ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್ ರಂಗರಾಜು ಮಾತನಾಡಿದರು.  
ಮೈಸೂರು

ಇತಿಹಾಸದ ರಚನೆಗೆ ಉತ್ಖನನ ಮುಖ್ಯ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್ ರಂಗರಾಜು ವಿವರ
  • ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ

 ಮೈಸೂರು: 

ವರ್ತಮಾನದ ಇತಿಹಾಸವನ್ನು ಪಾರದರ್ಶಕವಾಗಿ ರಚಿಸಬೇಕಾದರೆ ಗತಕಾಲದ ಅವಶೇಷಗಳು ಮತ್ತು ಕುರುಹುಗಳನ್ನು ಉತ್ಖನನದ ಮೂಲಕ ಪತ್ತೆ ಹಚ್ಚಬೇಕು. ಬಳಿಕ ಕೂಲಂಕಶವಾಗಿ ಅಧ್ಯಯನ ಮಾಡಬೇಕು ಎಂದು ಮೈಸೂರು ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್ ರಂಗರಾಜು ಹೇಳಿದರು.

ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುರಾತತ್ವಶಾಸ್ತ್ರ ಪರಿಚಯ ಮತ್ತು ಮಹತ್ವ ವಿಷಯದ ಕುರಿತು ಇತ್ತೀಚಿಗೆ ಆಯೋಜಿಸಿದ್ದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೂಗೋಳಶಾಸ್ತ್ರ ಮತ್ತು ಪುರಾತತ್ವಶಾಸ್ತ್ರಗಳು ಇತಿಹಾಸದ ಎರಡು ಕಣ್ಣುಗಳಿದ್ದಂತೆ. ಪ್ರಾಚೀನ ಇತಿಹಾಸದ ಕಾಲಘಟ್ಟವನ್ನು ಮಾನವನ ಉಗಮ ಮತ್ತು ವಿಕಾಸದ ಪೂರ್ವ ಇತಿಹಾಸದ ಕಾಲವೆಂದು, ನಾಗರಿಕತೆ ಮತ್ತು ಸಂಸ್ಕೃತಿಯ ವಿಕಸನದ ಕಾಲವನ್ನು ಇತಿಹಾಸ ಉತ್ತರ ಕಾಲವೆಂದು ವಿಂಗಡಿಸಲಾಗಿದೆ ಎಂದರು.
ಪುರಾತತ್ವಶಾಸ್ತ್ರ ಮತ್ತು ಅದರ ವಿವಿಧ ಶಾಖೆಗಳಾದ ಭೂ ಉತ್ಖನನಶಾಸ್ತ್ರ, ಶಾಸನಶಾಸ್ತ್ರ, ನಾಣ್ಯಶಾಸ್ತ್ರ, ಕಲೆ ಮತ್ತು ವಾಸ್ತುಶಿಲ್ಪ ಶಾಸ್ತ್ರ ಹಾಗೂ ವಸ್ತು ಸಂಗ್ರಹಾಲಯ ಶಾಸ್ತ್ರ ಕುರಿತು ಮಾಹಿತಿ ನೀಡಿದರು.
ಅಶೋಕ  ನಿರ್ಮಿಸಿದ ಗುಹಾಂತರ ದೇವಾಲಯಗಳು ದೇಶದ ಮೊಟ್ಟ ಮೊದಲ ದೇವಾಲಯದ ವಾಸ್ತುಶಿಲ್ಪಗಳಾಗಿವೆ. ಕರ್ನಾಟಕದಲ್ಲಿ ಮೌರ್ಯರ ಕಾಲದ ಸುಮಾರು 17 ಶಾಸನಗಳು ದೊರೆತಿವೆ. ಈ ಶಾಸನಗಳು ಅಶೋಕನ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. 
ಸುಮಾರು 9,600 ಶಾಸನಗಳನ್ನು ಯಶಸ್ವಿಯಾಗಿ ಓದಿ ಅರ್ಥೈಸಿಕೊಂಡು ಕರ್ನಾಟಕ ಶಾಸನಗಳು ಎಂಬ ಶೀರ್ಷಿಕೆ ಆಡಿಯಲ್ಲಿ 12 ಸಂಪುಟಗಳನ್ನು ಪ್ರಕಟಿಸಿದ ಬಿ.ಎಲ್. ರೈಸ್ ಅವರನ್ನು ಕರ್ನಾಟಕ ಶಾಸನಗಳ ಪಿತಾಮಹ ಎಂದು ಗೌರವಿಸಲಾಗಿದೆ. ಭಾರತದಲ್ಲಿ ವೈಜ್ಞ್ಞಾನಿಕ ಉತ್ಖನನವನ್ನು ಮೊದಲ ಬಾರಿಗೆ ಪರಿಚಯಿಸಿದವರು  ಸರ್ ಮಾರ್ಟಿಮರ್ ವೀಲರ್ ಎಂದು ಅವರು  ಹೇಳಿದರು.
ತಾವೇ ಉತ್ಖನನ ಮತ್ತು ಭೂ ಪರಿಶೋಧನೆ ನಡೆಸಿದ ತಲಕಾಡು, ರಾಜಘಟ್ಟ ಮತ್ತು ತರೀಕೆರೆ ತಾಲೂಕಿನ ಹನುಮನ ಹಳ್ಳಿಯಲ್ಲಿ ದೊರೆತ ಐತಿಹಾಸಿಕ ಅವಶೇಷಗಳು ಮತ್ತು ಕುರುಹುಗಳ ಛಾಯಾಚಿತ್ರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. 
 ಇದೇ ಸಂದರ್ಭದಲ್ಲಿ ಭೂ ಉತ್ಖನನದ ವಿವಿಧ ಹಂತಗಳು, ನಿಯಮಗಳು, ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು. ಕಾರ್ಬನ್-14 ವೈಜ್ಞಾನಿಕ ಪ್ರಯೋಗದ ಮೂಲಕ ಭೂ ಉತ್ಖನನದಲ್ಲಿ ದೊರೆಯುವ ಅವಶೇಷಗಳು ಮತ್ತು ಕುರುಹುಗಳ ಕಾಲಮಾನ ಮತ್ತು ಅವುಗಳ ಪೂರ್ವ ಇತಿಹಾಸವನ್ನು ಅರಿತುಕೊಳ್ಳಬಹುದು ಎಂದು ತಿಳಿಸಿದರು. 
ಇದುವರೆಗೂ ಕರ್ನಾಟಕದಲ್ಲಿ ನಡೆದಿರುವ ಭೂ ಉತ್ಖನನ ಮತ್ತು ಸಂಶೋಧನೆಯಲ್ಲಿ ದೊರೆತಿರುವ ದೇವಾಲಯಗಳು, ಬೌದ್ಧ ಸ್ತೂಪಗಳು, ಚೈತ್ಯಗಳು, ಸಂಘಾರಾಮಗಳು, ಅಪರೂಪದ ನಾಣ್ಯಗಳು ಮತ್ತು ವಿವಿಧ ಬಗೆಯ ಶಾಸನಗಳ ಮಾಹಿತಿಯನ್ನು ರಂಗರಾಜು ಹಂಚಿಕೊಂಡರು. 
ನಿರಂತರ ಚಲನಶೀಲ: ಪ್ರಾಂಶುಪಾಲೆ ಡಾ. ಬಿ.ಆರ್. ಜಯಕುಮಾರಿ ಮಾತನಾಡಿ, ವಿದ್ಯಾರ್ಥಿಗಳು ಇತಿಹಾಸ ವಿಷಯದಲ್ಲಿ ಆಸಕ್ತಿ ಹೊಂದುವ ಮೂಲಕ ಹೊಸ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ವರೆಗೂ ಬೆಳಕಿಗೆ ಬಾರದೆ ಇರುವ ಐತಿಹಾಸಿಕ ಸಂಗತಿಗಳನ್ನು ಹೊರತರಬೇಕು ಎಂದು ಹೇಳಿದರು. 
ಇತಿಹಾಸ ಎಂಬುದು ನಿಂತ ನೀರಲ್ಲ. ಅದು ನಿರಂತರ ಚಲನಶೀಲ ಗುಣ ಹೊಂದಿದ್ದು, ಗತಕಾಲದ ಘಟನೆಗಳು ವರ್ತಮಾನದ ಇತಿಹಾಸವಾದರೆ, ವರ್ತಮಾನದ ಘಟನೆಗಳು ಭವಿಷ್ಯದ ಇತಿಹಾಸವಾಗುತ್ತವೆ ಎಂಬ ಅರಿವು ನಮ್ಮಲ್ಲಿ ಇರಬೇಕು ಎಂಬ ಹೇಳಿದರು. 
 ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಚ್.ಶ್ರೀಧರ, ಸಹಾಯಕ ಪ್ರಾಧ್ಯಾಪಕ ಎ.ಆರ್. ನಂದೀಶ್ ಇನ್ನಿತರರಿದ್ದರು.