ನಗರದ ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಕೀಲರು ಹಾಗೂ ನೋಟರಿಗಳ ಕಟ್ಟಡ ನಿರ್ಮಾಣಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೂಮಿಪೂಜೆ ನೆರವೇರಿಸಿದರು. ಉಷಾರಾಣಿ, ಬಿ.ಆರ್.ಚಂದ್ರಮೌಳಿ, ಎಸ್.ಲೋಕೇಶ್, ಎಂ.ವಿ.ಚಂದ್ರಶೇಖರ್ ಇದ್ದರು.
- ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಳಿಕೆ
ದೇಶದಲ್ಲಿ ನ್ಯಾಯಾಂಗ ಬಲಿಷ್ಠ ಸ್ತಂಭ, ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ನ್ಯಾಯಾಲಯ ಕಚೇರಿ ಆವರಣದಲ್ಲಿ ಮಹಿಳಾ ವಕೀಲರು ಹಾಗೂ ನೋಟರಿಗಳ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನ್ಯಾಯಾಲಯ ತೀರ್ಪುಗಳು ಜನರ ಪರವಾಗಿಯೇ ಇವೆ. ನಮ್ಮ ದೇಶದ ಕಾನೂನು ಶಕ್ತಿಯುತವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೈಲ್ವೆ, ರಸ್ತೆಗಳು, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಾಗಳು ತುಂಬ ವೇಗವಾಗಿ ನಡೆಯುತ್ತಿವೆ. ಮೂಲ ಸೌಕರ್ಯದ ಜತೆ, ಭಾರತವನ್ನು ನಿರ್ಮಾಣ ಮಾಡಲು ಆರ್ಥಿಕತೆ ಬೆಳೆವಣಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಪ್ರಾಚೀನ ಇತಿಹಾಸ ಇರುವ ದೇಶದಲ್ಲಿ ,ಆಧುನಿಕ ಸೌಲಭ್ಯಗಳ ಅಗತ್ಯ ಕೂಡ ಇದೆ. ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕು. ದೇಶದ ಅಭಿವೃದ್ಧಿಯಾದರೆ, ನಾವುಗಳು ಕೂಡ ಅಭಿವೃದ್ಧಿಯತ್ತ ಸಾಗುತ್ತೇವೆ ಎಂದು ಹೇಳಿದರು.
ವಕೀಲರ ವೃತ್ತಿ ಮಾದರಿ ವೃತ್ತಿಯಾಗಿದ್ದು, ಭಾರತದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ವಕೀಲ ವೃತ್ತಿ ಪ್ರಮುಖವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರದಲ್ಲಿಯೂ ಅರಮನೆ ವಿಚಾರದಲ್ಲಿ ವಕೀಲರ ಸಂಬಂಧ ಇದೆ. ನ್ಯಾಯಾಂಗದಿಂದ ಅರಮನೆ ವಿಚಾರವಾಗಿ ಒಳ್ಳೆಯ ಅಭಿಪ್ರಾಯ ಇದೆ. ನ್ಯಾಯಾಂಗಕ್ಕೆ ನಾವು ಚಿರ ಋಣಿ ಯಾಗಿರುತ್ತೇವೆ. ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ನ್ಯಾಯಾಂಗ ತೀರ್ಪುಗಳನ್ನು ಗೌರವಿಸುತ್ತೇವೆ ಎಂದರು.
ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಉಷಾರಾಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಲ್.ನಾಗೇಂದ್ರ, ಹಿರಿಯ ವಕೀಲ ಬಿ.ಆರ್.ಚಂದ್ರಮೌಳಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ಉಪಾಧ್ಯಕ್ಷ ಎಂ.ವಿ. ಚಂದ್ರಶೇಖರ್, ಕಾರ್ಯದರ್ಶಿ ಎ.ಜಿ.ಸುಧೀರ್, ಖಜಾಂಚಿ ಎಚ್.ಜಿ.ಭರತ್, ಜಂಟಿ ಕಾರ್ಯದರ್ಶಿ ಕೆ.ಆರ್.ಚರಣ್‌ರಾಜ್, ಮಹಿಳಾ ಜಂಟಿ ಕಾರ್ಯದರ್ಶಿ ಬಿ.ವಿ.ವಿನೋದಾ ಇದ್ದರು.