ಸುತ್ತೂರು ಜಾತ್ರೆ 
ಮೈಸೂರು

ಜಾತ್ರೆಗಳು ನಾಡಿನ ಪರಂಪರೆಯ ಪ್ರತೀಕ

ಪ್ರಮುಖ ಮುಖ್ಯಾಂಶಗಳು

  • ಸಂಸದ ಜಗದೀಶ್ ಎಸ್.ಶೆಟ್ಟರ್ ಬಣ್ಣನೆ
  • ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ
  • ಕೃಷಿ ಮೇಳ, ವಸ್ತುಪ್ರದರ್ಶನ, ಸಾಂಸ್ಕೃತಿಕ ಮೇಳ ಕಾರ್ಯಕ್ರಮ
ಮೈಸೂರು: ಜಾತ್ರಾ ಮಹೋತ್ಸವಗಳು ನಾಡಿನ ಸಾಂಸ್ಕೃತಿಕ, ಪರಂಪರೆಯ ಪ್ರತೀಕ ಎಂದು ಸಂಸದ ಜಗದೀಶ್ ಎಸ್.ಶೆಟ್ಟರ್ ಹೇಳಿದರು.
ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಕ್ಷೇತ್ರ ಸುತ್ತೂರಿನಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಕೃಷಿ ಮೇಳ, ವಸ್ತುಪ್ರದರ್ಶನ, ಸಾಂಸ್ಕೃತಿಕ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾವಿರಾರು ವರ್ಷಗಳಿಂದ ನಡೆದುಬಂದಿರುವ ಜಾತ್ರೆಗಳು ವೈಶಿಷ್ಟಪೂರ್ಣ. ಆಧುನಿಕ ಯುಗದಲ್ಲೂ ಇದು ಪರಂಪರೆ, ಸಾಂಸ್ಕೃತಿಕತೆಯನ್ನು ಪ್ರತಿಬಿಂಬಿಸುತ್ತದೆ. ಜಾತ್ರೆಗಳನ್ನು ನೋಡಿದಾಗ ಇದನ್ನು ಇನ್ನೂ ಮರೆತಿಲ್ಲ ಎಂಬುದು ವ್ಯಕ್ತವಾಗುತ್ತದೆ ಎಂದರು.
ಶ್ರೀಮಠದಿಂದ ನೈತಿಕ ಶಕ್ತಿ ಈ ಸಮಾಜಕ್ಕೆ ಸಿಕ್ಕಿದೆ. ಧರ್ಮದ ಜಾಗೃತಿಯೂ ಆಗುತ್ತಿದೆ. ಆಧುನಿಕ ಜಗತ್ತಿನಲ್ಲಿ ವೈಜ್ಞಾನಿಕ ವ್ಯವಸ್ಥೆ ಬಂದರೂ, ಈ ಸಂಸ್ಕೃತಿ, ಪರಂಪರೆ ಇನ್ನೂ ಮುಂದುವರಿದಿರುವುದು ಹೆಮ್ಮೆಯ ವಿಷಯ. ಅದಕ್ಕೆ  ಜಾತ್ರೆಗಳೇ ಸಾಕ್ಷಿ ಎಂದರು.
ಧಾರ್ಮಿಕ ಕಾರ್ಯಗಳಿಂದ ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ. ಸಮಾಜದಲ್ಲಿ ಭಯದ ವಾತಾವರಣ ಇರಬಾರದು. ಆದರೀಗ ಜಗತ್ತಿನ ಪರಿಸ್ಥಿತಿ ನೋಡಿದರೆ ಜನರು ನೆಮ್ಮದಿಯ ಬದುಕು ನಡೆಸುತ್ತಿಲ್ಲ.
 ರಷ್ಯಾ-ಯೂಕ್ರೇನ್ ಯುದ್ಧ, ಅಮೆರಿಕ-ವೆನೆಜುವೆಲಾ ನಡುವಿನ ಸಂಘರ್ಷ ಹೀಗೆ ಹಲವೆಡೆ ಶಾಂತಿಯತೆಯೇ ಇಲ್ಲ. ಇಡೀ ಜಗತ್ತು ಇಂದು ಭಾರತದ ಕಡೆ ನೋಡುತ್ತಿದೆ. ಭಾರತ ವಿಶ್ವಗುರು ಎನಿಸಿದೆ. ಇಂತಹ ಸಂದರ್ಭದಲ್ಲಿ ಆಮದು ಸುಂಕ ಸೇರಿದಂತೆ ವಿವಿಧ ವಿಷಯದಲ್ಲಿ ಅಮೆರಿಕವು ಭಾರತಕ್ಕೆ ಬೆದರಿಕೆ ಹಾಕುತ್ತಿದೆ. ಆದರೆ ಅದಕ್ಕೆ ನಮ್ಮ ದೇಶ ಹೆದರುವುದಿಲ್ಲ ಎಂದರು.
ಮೊಬೈಲ್ ಹಾವಳಿಯಿಂದ ಮನಸ್ಸು ಮಲೀನಗೊಂಡಿದೆ. ಮಕ್ಕಳು ಅದರಿಂದ ದೂರ ಇರಬೇಕು. ಇದರಿಂದಾಗಿ ಕ್ಲೇಷ ಕಡಿಮೆ ಆಗಲಿದೆ. ಮಕ್ಕಳನ್ನು ಮೊಬೈಲ್ ಹಾಗೂ ಟಿವಿಯಿಂದ ದೂರ ಇಡುವ ಕೆಲಸ ಆಗಬೇಕು. ಬೆಳಗಾವಿಯ ಜಿಲ್ಲೆಯ ಹಲಗಾ ಗ್ರಾಮದಲ್ಲಿ ಪ್ರತಿ ದಿನ ಸಂಜೆ 6ರಿಂದ ರಾತ್ರಿ 8ರ ವರೆಗೆ ಮೊಬೈಲ್, ಟಿವಿ ಬಳಕೆ ನಿಷೇಧಿಸಿರುವ ಉಪಯುಕ್ತ ಕ್ರಮ ಎಲ್ಲೆಡೆ ಅನುಷ್ಠಾನಕ್ಕೆ ಬರಬೇಕು. ಈ ಕುರಿತು ಜಾಗೃತಿ ಮೂಡಬೇಕಿದೆ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ದೇಶದ ಸುಸ್ಥಿರ ಪ್ರಗತಿಗೆ ಆಧುನಿಕ ಆಲೋಚನೆಯೊಂದಿಗೆ ಆಧ್ಯಾತ್ಮಿಕ ಚಿಂತನೆ ಅಗತ್ಯವೂ ಇದೆ ಎಂದರು.
ತಂತ್ರಜ್ಞಾನದಿಂದ ಬಹಳಷ್ಟು ಬದಲಾವಣೆಯಾದರೂ ಆಧ್ಯಾತ್ಮಿಕತೆಯನ್ನು ಮರೆಯಬಾರದು. ಜಾತ್ರಾ ಮಹೋತ್ಸವಗಳನ್ನು ನೋಡಿದಾಗ ಇದು ನೆನಪಾಗುತ್ತದೆ ಎಂದರು.
 ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಪ್ಪಿನಬೆಟಗೇರಿಯ ಮೂರು ಸಾವಿರ ವಿರಕ್ತಮಠದ ಶ್ರೀ ಕುಮಾರ ವಿರುಪಾಕ್ಷ ಸ್ವಾಮೀಜಿ, ಅಮೀನಗಡದ ಪ್ರಭುಶಂಕರಮಠದ ಶ್ರೀ ಶಂಕರರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಬೇಲೂರಿನ ಎಚ್.ಕೆ.ಸುರೇಶ್, ಚಿಕ್ಕಮಗಳೂರಿನ ಎಚ್.ಡಿ.ತಮ್ಮಯ್ಯ, ತಮಿಳುನಾಡಿನ ಭವಾನಸಾಗರದ ಶಾಸಕ ಎ.ಬಣ್ಣಾರಿ, ಎಂಎಲ್‌ಸಿ ಕೆ.ಶಿವಕುಮಾರ್, ಜಿಪಂ ಸಿಇಒ ಎಸ್.ಯಕೇಶ್ ಕುಮಾರ್ ಇತರರಿದ್ದರು.