ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವರು ಮಾಜಿ ಸೈನಿಕರ ಕುಂದುಕೊರತೆ ಆಲಿಸುವ ಸಭೆ ನಡೆಸಿದರು. ಡಾ.ಪಿ.ಶಿವರಾಜು, ಕೆ.ಆರ್.ರಕ್ಷಿತ್, ಮಂಜುನಾಥ್ ರೆಡ್ಡಿ ಇನ್ನಿತರರಿದ್ದರು.
- ಮಾಜಿ ಸೈನಿಕರ ಕುಂದುಕೊರತೆ ಸಭೆ
- ಎರಡು ವಿಳಾಸವನ್ನು ಪರಿಗಣಿಸಲು ಕಾಯ್ದೆಗೆ ಅಗತ್ಯವಿರುವ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಶಿಫಾರಸು
- ಪೌತಿ ಖಾತೆ ಮಾಡಿಕೊಡಲು ಏನು ಸಮಸ್ಯೆ?
ಮೈಸೂರು: ಸೇನೆಗೆ ಸೇರುವಾಗ ನೀಡಿರುವ ಮೂಲ ವಿಳಾಸ ಹಾಗೂ ನಿವೃತ್ತಿಯಾದ ಬಳಿಕ ವಾಸ ಇರುವ ಬೇರೆ ವಿಳಾಸದ ವ್ಯತ್ಯಾಸದ ಕಾರಣಕ್ಕೆ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಮಾಜಿ ಸೈನಿಕರು ಅಳಲು ತೊಡಿಕೊಂಡರು.
ಸೈನಿಕರ ಕಲ್ಯಾಣ ಮತ್ತು ಪುನವರ್ಸತಿ ಇಲಾಖೆ ವತಿಯಿಂದ ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಮಾಜಿ ಸೈನಿಕರ ಕುಂದುಕೊರತೆ ಸಭೆಯಲ್ಲಿ ಈ ಸಮಸ್ಯೆ ಅನಾವರಣಗೊಂಡಿತು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ಅವರು, ಎರಡು ವಿಳಾಸವನ್ನು ಪರಿಗಣಿಸಲು ಕಾಯ್ದೆಗೆ ಅಗತ್ಯವಿರುವ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಸೈನಿಕ ಉಮೇಶ್ ಮಾತನಾಡಿ, ನಾನು ಸೇನೆಗೆ ಸೇರಿದಾಗ ಸೇವಾ ಪುಸ್ತಕದಲ್ಲಿ ಕೊಡಗು ಜಿಲ್ಲೆ ನಮೂದಾಗಿದೆ. ಈಗ ಮೈಸೂರಿನಲ್ಲಿ 20 ವರ್ಷಗಳಿಂದ ವಾಸ ಮಾಡುತ್ತಿದ್ದು, ಈಗ ಅರ್ಜಿ ಸಲ್ಲಿಸಿದರೆ ಕೊಡಗು ಜಿಲ್ಲೆಯಲ್ಲಿ ಸಲ್ಲಿಸುವಂತೆ ಹೇಳುತ್ತಾರೆ. ಹೀಗಾಗಿ, ಎರಡು ವಿಳಾಸದ ದಾಖಲೆ ಪರಿಗಣಿಸಬೇಕು ಎಂದು ಕೋರಿದರು.
ನಿವೃತ್ತ ಸೈನಿಕರ ಸಂಘದ ದಿವಾಕರ್ ಮಾತನಾಡಿ, ಸೇನೆಗೆ ಸೇರುವಾಗ 624 ಮಾಜಿ ಸೈನಿಕರು ದಾಖಲೆಗಳಲ್ಲಿ ಕೊಡಗು ಜಿಲ್ಲೆಯ ಮೂಲ ವಿಳಾಸ ನೀಡಿದ್ದು, ಈಗ ನಿವೃತ್ತಿಯಾದ ಮೇಲೆ 300 ಜನರು ಮೈಸೂರಿನಲ್ಲಿ ಎಲ್ಲ ದಾಖಲೆ ಹೊಂದಿದ್ದಾರೆ. ಆದರೆ, ಸವಲತ್ತು ಪಡೆಯಲು ಅರ್ಜಿ ಸಲ್ಲಿಸಿದರೆ ಕೊಡಗು ಜಿಲ್ಲೆಗೆ ಸಲ್ಲಿಸುವಂತೆ ಹಿಂಬರಹ ಕೊಡುತ್ತಿರುವ ಪರಿಣಾಮ ಸಮಸ್ಯೆಯಾಗಿದೆ. ಇದು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇರುವ ಸಮಸ್ಯೆ. ಆದ್ದರಿಂದ ಕಾಯ್ದೆಗೆ ತಿದ್ದುಪಡಿ ತರಬೇಕು. ಸರ್ಕಾರಕ್ಕೆ ಈಗಾಗಲೇ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು.
ತಿದ್ದುಪಡಿ ತರಲು ಸರ್ಕಾರಕ್ಕೆ ಶಿಫಾರಸು
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಸೇವಾ ಪುಸ್ತಕದಲ್ಲಿ ನೀಡಿರುವ ವಿಳಾಸವನ್ನು ನಿವೃತ್ತಿಯಾದಾಗ ಪರಿಗಣಿಸುವುದು. ಒಂದು ವೇಳೆ ನಿವೃತ್ತಿಯಾಗುವಾಗ ಇರುವ ವಿಳಾಸವನ್ನು ಮೂಲ ವಿಳಾಸಕ್ಕೆ ಬದಲಿಸಿಕೊಳ್ಳಲು ಅವಕಾಶ ಕೊಡಲು ಕಾಯ್ದೆಗೆ ಅಗತ್ಯವಿರುವ ತಿದ್ದುಪಡಿ ತರಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು.
ಮೂಲ ವಿಳಾಸವನ್ನು ಬದಲಿಸಿಕೊಳ್ಳುವ ಅಥವಾ ಹಾಲಿ ಇರುವ ವಿಳಾಸವನ್ನು ಪರಿಗಣಿಸುವಂತೆ ಅವಕಾಶ ನೀಡುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು. ಇಂತಹ ಸಮಸ್ಯೆ ಎದುರಿಸುತ್ತಿರುವ ಎಲ್ಲರ ದಾಖಲೆ ಪಡೆದು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಟಿ.ಬಿ.ನಾಣಯ್ಯ ಮಾತನಾಡಿ, ಹುಣಸೂರು ತಾಲೂಕಿನಲ್ಲಿ ಸರ್ಕಾರದಿಂದ ಮಂಜೂರಾಗಿರುವ ಜಮೀನನ್ನು ಬಿಟ್ಟುಕೊಡದೆ ಕೆಲವರು ಮನೆ ಕಟ್ಟಿಕೊಂಡು ವ್ಯವಸಾಯ ಮಾಡುತ್ತಿದ್ದು, ಪೊಲೀಸರ ಸಮ್ಮುಖದಲ್ಲಿ ಭೂಮಾಪನ ಆಗಿದೆ. ತೆರವುಗೊಳಿಸಿ ಜಮೀನು ಬಿಡಿಸಿಕೊಡುವಂತೆ ಡಿಸಿಗೆ ಮನವಿ ಮಾಡಿದರು.
ಮತ್ತೊಬ್ಬ ಮಾಜಿ ಸೈನಿಕ ಮಾತನಾಡಿ, 2012ರಲ್ಲಿ ಮುಡಾದಿಂದ(ಈಗ ಎಂಡಿಎ) ನಿವೇಶನಕ್ಕೆ ಖಾತೆ ಆಗಿದ್ದರೂ ಸಿಡಿಆರ್ ಕೊಡುತ್ತಿಲ್ಲ. ಪರಿಶೀಲಿಸಿ ಕೊಡುವಂತೆ ಕೋರಿದರು. ಹುಣಸೂರು ತಾಲೂಕಿನ ಹುಯಿಗೊಡನಹಳ್ಳಿ ಗ್ರಾಮದ ವಿ.ಎಸ್.ಚಂದ್ರಾಮಣಿ ಅವರು, ತಮ್ಮ ಪತಿಗೆ ಮಂಜೂರಾಗಿದ್ದ ಜಮೀನಿಗೆ ಪೌತಿ ಖಾತೆ ಮಾಡಿಕೊಡುತ್ತಿಲ್ಲ. ತಹಸೀಲ್ದಾರ್ ಕಚೇರಿಗೆ ಅಲೆದು ಸಾಕಾಗಿದೆ ಎಂದು ಅಳಲು ತೋಡಿಕೊಂಡರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ, ಪೌತಿ ಖಾತೆ ಮಾಡಿಕೊಡಲು ಏನು ಸಮಸ್ಯೆ? ಜಮೀನಿನಲ್ಲಿ ಇಲ್ಲದಿರುವುದಕ್ಕೂ, ಖಾತೆ ಮಾಡಿಕೊಡುವುದಕ್ಕೂ ಸಂಬಂಧವಿಲ್ಲ. ಕೂಡಲೇ ಖಾತೆ ಮಾಡಿಕೊಟ್ಟು ವರದಿ ಸಲ್ಲಿಸುವಂತೆ ಹುಣಸೂರು ತಹಸೀಲ್ದಾರ್‌ರಿಗೆ ಸೂಚಿಸಿದರು.
ಕೆ.ಕೆ.ಉತ್ತಪ್ಪ ಮಾತನಾಡಿ, 1992ರಿಂದಲೂ ಮೈಸೂರಿನಲ್ಲಿ ವಾಸವಾಗಿ ಅರ್ಜಿ ಸಲ್ಲಿಸಿದರೂ ನಿವೇಶನ ಸಿಕ್ಕಿಲ್ಲ. ಆದರೆ, ನನ್ನ ಬಳಿಕ ಸಲ್ಲಿಕೆ ಮಾಡಿದ ಅರ್ಜಿದಾರರಿಗೆ ನಿವೇಶನ ಕೊಡಲಾಗಿದೆ. ಬೇರೆಯವರಿಗೆ ಕೊಟ್ಟಿರುವ ಬಗ್ಗೆ ಆಕ್ಷೇಪವಿಲ್ಲ. ನನಗೂ ನಿವೇಶನ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಆರ್.ರಕ್ಷಿತ್, ಸೈನಿಕರ ಕಲ್ಯಾಣ ಮತ್ತು ಪುನವರ್ಸತಿ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ರೆಡ್ಡಿ, ಎಫ್‌ಡಿಎ ಮಂಜುನಾಥ್ ಕಲಾಲ, ಅಧೀಕ್ಷಕ ಜಗದೀಶ್, ವೆಲ್‌ಫೇರ್ ಆರ್ಗನೈಸೇಷನ್ ಡಿ.ವಿಜಯಕುಮಾರ್ ಪಾಲ್ಗೊಂಡಿದ್ದರು
ವೇತನ ನಿಗದಿಪಡಿಸಲು ಮನವಿ
ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 13 ಮಾಜಿ ಯೋಧರಿಗೆ ವೇತನ ನಿಗದಿ ಪಡಿಸುವಂತೆ ನೌಕರ ಪ್ರಭು ಕೋರಿದರು. ಸೇನೆಯಿಂದ ಬಂದ ಬಳಿಕ ವಿವಿಧ ಇಲಾಖೆಗಳಲ್ಲಿ ನೌಕರಿ ಕೊಡಲಾಗಿದೆ.
ಕಂದಾಯ ಇಲಾಖೆಗೆ ಸೇರಿದ ವಿಎಗಳು, ಎಫ್‌ಡಿಎಗಳಿಗೆ ವೇತನ ಆಯೋಗದಂತೆ ವೇತನ ಕೊಡಲಾಗುತ್ತಿದೆ. ಆದರೆ, ಜನನ ಮತ್ತು ಮರಣ ಇಲಾಖೆ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ 13 ಜನರಿಗೆ ವೇತನ ನಿಗದಿಯಾಗಿಲ್ಲ. 41ಸಿ ಪ್ರಕಾರ ಆಯಾಯ ಇಲಾಖೆಯಿಂದ ವೇತನ ನಿಗದಿ ಪಡಿಸಬೇಕಾದರೂ ಈತನಕ ಆಗಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ಡಿಸಿ, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.