‘ದೀಪ ಪ್ರೌಢಶಾಲೆ’ಯ ವಿದ್ಯಾರ್ಥಿ ಸಂಘ ಮತ್ತು ದೀಪ ಹಸಿರುಪಡೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ‘ಮ್ಯಾನ್’ ಮನು, ಸುಬ್ಬರಾವ್, ಸದಾಶಿವ ಪೂಜಾರಿ, ಬಾಲಕೃಷ್ಣ, ಪ್ರಣಿತಾ, ಶಿಲ್ಪಾ ಜಗದೀಶ್, ತುಳಸಿ, ಡಿ.ರವಿಶಂಕರ್, ಸಂತೋಷ್ ಇತರರಿದ್ದರು. 
ಮೈಸೂರು

ಪ್ರತಿಯೊಬ್ಬರಿಗೂ ಪರಿಸರ ಶಿಕ್ಷಣ ಅಗತ್ಯ: ಪಕ್ಷಿ ತಜ್ಞ ‘ಮ್ಯಾನ್’ ಮನು ಅಭಿಮತ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿ ಜೀವನದಿಂದಲೇ ಸಂವಿಧಾನದ ಆಶಯಗಳನ್ನು ತಿಳಿಯಲು, ರಾಜಕೀಯ, ಆಡಳಿತ, ಕಲ್ಪನೆ ಮೂಡಿಸಲು ವಿದ್ಯಾರ್ಥಿ ಸಂಘದ ರಚನೆ ಸಹಕಾರಿ
  • ಪರಿಸರ ಪ್ರಜ್ಞೆಯನ್ನು ಮೂಡಿಸುವುದರಿಂದ ಮಕ್ಕಳು ಮುಂದೆ ಸತ್ಪ್ರಜೆಗಳಾಗುತ್ತಾರೆ
ಮೈಸೂರು:ರೂಪಾನಗರದಲ್ಲಿರುವ ದೀಪ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ‘ದೀಪ ಪ್ರೌಢಶಾಲೆ’ಯ ವಿದ್ಯಾರ್ಥಿ ಸಂಘ ಮತ್ತು ದೀಪ ಹಸಿರುಪಡೆ ಉದ್ಘಾಟನೆ, ಎನ್‌ಸಿಸಿ ಕೆಡೆಟ್‌ಗಳಿಗೆ ಪದಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಲೆಯ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷಿ ತಜ್ಞ ‘ಮ್ಯಾನ್’ ಮನು ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಸಂವಿಧಾನದ ಆಶಯಗಳನ್ನು ತಿಳಿಯಲು, ರಾಜಕೀಯ, ಆಡಳಿತ, ಕಲ್ಪನೆ ಮೂಡಿಸಲು ವಿದ್ಯಾರ್ಥಿ ಸಂಘದ ರಚನೆ ಸಹಕಾರಿ ಎಂದು ತಿಳಿಸಿದರು. 
ಸರ್ವರಿಗೂ ಸಮಾನ ಮತದಾನದ ಹಕ್ಕು ಇರುವುದು ಪ್ರಜಾಪ್ರಭುತ್ವದ ಒಂದು ವಿಶೇಷ. ಆದರೆ ಇಂದು ಮತಗಳನ್ನು ಮಾರಿಕೊಳ್ಳುವ ಸಂಸ್ಕೃತಿ ಹೆಚ್ಚಾಗಿದೆ. ಅದು ಹೋಗಬೇಕು. ಆಗ ಮಾತ್ರ ಅರ್ಹರು ಚುನಾಯಿತರಾಗಿ ಉತ್ತಮ ಆಡಳಿತಾತ್ಮಕ ಸರ್ಕಾರ ರಚನೆಯಾಗುತ್ತದೆ ಎಂದು ಹೇಳಿದರು.
ಪರಿಸರ ಪ್ರಜ್ಞೆಯನ್ನು ಮೂಡಿಸುವುದರಿಂದ ಮಕ್ಕಳು ಮುಂದೆ ಸತ್ಪ್ರಜೆಗಳಾಗುತ್ತಾರೆ. ಪರಿಸರ ಶಿಕ್ಷಣ ಪ್ರತಿ ಪ್ರಜೆಗೂ ಅವಶ್ಯಕತೆ ಎಂಬುದನ್ನು ಒಂದು ಪ್ರಸಂಗದ ಮೂಲಕ ವಿವರಿಸಿದರು. 
ಕೇಂದ್ರ ಸರ್ಕಾರ ಪ್ರತಿ ಶಾಲೆಯಲ್ಲಿಯೂ ಹಸಿರು ಪಡೆ ರಚಿಸಿ ಪರಿಸರ ಸಂರಕ್ಷಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರೋತ್ಸಾಹಿಸುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ನಾವು ಪರಿಸರವನ್ನು ನಾಶ ಮಾಡುತ್ತಿದ್ದೇವೆ. ಹಾಗಾಗಿ ಜನರಲ್ಲಿ ಪರಿಸರ ಪ್ರಜ್ಞೆ ಮೂಡಬೇಕು. ನಾವೆಲ್ಲರೂ ಪರಿಸರ ಉಳಿಸುವ, ಭೂಮಿಯನ್ನು ರಕ್ಷಿಸುವ ಪ್ರತಿಜ್ಞೆ ಮಾಡಿ ಅದರಂತೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. 
ದೀಪ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸುಬ್ಬರಾವ್ ಮಾತನಾಡಿ, ಚುನಾಯಿತ ಶಾಲಾ ಪ್ರತಿನಿಧಿಗಳು, ಹಸಿರುಪಡೆಯ ಪದಾಧಿಕಾರಿಗಳು ಹಾಗೂ ಎನ್‌ಸಿಸಿ ಕೆಡೆಟ್‌ಗಳು ಪ್ರತಿದಿನ ತಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು. ಪರಿಸರ ಕಾಳಜಿಯನ್ನು ಹೊಂದಿರಬೇಕು. ಶಿಸ್ತು, ಸಂಯಮವನ್ನು  ವ್ಯಕ್ತಿತ್ವಗಳಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಸಂಸ್ಥೆ ಉಪಾಧ್ಯಕ್ಷ ಸದಾಶಿವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕ ಬಾಲಕೃಷ್ಣ, ದೀಪ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರಣಿತಾ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶಿಲ್ಪಾಜಗದೀಶ್, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ತುಳಸಿ, ಸಂಯೋಜಕ ಡಿ.ರವಿಶಂಕರ್, ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್, ವಿದ್ಯಾರ್ಥಿ ಸಂಘ, ಹಸಿರುಪಡೆ, ಎನ್‌ಸಿಸಿ ಕೆಡೆಟ್‌ಗಳು, ಶಿಕ್ಷಕರು ಇದ್ದರು.