
- ನಿವೃತ್ತ ಪ್ರಾಧ್ಯಾಪಕರು, ಶಿಷ್ಯರಿಂದ ಶುಭ ಹಾರೆಕೆ
ಮೈಸೂರು: ವಿದ್ಯಾರ್ಥಿ ಸ್ನೇಹಿ, ಉತ್ತಮ ಪ್ರಾಧ್ಯಾಪಕರೆಂದೇ ಹೆಸರು ಮಾಡಿದ್ದ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ಕೆ.ಪುಟ್ಟಸ್ವಾಮಿ ಅವರು ನಿವೃತ್ತಿಯಾದ ಹಿನ್ನೆಲೆಯಲ್ಲಿ ಅಭಿನಂದಿಸಿ ಬೀಳ್ಕೊಡಲಾಯಿತು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರು, ಹಾಲಿ ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಪ್ರೊ.ಪುಟ್ಟಸ್ವಾಮಿ ಅವರನ್ನು ಅಭಿನಂದಿಸಿದರು.
ಈ ವೇಳೆ ಮಾತನಾಡಿದ ನಿವೃತ್ತ ಪ್ರಾಧ್ಯಾಪಕಿ ಡಾ.ಎನ್.ಉಷಾರಾಣಿ, ಪುಟ್ಟಸ್ವಾಮಿ ನನ್ನ ವಿದ್ಯಾರ್ಥಿಯಾಗಿದ್ದು, ನನ್ನ ಬಳಿಯೇ ಪಿಎಚ್.ಡಿ ಸಂಶೋಧನೆ ನಡೆಸಿ ಉತ್ತಮ ಪ್ರಬಂಧ ಮಂಡನೆ ಮಾಡಿದರು. ಬಡ ಕುಟುಂಬದಲ್ಲಿ ಬೆಳೆದುಬಂದ ಅವರು, ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ, ಪರಿಶ್ರಮ ಮೈಗೂಡಿಸಿಕೊಂಡಿದ್ದರಿಂದಲೇ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನೇಮಕವಾಗಲು ಸಾಧ್ಯವಾಯಿತು ಎಂದರು.
ಗೌರವಯುತವಾಗಿ ನಡೆದುಕೊಂಡ ಪ್ರಾಧ್ಯಾಪಕ. ನಾವು ಏನೇ ಕೆಲಸ ವಹಿಸಿದರೂ ಜವಾಬ್ದಾರಿ ತೆಗೆದುಕೊಂಡು ಮಾಡುತ್ತಿದ್ದರು. ರಾಜ್ಯ ಸಣ್ಣ ಪತ್ರಿಕೆಗಳ ಕುರಿತಾದ ಅವರ ಸಂಶೋಧನಾ ಗ್ರಂಥದ ದತ್ತಾಂಶ ಇಂದಿಗೂ ಅನ್ವಯಿಸಲಿದ್ದು, ಅದನ್ನು ಪುಸ್ತಕವಾಗಿ ಪ್ರಕಟಿಸಿದರೆ ಸೂಕ್ತ ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕ ಡಾ.ನಿರಂಜನ ವಾನಳ್ಳಿ ಮಾತನಾಡಿ, ಅಧ್ಯಾಪಕ ಎಷ್ಟೇ ಚೆನ್ನಾಗಿ ಪಾಠ ಮಾಡಿದರೂ ಅತ್ಯುತ್ತಮ ಪ್ರಾಧ್ಯಾಪಕನಾಗಲು ಸಾಧ್ಯವಿಲ್ಲ. ಬದಲಿಗೆ ವ್ಯಕ್ತಿತ್ವದಲ್ಲಿ ಮಾದರಿಯಾಗಿ ಬದಕಬೇಕು. ವಿದ್ಯಾರ್ಥಿಗಳೊಂದಿಗೆ ಉತ್ತಮ ಒಡನಾಡಿಯಾಗಿ ಅವರ ಕಷ್ಟ ಅರಿವು ಹೊಂದಿರಬೇಕು. ಈ ಸಾಲಿನಲ್ಲಿ ಪುಟ್ಟಸ್ವಾಮಿ ನಿಲ್ಲುತ್ತಾರೆ ಎಂದು ಹೇಳಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪುಟ್ಟಸ್ವಾಮಿ ಅವರು ಮಿತ ಭಾಷಿಯಾಗಿದ್ದು, ಒಳ್ಳೆಯ ಅಧ್ಯಾಪಕರಾಗಿದ್ದರು. ಅವರ ಮನೆಯ ಸ್ಥಿತಿಯ ಜತೆಗೆ ಮನಸ್ಥಿತಿ ಉತ್ತಮವಾಗಿದ್ದರಿಂದ ಒಳ್ಳೆಯ ಪ್ರಾಧ್ಯಾಪಕರಾಗಿ ರೂಪುಗೊಳ್ಳಲು ಕಾರಣವಾಗಿದೆ ಎಂದರು.
ವಿಭಾಗದ ಮುಖ್ಯಸ್ಥೆ ಪ್ರೊ.ಎನ್.ಮಮತಾ, ಪ್ರಾಧ್ಯಾಪಕಿ ಡಾ.ಎಂ.ಎಸ್. ಸಪ್ನಾ, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಜೆ. ಜೋಸೆಫ್, ಪ್ರೊ.ಸಿ. ರಾಮಸ್ವಾಮಿ, ಡಾ.ಬಿ.ಎಸ್.ಚನ್ನಕೇಶವಮೂರ್ತಿ, ಶೈಲಶ್ರೀ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು, ಸಂಶೋಧಕರು, ಹಿರಿಯ ವಿದ್ಯಾರ್ಥಿಗಳು, ಸಿಬ್ಬಂದಿ, ಇಎಂಎಂಆರ್‌ಸಿ ನಿರ್ದೇಶಕರು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.