ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 
ಮೈಸೂರು

ಕೆಎಸ್ಒಯುಗೆ ಸತ್ಯ ಶೋಧನಾ ಸಮಿತಿ ಭೇಟಿ: ಹೇಳಿಕೆ ದಾಖಲಿಸಲು ಅವಕಾಶ

ಪ್ರಮುಖ ಮುಖ್ಯಾಂಶಗಳು

  • ಕರಾಮುವಿ ಭ್ರಷ್ಟಾಚಾರದ ಕುರಿತು ತನಿಖೆ
  • ನಿವೃತ್ತ ನ್ಯಾ.ಬಿ.ಎ.ಪಾಟೀಲ್ ನೇತೃತ್ವದ ಸತ್ಯ ಶೋಧನಾ ಸಮಿತಿ ಭೇಟಿ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಗತ್ಯಕ್ಕಿಂತ ಹೆಚ್ಚಿನ ತಾತ್ಕಾಲಿಕ ಸಿಬ್ಬಂದಿ ನೇಮಕಾತಿ, ಭ್ರಷ್ಟಾಚಾರದ ಕುರಿತು ತನಿಖೆ ನಡೆಸುತ್ತಿರುವ ಹೈಕೋರ್ಟ್ ನಿವೃತ್ತ ನ್ಯಾ.ಬಿ.ಎ.ಪಾಟೀಲ್ ನೇತೃತ್ವದ ಸತ್ಯ ಶೋಧನಾ ಸಮಿತಿಗೆ ಹೇಳಿಕೆ ನೀಡಲು ಅವಕಾಶ ಕಲ್ಪಿಸಲಾಗಿದೆ.
ಮುಕ್ತಗಂಗೋತ್ರಿಯ ವಿವಿ ಅತಿಥಿಗೃಹ ಕಟ್ಟಡಕ್ಕೆ ಫೆ.25ರಂದು ಬೆಳಗ್ಗೆ 11ಕ್ಕೆ ನ್ಯಾ.ಬಿ.ಎ.ಪಾಟೀಲ್ ಆಗಮಿಸುತ್ತಿದ್ದು, ನಿರ್ದಿಷ್ಟ ವಿಷಯದ ಕುರಿತು ಹೇಳಿಕೆ ನೀಡಲು ಅವರನ್ನು ಭೇಟಿ ಮಾಡಬಹುದಾಗಿದೆ.
ಮಂಜೂರಾದ ಹುದ್ದೆಗಳಿಗಿಂತ ತಾತ್ಕಾಲಿಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಹೆಚ್ಚು ನೇಮಕಾತಿ ಮತ್ತು ಪದನಾಮಗಳ ಬದಲಾವಣೆ, ಅನಗತ್ಯವಾಗಿ ಪ್ರಾದೇಶಿಕ ಕೇಂದ್ರ ತೆರೆದಿರುವುದು, ಅವುಗಳಿಗೆ ತಾತ್ಕಾಲಿಕ ನಿರ್ದೇಶಕರ ನೇಮಕಾತಿ, ರಾಜ್ಯ ಸರ್ಕಾರ ಮತ್ತು ಕರಾಮುವಿ ವ್ಯವಸ್ಥಾಪಕ ಮಂಡಳಿಯ ಅನುಮೋದನೆವಿಲ್ಲದೆ, ಹುದ್ದೆಗಳು ಸೃಷ್ಟಿ ಕುರಿತು ಸಮಿತಿ ತನಿಖೆ ಮಾಡುತ್ತಿದೆ.
 ಜತೆಗೆ ಖಾಸಗಿ ಅಧ್ಯಯನ ಕೇಂದ್ರಗಳ ತೆಗೆಯಲು ಕೊಟ್ಟಿರುವ ಅನುಮೋದನೆ, ದೆಹಲಿಯ ವರ್ಚುವಲ್ ಏಜುಕೇಷನ್ ಟ್ರಸ್ಟ್‌ಗೆ 1.71 ಕೋಟಿ ರೂ. ನೀಡಿರುವ ಠೇವಣಿದ ಕುರಿತು ಸಹ ವಿಚಾರಣೆ ನಡೆಸಿದೆ. 
ಇದಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಯೊಂದಿಗೆ ಖುದ್ದು ಹಾಜರಾಗಿ ಹೇಳಿಕೆ ನೀಡಬಹುದು ಎಂದು ಕುಲಸಚಿವ ಪ್ರೊ.ಎಸ್.ಕೆ.ನವೀನ್‌ಕುಮಾರ್ ಅವರು ಮುಕ್ತ ವಿವಿ ಬೋಧಕ, ಬೋಧಕೇತರ ಸಿಬ್ಬಂದಿಗೆ ಲಿಖಿತವಾಗಿ ತಿಳಿಸಿದ್ದಾರೆ.