ರಾಜ್ಯದಲ್ಲಿ ಹುಲಿ, ಚಿರತೆಗಳ ಉಪಟಳ  
ಮೈಸೂರು

ರಾಜ್ಯದಲ್ಲಿ ಮಿತಿಮೀರಿದ ಹುಲಿ, ಚಿರತೆ ಉಪಟಳ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಕಳೆದ 3 ವರ್ಷದಲ್ಲಿ 20 ಸಾವು
  • ಪ್ರಸ್ತಕ ಸಾಲಿನಲ್ಲೇ 9 ಬಲಿ
  • ವನ್ಯಜೀವಿಗಳ ಹಾವಳಿ ತಡೆಗೆ ಎಐ, ಡ್ರೋನ್ ತಂತ್ರಜ್ಞಾನ ಬಳಕೆ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ರಾಜ್ಯದಲ್ಲಿ ಹುಲಿ, ಚಿರತೆಗಳ ಉಪಟಳ ಮಿತಿ ಮೀರಿದ್ದು, ಇದರ ಫಲವಾಗಿ ಸಾವು-ನೋವುಗಳು ಏರಿಕೆಯಾಗಿವೆ. ಪ್ರಸ್ತಕ ಸಾಲಿನಲ್ಲಿ 9 ಸೇರಿದಂತೆ ಕಳೆದ ಮೂರು ವರ್ಷದಲ್ಲಿ 20 ಸಾವುಗಳು ಸಂಭವಿಸಿರುವುದು ಆಘಾತಕಾರಿಯಾಗಿದೆ.
ಕಾಡಂಚಿನ ಗ್ರಾಮದಲ್ಲಿ ಈ ವನ್ಯಜೀವಿಗಳ ಹಾವಳಿ ಗ್ರಾಮಸ್ಥರ ನಿದ್ದೆಗೇಡಿಸಿದ್ದು, ಈ ಸಮಸ್ಯೆ ಅರಣ್ಯ ಇಲಾಖೆಗೆ ತಲೆ ಬೀಸಿ ಮಾಡಿದೆ.
ಮೈಸೂರು, ಕೊಡಗು, ಚಾಮರಾಜನಗರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಹಾವೇರಿ ಜಿಲ್ಲೆಯಲ್ಲಿ ಹುಲಿ-ಚಿರತೆಗಳ ಉಪದ್ರವ ಎಲೆಮೀರಿದೆ. ಪ್ರಸ್ತಕ ಸಾಲಿನಲ್ಲಿ ಇದು ಇನ್ನಷ್ಟು ಹೆಚ್ಚಾಗಿದೆ. 2025-26ನೇ ಸಾಲಿನಲ್ಲಿ ನವೆಂಬರ್ ಅಂತ್ಯಕ್ಕೆ 9 ವ್ಯಕ್ತಿಗಳನ್ನು ಹುಲಿ, ಚಿರತೆಗಳು ಬಲಿ ಪಡೆದಿವೆ.
 ರಾಷ್ಟ್ರೀಯ ಹುಲಿ ಯೋಜನೆ ವ್ಯಾಪ್ತಿಯ ಬಂಡೀಪುರ ಮತ್ತು ನಾಗರಹೊಳೆಯ ಅರಣ್ಯ ಪ್ರದೇಶ ಹೊಂದಿಕೊಂಡಿರುವ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲೇ ಈ ಹಾವಳಿ ವಿಪರೀತವಾಗಿದೆ. ಪ್ರಸ್ತಕ ವರ್ಷದಲ್ಲೇ ಮೈಸೂರು ಜಿಲ್ಲೆಯಲ್ಲಿ 5 ಜನರು ಬಲಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗ, ಹಾವೇರಿ ಜಿಲ್ಲೆಯಲ್ಲಿ ತಲಾ ಒಬ್ಬರು ಈ ಪ್ರಾಣಿಗಳಿಗೆ ಆಹಾರವಾಗಿ ಕೊನೆಯುಸಿರೆಳೆದಿದ್ದಾರೆ.
ಕಳೆದ ಮೂರು ವರ್ಷದಲ್ಲಿ 20 ಸಾವುಗಳಾಗಿವೆ. 2023-24ರಲ್ಲಿ 8, 2024-25ರಲ್ಲಿ 3 ವ್ಯಕ್ತಿಗಳನ್ನು ಬಲಿ ಪಡೆದಿದ್ದವು. ಇದು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ.
 ಕಾಡಂಚಿನ ಗ್ರಾಮಸ್ಥರು ಹೊಲದಲ್ಲಿ ಕೆಲಸ ಮಾಡುವಾಗ, ಜಾನುವಾರಗಳನ್ನು ಆಹಾರ ಮೇಯಿಸಲು ಕರೆದುಕೊಂಡು ಹೋದಾಗ ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ಹುಲಿ, ಚಿರತೆಗಳು ದಾಳಿ ಮಾಡಿರುವ ಬಹಳಷ್ಟು ಉದಾಹರಣೆಗಳು ಸಿಗುತ್ತಿವೆ. 
ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಪಾವತಿಸಲಾಗಿದ್ದು, ಮಾಸಿಕ 4 ಸಾವಿರ ರೂಪಾಯಿಯಂತೆ 5 ವರ್ಷದ ಅವಧಿಗೆ ಮಾಸಾಶನವನ್ನೂ ಪಾವತಿಸಲಾಗುತ್ತಿದೆ.
ಹುಲಿಗಳು ನಾಡಿಗೆ ಬರುವುದು ಏಕೆ..?
ಒಂದೇ ಪ್ರದೇಶದಲ್ಲಿ ಸತತವಾಗಿ ಹುಲಿಗಳ ಸಂಖ್ಯೆ ಹೆಚ್ಚಾದಂತೆ ಆವಾಸ ಸ್ಥಳ ಕಡಿಮೆಯಾಗುತ್ತಿದೆ. ಇದು ಹುಲಿಗಳು ನಡುವೆ ಕಾದಾಟವಾಗಿ ಬಲಿಷ್ಠ ಹುಲಿಗಳು ಆವಾಸ ಪ್ರದೇಶವನ್ನು ಆಕ್ರಮಿಸಿಕೊಂಡು ಸೋತ ವಯಸ್ಸಾದ, ಗಾಯಗೊಂಡ ಹುಲಿಗಳನ್ನು ಸದರಿ ಪ್ರದೇಶದಿಂದ ಹೊರದೂಡುತ್ತದೆ. ದುರ್ಬಲಗೊಂಡ ಸದರಿ ಹುಲಿಗಳು ಸುಲಭ ಬೇಟೆಯನ್ನು ಹುಡುಕಿಕೊಂಡು ಅರಣ್ಯದಿಂದ ಹೊರಬರುತ್ತವೆ.
ಹುಲಿ ಮರಿಗಳು ಎರಡು ವರ್ಷದ ಬಳಿಕ ಅವುಗಳು ದೊಡ್ಡದಾಗಿ ತಮ್ಮದೇ ಪ್ರದೇಶ ಹುಡುಕುತ್ತಾ ಕಾಡಿನಿಂದ ಹೊರಬರುವ ಸಾಧ್ಯತೆ ಅಧಿಕವಾಗಿರುತ್ತದೆ. ಹುಲಿಗಳ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಹೆಣ್ಣು ಹುಲಿಗಳು ಸಂತಾನೋತ್ಪತ್ತಿ ಸಮಯದಲ್ಲಿ ತನ್ನ ಮರಿಗಳನ್ನು ಇತರ ಗಂಡು ಹುಲಿಗಳಿಂದ ರಕ್ಷಿಸಿಕೊಳ್ಳಲು ಮೂಲ ಆವಾಸಸ್ಥಾನದಿಂದ ಹೊರಬರುತ್ತವೆ. 
ಅಲ್ಲದೆ, ಅರಣ್ಯದಿಂದ ಕಾಡಂಚಿನ ಪ್ರದೇಶದಲ್ಲಿರುವ ಕೆರೆಕಟ್ಟೆ, ಹಳ್ಳಕೊಳ್ಳ, ಕಬ್ಬಿನ ಗದ್ದೆ, ಬಾಳೆಯ ತೋಟಗಳು, ನಾಲಬದುವಿನ ಗಿಡಗಂಟೆ ಪ್ರದೇಶಗಳಲ್ಲಿ ವಾಸ್ತವ್ಯ ಮತ್ತು ಸಂಚಾರ ಶುರು ಮಾಡುತ್ತವೆ.

ಚಿರತೆಗಳು ಅರಣ್ಯದಿಂದ ಹೊರಬರುವುದು ಏಕೆ?: 

ಚಿರತೆಗಳು ಹೊಲಗದ್ದೆಗಳು, ಪೊದೆಗಳು ಮತ್ತು ಅರೆ ನಗರ ಪ್ರದೇಶಗಳಲ್ಲೂ ವಾಸಿಸಬಲ್ಲದು. ಅಲ್ಲದೆ, ಸುಲಭವಾಗಿ ಆಹಾರ ದೊರೆಯುವ ಪ್ರದೇಶಗಳನ್ನು ಅವಲಂಬಿಸಿ ವಾಸಿಸುತ್ತವೆ.
 ಅರಣ್ಯ ಪ್ರದೇಶಗಳಲ್ಲಿ ಮಾನವ ಚಟುವಟಿಕೆಗಳಾದ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹ, ಜಾನುವಾರ ಮೇಯಿಸುವಿಕೆ ಇತ್ಯಾದಿ ಕಾರಣದಿಂದ ಚಿರತೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬರಲು ಕಾರಣವಾಗಿದೆ.
ಹುಲಿ-ಚಿರತೆಗಳಿ ಒಂದೇ ಆವಾಸಸ್ಥಾನದಲ್ಲಿರುವ ಬೇಟೆಗಾಗಿ ಸ್ಪರ್ಧಿಸುತ್ತವೆ. ಬಲವಾದ ಪರಭಕ್ಷಕಗಳಾಗಿರುವುದರಿಂದ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವು ಚಿರತೆಗಳು ಅರಣ್ಯ ಪ್ರದೇಶಗಳ ಹೊರಗೆ ಬರಲು ಮತ್ತೊಂದು ಕಾರಣವಾಗಿದೆ. 
ಹುಲಿಗಳಂತೆ ಆವಾಸ ಸ್ಥಾನಕ್ಕಾಗಿ ಕಾದಾಟ, 2 ವರ್ಷದ ಬಳಿಕ ಮರಿ ಚಿರತೆಗಳು ತಮ್ಮ ಆವಾಸ ಸ್ಥಾನ ಶೋಧಿಸಲು ಅರಣ್ಯದಿಂದ ಹೊರ ಬರುತ್ತಿವೆ.
ಚಿರತೆಗಳ ಸಾಂದ್ರತೆ ಹೆಚ್ಚಿರುವ ಪ್ರದೇಶದಲ್ಲಿ ಹೆಣ್ಣು ಚಿರತೆಗಳು ಸಂತಾನೋತ್ಪತ್ತಿ ಸಮಯದಲ್ಲಿ ತನ್ನ ಮರಿಗಳನ್ನು ಇತರ ಗಂಡು ಚಿರತೆಗಳಿಂದ ರಕ್ಷಿಸಿಕೊಳ್ಳಲು ಆವಾಸಸ್ಥಾನದಿಂದ ಅಲ್ಲಿಯಿಂದ ನಿರ್ಗಮಿಸುತ್ತಿವೆ.

ತಂತ್ರಜ್ಞಾನದ ಮೊರೆ

ರಾಜ್ಯದಲ್ಲಿ ಹೆಚ್ಚಿರುವ ಹುಲಿ, ಚಿರತೆ ಉಪಟಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದ್ದು, ಎಐ ಕ್ಯಾಮೆರಾ, ಡ್ಯಾಶ್ ಬೋರ್ಡ್ ಮತ್ತು ಡ್ರೋನ್ ತಂತ್ರಜ್ಞಾನವನ್ನು ಪರಿಣಾಮಕಾರಿ ಬಳಕೆಗೆ ಮುಂದಾಗಿದೆ.
  1. ರೇಡಿಯೋ ಕಾಲರ್ ಅಳವಡಿಸಿರುವ ಹುಲಿ, ಚಿರತೆಗಳ ಚಲನವಲನ ಮೇಲೆ ನಿತ್ಯ ಗಮನಿಸಲು ‘ಹೆಜ್ಜೆ’ ಎಂಬ ಡ್ಯಾಶ್ ಬೋರ್ಡ್ ವ್ಯವಸ್ಥೆ ಅನುಷ್ಠಾನ.
  2.  ಕಾಡಂಚಿನ ಗ್ರಾಮಗಳಿಗೆ ವನ್ಯಪ್ರಾಣಿಗಳು ಬಂದಾಗ ಸಾರ್ಜನಿಕರಿಗೆ ಎಚ್ಚರಿಕೆ, ಮಾಹಿತಿ ನೀಡಲು ‘ಅಡ್ವಾನ್ಸ್ ಅರ್ಲಟ್ ಸಿಸ್ಟಂ’  ವ್ಯವಸ್ಥೆ ಜಾರಿ.
  3. ಅರಣ್ಯದಂಚಿನ ಆಯ್ದ ಪ್ರದೇಶಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಕ್ಯಾಮೆರಾ ಕಣ್ಗಾವಲು.
  4.  ಡ್ರೋನ್‌ಗಳ ಮುಖಾಂತರ ವನ್ಯಪ್ರಾಣಿಗಳ ಚಲನವಲನದ ನಿಗಾ.

ಕಳೆದ ಮೂರು ವರ್ಷದಲ್ಲಿ 374 ಹುಲಿ, ಚಿರತೆ ಸೆರೆ

ಗ್ರಾಮಸ್ಥರಿಗೆ, ಜಾನುವಾರಿಗಳಿಗೆ ಬಾಧಿಸುತ್ತಿರುವ ಹುಲಿ-ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ. 
ಕಳೆದ ಮೂರು ವರ್ಷದಲ್ಲಿ 374 ಹುಲಿ, ಚಿರತೆಯನ್ನು ಹಿಡಿಯಲಾಗಿದೆ. 2023-24ರಲ್ಲಿ 5 ಹುಲಿ, 131 ಚಿರತೆ, 2024-25ರಲ್ಲಿ 5 ಹುಲಿ, 138 ಚಿರತೆ ಸೆರೆ ಹಿಡಿಯಲಾಗಿದೆ.
ಪ್ರಸ್ತಕ 2025-26ನೇ ಸಾಲಿನಲ್ಲಿ ನವೆಂಬರ್ ನಲ್ಲಿ 12 ಸಣ್ಣ ಮರಿಗಳು ಸೇರಿದಂತೆ 12 ಹುಲಿಗಳು, 71 ಚಿರತೆಗಳನ್ನು ಹಿಡಿಯಲಾಗಿದೆ. ಇದು ಈ ಪ್ರಾಣಿಗಳು ಕಾಡಿನಿಂದ ನಾಡಿ ಬಂದು ಸಮಸ್ಯೆ ಸೃಷ್ಟಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ

ಹುಲಿ, ಚಿರತೆ ನಾಡಿನತ್ತ ಬಾರದಂತೆ ತಡೆಯಲು ವಿವಿಧ ಕ್ರಮ

ಹುಲಿ, ಚಿರತೆ ನಾಡಿನತ್ತ ಬಾರದಂತೆ, ದಾಳಿ ಸಂಭವಿಸದಂತೆ ನೋಡಿಕೊಳ್ಳಲು ವಿವಿಧ ಕ್ರಮ ತೆಗೆದುಕೊಳ್ಳಲಾಗಿದೆ.
  •  ಅರಣ್ಯದಲ್ಲಿ ನೀರಿನ ಲಭ್ಯತೆ ಹೆಚ್ಚಿಸಲು ಕೆರೆಗಳು ನಿರ್ಮಾಣ, ವನ್ಯಪ್ರಾಣಿಗಳ ಆವಾಸ ಸ್ಥಾನಗಳ ಅಭಿವೃದ್ಧಿ 
  •  ಲಂಟಾನ, ಯುಪಟೋರಿಯಂ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಿ ಅರಣ್ಯಕ್ಕೆ ಪೂರಕವಾದ ಹಲ್ಲು ಬೆಳೆಯಲು ಅನುವು 
  •  ಚಿರತೆ ಕಾರ್ಯಪಡೆ(ಎಲ್ ಟಿಎಫ್)್ 24*7 ಕಾರ್ಯ ನಿರ್ವಹಿಸಲು ನಿಯಂತ್ರಣ ಕೊಠಡಿ* ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಹುಲಿ, ಚಿರತೆ ಸೆರೆ ಹಿಡಿದು ಪುನರ್ವಸತಿ ಕೇಂದ್ರ, ಮೃಗಾಲಯಕ್ಕೆ ಸ್ಥಳಾಂತರ
  • ಆರ್‌ಆರ್ ಟಿ, ಎಡಿಸಿ ತಂಡಗಳನ್ನು ಒಟ್ಟುಗೂಡಿಸಿ ಮಾನವ-ವನ್ಯಜೀವಿ ಸಂಘರ್ಷ ಉಪ ತಂಡಗಳಾಗಿ ರಚಿಸಿ ಆಯ್ದ ಸ್ಥಳಗಳಲ್ಲಿ ನಿಯೋಜನೆ 
  •  ಖಾಸಗಿ ಜಮೀನಿನಲ್ಲಿ ಸೋಲಾರ್ ಬೇಲಿ ನಿರ್ಮಾಣಕ್ಕೆ ಶೇ.50ರಷ್ಟು ಸಬ್ಸಿಡಿ
"

ರಾಜ್ಯದಲ್ಲಿ ಹುಲಿ, ಚಿರತೆ ಹಾವಳಿ ನಿಯಂತ್ರಣಕ್ಕೆ ವಿವಿಧ ಕ್ರಮ ತೆಗೆದುಕೊಳ್ಳಲಾಗಿದೆ. ಜಲ ಸಂಪನ್ಮೂಲ, ಆವಾಸ ಸ್ಥಳ ಅಭಿವೃದ್ಧಿ, ತ್ವರಿತ ಕಾರ್ಯಚರಣೆ, ಜನರಿಗೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಎಐ, ಡ್ರೋನ್ ಸೇರಿದಂತೆ ವಿವಿಧ ತಂತ್ರಜ್ಞಾನವನ್ನೂ ಪರಿಣಾಮಕಾರಿ ಬಳಕೆ ಮಾಡಿಕೊಳ್ಳಲಾಗುತ್ತಿದೆ