ಸರಗೂರು ಪಟ್ಟಣದ ಜೆಎಸ್‌ಎಸ್ ಶಿವರಾತ್ರಿ ಶಿವಾನುಭವ ಮಂಗಳ ಮಂಟಪದಲ್ಲಿ ಜೆಎಸ್‌ಎಸ್ ರಂಗೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಹನುಮಂತಗೌಡ, ವೈ.ಡಿ.ರಾಜಣ್ಣ, ಸುಧಾ ಮೃತ್ಯುಂಜಯಪ್ಪ ಇತರರು ಇದ್ದರು.  
ಮೈಸೂರು

ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಸಹಕಾರಿ

ನಾಗೇಶ ಎಸ್
ಸರಗೂರು: ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಚಲನಚಿತ್ರ ಕಲಾವಿದ ಹನುಮಂತೇಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಜೆಎಸ್‌ಎಸ್ ಶಿವರಾತ್ರಿ ಶಿವಾನುಭವ ಮಂಗಳ ಮಂಟಪದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರಂಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗಳು ಜೀವನದಲ್ಲಿ ಶಿಸ್ತು, ಸಂಯಮ, ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುವುದರ ಜತೆಗೆ ಆರೋಗ್ಯಯುತ ಜೀವನಕ್ಕೆ ಸಹಕಾರಿ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಕ್ರೀಡೆ, ಕಲೆ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಸಕ್ತಿಗಳನ್ನು ಬೆಳೆಸಿಕೊಂಡರೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ಪಶು ಸಂಗೋಪನಾ ಇಲಾಖೆ ಕೋಲಾರ ಉಪ ನಿರ್ದೇಶಕ ವೈ.ಡಿ.ರಾಜಣ್ಣ ಮಾತನಾಡಿ, ತ್ರಿವಿಧ ದಾಸೋಹಕ್ಕೆ ಪ್ರಸಿದ್ಧವಾಗಿರುವ ಜೆಎಸ್‌ಎಸ್ ಸಂಸ್ಥೆ ರಾಜ್ಯ, ಹೊರ ರಾಜ್ಯ ಸೇರಿದಂತೆ ವಿದೇಶಗಳಲ್ಲೂ ಶಿಕ್ಷಣ ಸೇರಿದಂತೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಎಲ್ಲರಿಗೂ ಶಿಕ್ಷಣ ಕೈಗೆಟುವಂತೆ ಮಾಡಿರುವ ಜೆಎಸ್‌ಎಸ್ ಶಿಕ್ಷಣ ದಾಸೋಹಕ್ಕೆ ಒತ್ತು ನೀಡಿದೆ ಎಂದರು.
ಇಂದಿನ ಪಠ್ಯ ಕೇಂದ್ರಿತ ಶಿಕ್ಷಣದಿಂದ ಮಕ್ಕಳ ಸರ್ವಾಂಗೀಣ ವಿಕಾಸ ಸಾಧ್ಯವಿಲ್ಲ. ಹಾಗಾಗಿ, ಶಿಕ್ಷಣದಲ್ಲಿ ರಂಗ ಶಿಕ್ಷಣ ಬಹಳ ಮುಖ್ಯವಾಗಿದೆ. ಮಕ್ಕಳ ಮನೋವಿಕಾಸಕ್ಕೆ ಹಾಗೂ ವಿಶ್ವಪ್ರಜೆಯಾಗಿ ರೂಪುಗೊಳ್ಳಲು ಪೂರಕವಾಗಿದೆ. ಜಗತ್ತಿನ ಮೇಲಿರುವ ಅತ್ಯಂತ ತೂಕದ ಹಾಗೂ ಘನತೆಯ ಕ್ಷೇತ್ರ ರಂಗಭೂಮಿಯಾಗಿದೆ. ಹಿಂದೆ ಗ್ರಾಮೀಣ ಭಾಗಗಳಲ್ಲಿ ನಿರಂತರವಾಗಿ ನಾಟಕಗಳ ಪ್ರದರ್ಶನ ನಡೆಯುತ್ತಿತ್ತು. ಆಧುನಿಕತೆಯ ಭರಾಟೆ ಹೆಚ್ಚಾದ ಬಳಿಕ ನಾಟಕಗಳನ್ನು ನೋಡುವ ವ್ಯವಧಾನ ಇಲ್ಲದಂತಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮಕ್ಕಳಿಗೆ ರಂಗ ಶಿಕ್ಷಣದ ರುಚಿ ಹತ್ತಿಸಿದರೆ ಭವಿಷ್ಯದಲ್ಲಿ ರಂಗಭೂಮಿ ಉಳಿಯುತ್ತದೆ ಎಂದರು.
ರಂಗೋತ್ಸವ ಸಂಯೋಜಕ ಚಂದ್ರಶೇಖರ್ ಆಚಾರ್, ಜೆಎಸ್‌ಎಸ್ ಸಂಸ್ಥೆಗಳ ಸ್ನೇಹ ಸ್ತ್ರೀ ಸಮಾಜ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವೀರಭದ್ರಪ್ಪ, ಟೌನ್ ಅಧ್ಯಕ್ಷ ಮೋಹನಕುಮಾರ್, ಬಸವ ಬಳಗ ಅಧ್ಯಕ್ಷ ಹಂಚೀಪುರ ಗಣಪತಿ, ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ, ಮುಖ್ಯ ಶಿಕ್ಷಕ ಜಯಣ್ಣ ಇತರರು ಇದ್ದರು.