ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ ಆಯೋಜಿಸಿದ್ದ ಖೇತ್ ಬಚಾವೋ (ಕೃಷಿ ಭೂಮಿ ಉಳಿಸಿ) ಅಭಿಯಾನದಲ್ಲಿ ಜಿ.ಟಿ ದೇವೇಗೌಡ, ಎಚ್.ವಿ.ದಿವ್ಯಾ, ಶಾಮರಾಜ್, ಡಾ.ರಕ್ಷಿತ್‌ರಾಜ್ ಇನ್ನಿತರರು ಪಾಲ್ಗೊಂಡಿದ್ದರು 
ಮೈಸೂರು

ರಸಗೊಬ್ಬರ ಅತಿಯಾದರೆ ಫಲವತ್ತತೆ ಕುಸಿತ

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಅರಿವು ಮೂಡಿಸಲು ಜಿಲ್ಲಾದ್ಯಂತ ಖೇತ್ ಬಚಾವೋ ಅಭಿಯಾನ
  • 30ರವರೆಗೂ ಕಾರ್ಯಕ್ರಮ
ಮೈಸೂರು: ಕೃಷಿ ಭೂಮಿ ಫಲವತ್ತತೆ ರಕ್ಷಿಸಿ, ಸುಸ್ಥಿರ ಬೇಸಾಯಕ್ಕೆ ಉತ್ತೇಜನ ನೀಡಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯದಿಂದ ಮಹತ್ವಾಕಾಂಕ್ಷಿ ಖೇತ್ ಬಚಾವೋ (ಕೃಷಿ ಭೂಮಿ ಉಳಿಸಿ) ಅಭಿಯಾನವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ. 
ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ ಈ ವಿಶೇಷ ಆಂದೋಲನವು ಪ್ರಾರಂಭವಾಗಿದ್ದು, ಜೂ.30ರವರೆವಿಗೂ ನಿರಂತರವಾಗಿ ನಡೆಯಲಿದೆ.
ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಇಳುವರಿ ಪಡೆಯುವ ಸಲುವಾಗಿ ರೈತರು ಕೃಷಿ ಭೂಮಿಗೆ ಅತಿಯಾದ ಹಾಗೂ ಅವೈಜ್ಞಾನಿಕವಾಗಿ ರಾಸಾಯನಿಕಗೊಬ್ಬರ ಬಳಸುತ್ತಿದ್ದಾರೆ. ಕೀಟ ಹಾಗೂ ರೋಗಗಳ ಹತೋಟಿಗೆ ಅತಿಯಾಗಿ ಕೀಟನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ಕುಸಿಯುತ್ತಿದೆ. ಇದರಿಂದಾಗಿ ಮಣ್ಣಿನ ಆರೋಗ್ಯ ಹದಗೆಡುತ್ತಿದ್ದು, ಮುಂದಿನ ಪೀಳಿಗೆಗೆ ಆಹಾರ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಂಭವವಿದೆ. 
ಈ ಗಂಭೀರ ಪರಿಸ್ಥಿತಿ ಮನಗಂಡು ಮಣ್ಣಿನ ಆರೋಗ್ಯದ ಮಹತ್ವ, ವೈಜ್ಞಾನಿಕ ಮಣ್ಣು ಪರೀಕ್ಷೆಯ ಅನಿವಾರ್ಯತೆ, ಸಮತೋಲನ ಪೋಷಕಾಂಶಗಳ ನಿರ್ವಹಣೆ, ಸಾವಯವ ಹಾಗೂ ನೈಸರ್ಗಿಕ ಗೊಬ್ಬರಗಳ ಬಳಕೆ, ಜೀವಾಮೃತ, ಗೋಕೃಪಾಮೃತ, ಬೀಜಾಮೃತಗಳ ಮಹತ್ವ, ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಗ್ರಾಮಗಳಿಗೆ ತೆರಳಿ ರೈತರಿಗೆ ಅರಿವನ್ನು ಈ ಅಭಿಯಾನದ ಮೂಲಕ ಮೂಡಿಸಲಾಗುತ್ತಿದೆ.
ಕೃಷಿ ಕ್ಷೇತ್ರದ ಭವಿಷ್ಯವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಮಣ್ಣಿನ ಆರೋಗ್ಯ ಕಾಪಾಡುವುದು ಪ್ರಮುಖ ಹೆಜ್ಜೆಯಾಗಿದೆ. ಪ್ರತಿ ರೈತರು ಕಡ್ಡಾಯವಾಗಿ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿ ಆರೋಗ್ಯ ಕಾರ್ಡ್ ಆಧಾರದ ಮೇಲೆ ಆಗತ್ಯವಿರುವ ರಸಗೊಬ್ಬರ ಬಳಸಬೇಕು. ಜತೆಗೆ ಅಮೂಲ್ಯವಾದ ಕೃಷಿ ಭೂಮಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಸುರಕ್ಷಿತ ಹಾಗೂ ಫಲವತ್ತಾದ ಸ್ಥಿತಿಯಲ್ಲಿ ಕೃಷಿ ಭೂಮಿ ಹಸ್ತಾಂತರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಮುಖ್ಯಸ್ಥ ಡಾ. ಬಿ.ಎನ್.ಜ್ಞಾನೇಶ್ ತಿಳಿಸಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ, ಕೃಷಿ ವಿಜ್ಞಾನ ಕೇಂದ್ರದಲ್ಲಿರುವ 6 ವಿಷಯ ತಜ್ಞರನ್ನು 2 ತಂಡಗಳನ್ನಾಗಿ ವಿಭಜಿಸಿ ಪ್ರತಿ ದಿನ ಜಿಲ್ಲೆಯ ವಿವಿಧ ತಾಲೂಕಿನ 2 ಗ್ರಾಮಗಳಲ್ಲಿ ಸಭೆ ನಡೆಸಿ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. 
 ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ ಆಯೋಜಿಸಿದ್ದ ಖೇತ್ ಬಚಾವೋ ಅಭಿಯಾನದಲ್ಲಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ರಸಗೊಬ್ಬರದ ಬಳಕೆ ಹಾಗೂ ಮಣ್ಣು ಪರೀಕ್ಷೆಯ ಅಗತ್ಯವನ್ನು ರೈತರು ಮೊದಲು ತಿಳಿದುಕೊಳ್ಳಬೇಕು ಎಂದು ಹೇಳಿದರು
ಕೃಷಿ ಇಲಾಖೆ, ಮೈಕ್ಯಾಪ್ಸ್, ಐಟಿಸಿ, ಜೆಎಸ್‌ಎಸ್ ಆರ್ಯುವೇದ ಕಾಲೇಜು ಸಹಯೋಗದೊಂದಿಗೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್, ಕೆ.ಬಸವನಹಳ್ಳಿ, ನಂಜನಗೂಡು ತಾಲೂಕಿನ ಸುತ್ತೂರು, ಚಿನ್ನಂಬಳ್ಳಿ, ಕಿರುಗುಂದ, ಹೊರಳವಾಡಿ, ಆಲಂಬೂರು, ಮೈಸೂರು ತಾಲೂಕಿನ ಆಯರಹಳ್ಳಿ ಹಾಗೂ ಹಡಜನ ಗ್ರಾಮಗಳಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು
ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರಾದ ಎಚ್.ವಿ.ದಿವ್ಯಾ, ಶಾಮರಾಜ್, ಡಾ.ರಕ್ಷಿತ್‌ರಾಜ್, ಡಾ.ಜಿ.ಎಂ.ವಿನಯ್, ಡಾ.ವೈ.ಪಿ ಪ್ರಸಾದ್, ಡಾ.ದೀಪಕ್,  ಕೃಷಿ, ತೋಟಗಾರಿಕೆ ಹಾಗೂ ಪಶು ಇಲಾಖೆಯ ಅಧಿಕಾರಿಗಳು ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹಿರಿಯ ವಿಜ್ಞಾನಿ ಡಾ. ಬಿ.ಎನ್. ಜ್ಞಾನೇಶ್ ತಿಳಿಸಿದ್ದಾರೆ.