ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) 
ಮೈಸೂರು

ತಾಲೂಕುಗಳಲ್ಲಿ ವಿದ್ಯುತ್ ಟಿಸಿ ಬ್ಯಾಂಕ್ ಸ್ಥಾಪನೆ

ಪ್ರಮುಖ ಮುಖ್ಯಾಂಶಗಳು

  • ಟ್ರಾನ್ಸ್‌ಫಾರ್ಮರ್‌ಗಳ ತುರ್ತು ನಿರ್ವಹಣೆಗೆ ಸೆಸ್ಕ್ ಸಜ್ಜು
ಮೈಸೂರು: ಗ್ರಾಹಕರಿಗೆ ಅಡಚಣೆರಹಿತ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಅಗತ್ಯ ಕ್ರಮವಹಿಸಿದ್ದು, ಇದಕ್ಕಾಗಿ ಪ್ರತಿ ತಾಲೂಕಲ್ಲಿ ವಿದ್ಯುತ್ ಪರಿವರ್ತಕಗಳ ಬ್ಯಾಂಕ್ ಸ್ಥಾಪಿಸಿ, ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು (ಟಿಸಿ)ಸಂಗ್ರಹಿಸಿಕೊಳ್ಳಲಾಗಿದೆ.
ಸೆಸ್ಕ್ ವ್ಯಾಪ್ತಿಗೆ ಒಳಪಡುವ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳ ಎಲ್ಲ ತಾಲೂಕುಗಳಲ್ಲಿರುವ ಟಿಸಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಟಿಸಿಗಳನ್ನು ನಿಗಮದ ವಿವಿಧ ದಾಸ್ತಾನು ಕೇಂದ್ರಗಳಲ್ಲಿ ಬಫರ್ ಸ್ಟಾಕ್‌ಗಳನ್ನು ಸಂಗ್ರಹಿಸಿ ಇರಿಸಲಾಗಿದೆ. 
ಇದರಿಂದ ತಾಲೂಕಿನ ಯಾವುದೇ ಪ್ರದೇಶದಲ್ಲಿರುವ ವಿದ್ಯುತ್ ಪರಿವರ್ತಕಗಳಲ್ಲಿ ದೋಷ ಉಂಟಾದರೂ ತ್ವರಿತವಾಗಿ ಬದಲಾವಣೆ ಅಥವಾ ದುರಸ್ತಿ ಕಾರ್ಯಕೈಗೊಳ್ಳಲು ಅನುಕೂಲವಾಗಲಿದೆ ಎಂದು ಸೆಸ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದಿನ ದಿನಗಳಲ್ಲಿ ಮುಂಗಾರು ಕೂಡ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಳೆ ಹಾಗೂ ಗಾಳಿಯಿಂದಾಗಿ ಕೆಲವು ಕಡೆಗಳಲ್ಲಿ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. 
ಆದ್ದರಿಂದ ಅವುಗಳನ್ನು ಶೀಘ್ರ ದುರಸ್ತಿ ಮಾಡಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮವಹಿಸಲು ಸೆಸ್ಕ್ ಸನ್ನದ್ಧವಾಗಿದೆ. ಆದ್ದರಿಂದ ಸಾರ್ವಜನಿಕರು ಮತ್ತು ರೈತರು ಟ್ರಾನ್ಸ್‌ಫಾರ್ಮರ್‌ಗಳಲ್ಲಿ ದೋಷ ಕಂಡುಬಂದಲ್ಲಿ ತಕ್ಷಣವೇ ಸೆಸ್ಕ್ 24*7 ಸಹಾಯವಾಣಿ 1912 ಅಥವಾ ಸಮೀಪದ ಸೇವಾ ಕೇಂದ್ರಗಳಿಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಗ್ರಾಹಕರು ಯಾವುದೇ ವಿದ್ಯುತ್ ಸಂಪರ್ಕದ ಮಾಹಿತಿಗಾಗಿ ಸೆಸ್ಕ್‌ನ ಉಪವಿಭಾಗ, ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.