ಡಾ.ಕೆ.ಬಿ.ಲಿಂಗರಾಜು 
ಮೈಸೂರು

ಎಸ್‌ಎಂಇ ಬೆಳವಣಿಗೆಗೆ ನಿಧಿ ಸ್ಥಾಪನೆ ಸ್ವಾಗತಾರ್ಹ: ಡಾ.ಕೆ.ಬಿ.ಲಿಂಗರಾಜು

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಸ್‌ಎಂಇ) ಬೆಳವಣಿಗೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ. ನಿಧಿ ಸ್ಥಾಪಿಸಲು ಅನುಮೋದಿಸಿರುವುದನ್ನು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಂಸಿಸಿಐ) ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ಸ್ವಾಗತಿಸಿದ್ದಾರೆ.

2026-27ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಈ ನಿಧಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರಕ್ಕೆ ಮಹತ್ವದ ಹೆಜ್ಜೆಯಾಗಿದೆ. ನಿಧಿಯ ಮೂಲಕ ಅರ್ಹ ಕೈಗಾರಿಕೆಗಳಿಗೆ ದೀರ್ಘಾವಧಿಯ ಬಂಡವಾಳ ದೊರೆಯಲಿದ್ದು, ಕೈಗಾರಿಕಾ ವಿಸ್ತರಣೆ, ತಂತ್ರಜ್ಞಾನ ನವೀಕರಣ, ಉತ್ಪಾದನಾ ಸಾಮರ್ಥ್ಯ ಹೆಚ್ಚಳ, ನಾವೀನ್ಯತೆ ಹಾಗೂ ರಫ್ತು ವೃದ್ಧಿಗೆ ನೆರವಾಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ, ಮಧ್ಯಮ ಹಾಗೂ ಉತ್ಪಾದನಾ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಹಲವು ಕೈಗಾರಿಕೆಗಳು ಉತ್ತಮ ಸಾಮರ್ಥ್ಯ ಹೊಂದಿದ್ದರೂ ವಿಸ್ತರಣೆ, ತಂತ್ರಜ್ಞಾನ ಅಳವಡಿಕೆ, ಯಾಂತ್ರೀಕರಣ ಹಾಗೂ ರಫ್ತು ವಿಸ್ತರಣೆಗೆ ಅಗತ್ಯವಿರುವ ದೀರ್ಘಾವಧಿ ಬಂಡವಾಳದ ಕೊರತೆ ಎದುರಿಸುತ್ತಿವೆ. ಆದ್ದರಿಂದ ಎಸ್‌ಎಂಇ ನಿಧಿಯ ಪ್ರಯೋಜನ ಮೈಸೂರಿನ ಅರ್ಹ ಕೈಗಾರಿಕೆಗಳಿಗೆ ತ್ವರಿತವಾಗಿ ತಲುಪುವಂತೆ ಸರ್ಕಾರ ಹಾಗೂ ಹಣಕಾಸು ಸಂಸ್ಥೆಗಳು ವಿಶೇಷ ನೆರವು ಕಲ್ಪಿಸಬೇಕು. ಯೋಜನೆಯ ಅರ್ಹತೆ, ಅರ್ಜಿ ಪ್ರಕ್ರಿಯೆ ಹಾಗೂ ಬಂಡವಾಳ ಪಡೆಯುವ ವಿಧಾನದ ಬಗ್ಗೆ ಕೈಗಾರಿಕೆಗಳಿಗೆ ಸರಳವಾಗಿ ಮಾಹಿತಿ ನೀಡಬೇಕು ಎಂದು ಡಾ.ಲಿಂಗರಾಜು ಒತ್ತಾಯಿಸಿದ್ದಾರೆ.

ಮೈಸೂರಿನ ಎಸ್‌ಎಂಇಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ಪಾದನೆ ಹಾಗೂ ರಫ್ತು ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಇದರಿಂದ ಉದ್ಯೋಗ ಸೃಷ್ಟಿ ಮತ್ತು ಮೈಸೂರು ಭಾಗದ ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದ್ದಾರೆ.