ರಾಜರಾಜೇಶ್ವರಿನಗರದಲ್ಲಿರುವ ಡಿ. ದೇವರಾಜು ಅರಸು ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯದ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರಾಘವೇಂದ್ರ, ಡಾ. ವಿನೋದ, ಮಹಾಲಕ್ಷ್ಮೀ, ನಾಗರತ್ನ, ಸರಸ್ವತಿ ಇನ್ನಿತರರಿದ್ದರು.
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿ ರಾಘವೇಂದ್ರ ಕಿವಿಮಾತು
- ಬೀಳ್ಕೊಡುಗೆ ಕಾರ್ಯಕ್ರಮ
ಮೈಸೂರು: ವಿದ್ಯಾರ್ಥಿಗಳು ಶ್ರದ್ಧೆಯಿಂದ, ತಾಳ್ಮೆಯಿಂದ ಒಂದೇ ಗುರಿ ಇಟ್ಟುಕೊಂಡು ಸಾಧನೆ ಮಾಡಿ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿ ರಾಘವೇಂದ್ರ ತಿಳಿಸಿದರು.
ರಾಜರಾಜೇಶ್ವರಿನಗರದಲ್ಲಿರುವ ಡಿ. ದೇವರಾಜು ಅರಸು ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ನಿಲಯದ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿನಿಯರು ಚನ್ನಾಗಿ ಓದಿಕೊಂಡು ಖ್ಯಾತಿ, ಹಣ, ಆರೋಗ್ಯ ಹೇಗೆ ಶಿಕ್ಷಣದ ಮೂಲಕ ಪಡೆದುಕೊಳ್ಳಬೇಕು ಎಂಬುದನ್ನು ಚಿಂತನೆ ಮಾಡಬೇಕು. ತಾಯಿ-ತಂದೆ, ಗುರುಹಿರಿಯರಿಗೆ ಗೌರವ ಕೊಡಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉನ್ನತ ಹುದ್ದೆ ಅಲಂಕರಿಸಬೇಕು. ನ್ಯಾಯ, ನೀತಿ, ಧರ್ಮ, ತಾಳ್ಮೆ ಇದ್ದರೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ಪ್ರತಿಯೊಬ್ಬರು ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕುಬೇಕು ಎಂದರು.
ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಿನೋದ ಮಾತನಾಡಿ, ಜಗತ್ತಿಗೆ ಶಾಂತಿ ಸಾರಿದ ಬುದ್ಧಪೂರ್ಣಿಮೆ ದಿನ ಹಾಗೂ ದೇಶವನ್ನು ಕಟ್ಟಲು ಶ್ರಮಿಸುತ್ತಿರುವ ಕಾರ್ಮಿಕರ ದಿನಾಚರಣೆಯ ದಿನ ಈ ಸಮಾರಂಭವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ತಳಸಮುದಾಯದ ಜನರ ಏಳಿಗೆಗೆ ಶ್ರಮಿಸಿದ ಡಿ. ದೇವರಾಜ ಅರಸು ಅವರ ಜೀವನ ಚರಿತ್ರೆಯನ್ನು ವಿದ್ಯಾರ್ಥಿನಿಯರು ಓದಬೇಕು. ಅವರು ನಿಮಗೆ ಸ್ಫೂರ್ತಿಯಾಗುತ್ತಾರೆ. ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನಿವೃತ್ತ ನಿಲಯಪಾಲಕಿ ಮಂಜುಳಾ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದವರೇ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಯಾರು ಕದಿಯಲಾರದ ಸಂಪತ್ತು ವಿದ್ಯೆಯಾಗಿದ್ದು, ಕಷ್ಟಪಟ್ಟು ಸರಸ್ವತಿ ಒಲಿಸಿಕೊಳ್ಳಬೇಕು. ಗುರಿಇಟ್ಟುಕೊಂಡು ಸಾಧನೆ ಮಾಡಬೇಕು ಎಂದರು.
ನಿಲಯಪಾಲಕ ಜಗದೀಶ್ ಕೋರಿ ಮಾತನಾಡಿ, ಸರ್ಕಾರ ವಿದ್ಯಾರ್ಥಿನಿಲಯದಲ್ಲಿ ಎಲ್ಲ ಅನುಕೂಲತೆ ಮಾಡಿಕೊಟ್ಟಿದ್ದು ಈ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಂಡು ತಮ್ಮ ಕಾಲಮೇಲೆ ತಾವು ನಿಂತುಕೊಳ್ಳುವುದೇ ಸಾಮಾಜಿಕ ನ್ಯಾಯ ಒದಗಿಸಿದಂತೆ. ಓದುವಾಗ ಅವಮಾನ, ಅಪಮಾನ, ಕಷ್ಟ ಸುಖಗಳಿರುತ್ತವೆ. ಆದರೆ, ಇವೆಲ್ಲವನ್ನು ಬದಿಗೊತ್ತಿ ನಿರಂತರ ಪರಿಶ್ರಮದಿಂದ ಸಾಧನೆ ಮಾಡಿದರೆ ಗುರಿ ತಲುಪಬಹುದು ಎಂದರು.
ನಿಲಯಪಾಲಕರಾದ ಮಹಾಲಕ್ಷ್ಮೀ, ನಾಗರತ್ನ, ಸರಸ್ವತಿ, ವಿದ್ಯಾರ್ಥಿನಿಯವರಾದ ಸಿಂಧು, ಜಿ.ಮಹೇಶ್ವರಿ, ಪೂಜಾ, ರಕ್ಷಿತಾ, ಆರ್.ಚಂದನಾ ಉಪಸ್ಥಿತರಿದ್ದರು.