ನಗರದ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಪ್ರೊ.ಕೆ.ಎಸ್.ರಂಗಪ್ಪ ಉದ್ಘಾಟಿಸಿದರು. ಬಿ.ಸಿದ್ದಬಸವಗೌಡ, ಡಾ.ಸಿ.ಜಿ.ಬೆಟಸೂರಮಠ, ಬಿ.ಸುರೇಶ್, ಪ್ರೊ.ತೇರೂ ಸೋನೆ, ಎಂ.ಸೆಂಥಿಲ್‌ಕುಮಾರ್, ಪ್ರೊ.ಎಸ್.ಎ.ಧನರಾಜ್, ಸಿ.ನಟರಾಜು, ಪ್ರೊ.ಪಿ.ಮಲ್ಲು ಇತರರು ಇದ್ದರು. 
ಮೈಸೂರು

ಜಾಗತಿಕ ಸವಾಲು ಎದುರಿಸಲು ಜ್ಞಾನದ ವಿನಿಮಯ ಅಗತ್ಯ:ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ

ಪ್ರಮುಖ ಮುಖ್ಯಾಂಶಗಳು

  • ಜ್ಞಾನ ಇದ್ದರೆ ಮಾತ್ರ ಬೆಳವಣಿಗೆ ಎನ್ನುವ ಹಂತಕ್ಕೆ ಬಂದು ನಿಂತಿದ್ದೇವೆ
  • ವಿಶ್ವವಿದ್ಯಾಲಯಗಳು ಹೊಸ ಸಂಶೋಧನೆಗಳಿಗೆ ಆದ್ಯತೆ ನೀಡಬೇಕಾಗಿದೆ
ಮೈಸೂರು:ಮುಂದಿನ ಪೀಳಿಗೆ ಜಾಗತಿಕ ಸವಾಲುಗಳನ್ನು ಎದುರಿಸಲು ಪರಸ್ಪರ ಸಹಕಾರ, ಜ್ಞಾನದ ವಿನಿಮಯ ಅಗತ್ಯವಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.
ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಜಪಾನಿನ ಹೋಕೈಡೊ ವಿಶ್ವವಿದ್ಯಾಲಯದಿಂದ ನಗರದ ಎಸ್‌ಜೆಸಿಇ ಆವರಣದಲ್ಲಿ ಭಾರತ-ಜಪಾನ್ ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಡಿ ಆಯೋಜಿಸಿದ್ದ ರಸಾಯನ ವಿಜ್ಞಾನ ಮತ್ತು ಆಹಾರದ ನಡುವಿನ ಸೇತುವೆ-ಸುಸ್ಥಿರ ಸಮಾಜಕ್ಕೆ ಒಂದು ಸಂಯೋಜಿತ ವಿಧಾನ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಎಲ್ಲೆಡೆ ಜ್ಞಾನ-ವಿಜ್ಞಾನದ ಅಗತ್ಯತೆ ಇದ್ದು, ವಿಶ್ವ ಈಗ ಜ್ಞಾನಯುಗದಲ್ಲಿದೆ. ಜ್ಞಾನ ಇದ್ದರೆ ಮಾತ್ರ ಬೆಳವಣಿಗೆ ಎನ್ನುವ ಹಂತಕ್ಕೆ ಬಂದು ನಿಂತಿದ್ದೇವೆ. ಹಾಗಾಗಿ ಮುಂದಿನ ಪೀಳಿಗೆ ಬದಲಾವಣೆಗಾಗಿ ಪರಸ್ಪರ ಅಧ್ಯಯನ, ಜ್ಞಾನ, ಎಲ್ಲೆ ಇಲ್ಲದ ವಿಜ್ಞಾನದ ವಿನಿಮಯ ಅಗತ್ಯವಿದೆ ಎಂದು ಹೇಳಿದರು.
ಮುಂದಿನ ಪೀಳಿಗೆಯು ಜಾಗತಿಕ ಸವಾಲುಗಳನ್ನು ಎದುರಿಸಲು ದೇಶಗಳ ನಡುವೆ ಪರಸ್ಪರ ಸಹಕಾರದ ಅಗತ್ಯವಿದೆ. ಹೀಗಾಗಿ, ವಿಶ್ವವಿದ್ಯಾಲಯಗಳು ಹೊಸ ಸಂಶೋಧನೆಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದು ಸಲಹೆ ನೀಡಿದರು.
ಭಾರತ ಹಾಗೂ ಜಪಾನ್ ದೇಶಗಳು ಸುದೀರ್ಘ ಅವಧಿಯ ಒಡನಾಟ ಹೊಂದಿವೆ. ಶಿಕ್ಷಣ, ತಾಂತ್ರಿಕತೆ, ಸಂಶೋಧನೆಯಲ್ಲಿ ಪರಸ್ಪರ ಸಹಕಾರ ನೀಡುತ್ತ ಬಂದಿವೆ. ಜಪಾನ್ ಶಿಸ್ತು ಮತ್ತು ಚುರುಕು ತಂತ್ರಜ್ಞಾನ ಹೊಂದಿದ್ದರೆ, ಭಾರತ ಪ್ರತಿಭೆ ಮತ್ತು ಕೌಶಲದ ಆಗರವಾಗಿದೆ ಎಂದು ಬಣ್ಣಿಸಿದರು.
ಜಪಾನ್ ವಿದ್ಯಾರ್ಥಿಗಳು ಭಾರತದ ಪ್ರಯೋಗಾಲಯಗಳಲ್ಲಿ ಕಲಿಯುವುದು ಹೊಸ ಅನುಭವ ನೀಡಲಿದೆ. ಈ ದೇಶಗಳ ವಿಶ್ವವಿದ್ಯಾಲಯಗಳ ನಡುವೆ ಇಂತಹ ಸಹಕಾರ ತರಬೇತಿಗಳು ಭವಿಷ್ಯದಲ್ಲಿ ಉತ್ತಮ ಸಂಪನ್ಮೂಲ ವ್ಯಕ್ತಿಗಳನ್ನು ರೂಪಿಸಲಿದೆ. ಎರಡೂ ದೇಶಗಳು ತಮ್ಮ ಆದ್ಯತಾ ವಲಯಗಳನ್ನು ಗುರುತಿಸಿ ಜಂಟಿ ಅನುದಾನ ಒದಗಿಸಬೇಕು ಎಂದು ಸಲಹೆ ನೀಡಿದರು.
ಹವಾಮಾನ ವೈಪರೀತ್ಯವು ಆಹಾರ ಉತ್ಪಾದನೆಗೆ ಹೊಸ ಸವಾಲು ತಂದೊಡ್ಡಿದೆ. ಆಹಾರ ವಿಜ್ಞಾನವು ಇನ್ನಷ್ಟು ಸುರಕ್ಷಾ ಹಾಗೂ ಸುಸ್ಥಿರ ಕ್ರಮಗಳಿಗೆ ಆದ್ಯತೆ ನೀಡಬೇಕಾಗಿದೆ. ಉತ್ತಮ ಪ್ಯಾಕೇಜಿಂಗ್ ತಂತ್ರಜ್ಞಾನ, ಆಹಾರವನ್ನು ಸುದೀರ್ಘ ಅವಧಿಗೆ ಕಾಪಿಡುವ ವ್ಯವಸ್ಥೆ ಬೇಕಾಗಿದೆ ಎಂದರು.
ಹೋಕೈಡೊ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಬಿ.ಸಿದ್ದಬಸವಗೌಡ ಮಾತನಾಡಿ, ಹಲವು ದಶಕಗಳಿಂದ ಎರಡೂ ರಾಷ್ಟ್ರಗಳು ಪರಸ್ಪರ ಸಹಕಾರದಲ್ಲಿವೆ. ಜಪಾನ್ ತಂತ್ತಜ್ಞಾನ ಹಾಗೂ ಭಾರತದ ಮಿದುಳು ಸೇರಿದರೆ ಯಶಸ್ಸು ಖಂಡಿತ ಎಂದು ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಎಸ್‌ಟಿಯು ಕುಲಪತಿ ಸಂತೋಷ್‌ಕುಮಾರ್ ಮಾತನಾಡಿ, ಕೃಷಿ ಉತ್ಪಾದನೆ ಹಾಗೂ ಆಹಾರ ಸಂಸ್ಕರಣೆಯಲ್ಲಿ ತೀವ್ರ ಬದಲಾವಣೆ ಆಗುತ್ತಿದ್ದು, ರಸಾಯನ ವಿಜ್ಞಾನಕ್ಕೆ ಹಲವು ಸವಾಲುಗಳನ್ನು ಒಡ್ಡಿದೆ. ಆಹಾರ ಸಂಸ್ಕರಣೆಯು ಸುರಕ್ಷಿವಾಗಿ ನಡೆಯಲು ಇನ್ನಷ್ಟು ಹೊಸ ಪರಿಸರ ಸ್ನೇಹಿ ಆವಿಷ್ಕಾರಗಳ ಅಗತ್ಯವಿದೆ ಎಂದು ಹೇಳಿದರು.
ಭಾರತದಲ್ಲಿ ವರ್ಷಕ್ಕೆ ಸುಮಾರು 80 ದಶಲಕ್ಷ ಟನ್ ಆಹಾರ ಧಾನ್ಯ ವ್ಯರ್ಥ ಆಗುತ್ತಿದೆ. ವಿಜ್ಞಾನವು ಇದನ್ನು ತಡೆದಲ್ಲಿ ಇನ್ನಷ್ಟು ಜನರಿಗೆ ಆಹಾರ ದೊರೆಯಲು ಸಾಧ್ಯವಿದೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಜೆಎಸ್‌ಎಸ್ ಎಎಚ್‌ಇಆರ್ ಸಮ ಕುಲಾಧಿಪತಿ ಬಿ. ಸುರೇಶ್, ಹೋಕೈಡೊ ವಿಶ್ವವಿದ್ಯಾನಿಲಯದ ಪ್ರೊ.ತೇರೂ ಸೋನೆ, ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಯ ಸಂಶೋಧನಾ ನಿರ್ದೇಶಕ ಎಂ.ಸೆಂಥಿಲ್‌ಕುಮಾರ್, ಜೆಎಸ್‌ಎಸ್ ಎಸ್‌ಟಿಯು ಕುಲಸಚಿವ ಪ್ರೊ.ಎಸ್.ಎ.ಧನರಾಜ್, ಎಸ್‌ಜೆಸಿಇ ಪ್ರಾಂಶುಪಾಲ ಸಿ.ನಟರಾಜು, ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಮಲ್ಲು ಇತರರು ಇದ್ದರು.