ಬಯೋಗ್ಯಾಸ್ ಘಟಕ ಸ್ಥಾಪನೆ 
ಮೈಸೂರು

ಟೈಟಾನ್–ಎಸ್‌ವಿವೈಎಂ ಸಹಭಾಗಿತ್ವ: 5 ಸಾವಿರ ಮಂದಿಗೆ ಆಸರೆ

ಸ್ವಾವಲಂಬನೆಯತ್ತ ಬುಡಕಟ್ಟು, ಗ್ರಾಮೀಣ ಸಮುದಾಯಗಳು; 453 ಬಯೋಗ್ಯಾಸ್ ಘಟಕ ಸ್ಥಾಪನೆ

ಟೈಟಾನ್ ಕಂಪನಿ ಲಿಮಿಟೆಡ್ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ (ಎಸ್‌ವಿವೈಎಂ) ಸಹಭಾಗಿತ್ವದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬುಡಕಟ್ಟು ಹಾಗೂ ಹಿಂದುಳಿದ ಗ್ರಾಮೀಣ ಸಮುದಾಯಗಳ ಸುಮಾರು 5 ಸಾವಿರ ಮಂದಿಗೆ ಶಿಕ್ಷಣ, ಉದ್ಯೋಗ ಕೌಶಲ್ಯ, ಜೀವನೋಪಾಯ ಹಾಗೂ ಉದ್ಯಮಶೀಲತೆ ಕ್ಷೇತ್ರಗಳಲ್ಲಿ ನೆರವು ಒದಗಿಸಲಾಗಿದ್ದು, ಸ್ವಾವಲಂಬನೆಯತ್ತ ಮುನ್ನಡೆಸುವ ಪ್ರಯತ್ನಕ್ಕೆ ಉತ್ತಮ ಫಲಿತಾಂಶ ದೊರೆತಿದೆ.

2013ರಲ್ಲಿ ಬುಡಕಟ್ಟು ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭವಾದ ಸಹಭಾಗಿತ್ವವು 2020-21ರಿಂದ ವೃತ್ತಿ ಕೌಶಲ್ಯ ತರಬೇತಿ, ಸುಸ್ಥಿರ ಜೀವನೋಪಾಯ, ಗ್ರಾಮೀಣ ಉದ್ಯಮಶೀಲತೆ ಮತ್ತು ಶುದ್ಧ ಇಂಧನ ಕ್ಷೇತ್ರಗಳಿಗೂ ವಿಸ್ತರಿಸಿದೆ. ಯೋಜನೆಯಡಿ ತರಬೇತಿ ಪಡೆದವರಲ್ಲಿ ಶೇ.85ಕ್ಕೂ ಹೆಚ್ಚು ಮಂದಿ ಉದ್ಯೋಗ ಅಥವಾ ಜೀವನೋಪಾಯ ಕಂಡುಕೊಂಡಿದ್ದಾರೆ. ಫಲಾನುಭವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.

ಸೆ.28ರಂದು ಟೈಟಾನ್ ಕಂಪನಿ ಲಿಮಿಟೆಡ್‌ನ ಸ್ವತಂತ್ರ ನಿರ್ದೇಶಕ ಅನಿಲ್ ಚೌಧರಿ ನೇತೃತ್ವದ ನಿಯೋಗವು ಮೈಸೂರು ಜಿಲ್ಲೆಯ ವಿವಿಧ ಯೋಜನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಮಹಿಳಾ ಉದ್ಯಮಿಗಳು, ರೇಷ್ಮೆ ಕೃಷಿ ತರಬೇತಿ ಪಡೆದವರು ಹಾಗೂ ಅರಣ್ಯ ಪ್ರದೇಶದ ಬುಡಕಟ್ಟು ಮಕ್ಕಳೊಂದಿಗೆ ಸಂವಾದ ನಡೆಸಿದ ನಿಯೋಗ, ಗ್ರಾಮಗಳಲ್ಲಿ ಸ್ಥಾಪಿಸಿರುವ ಗೃಹಬಳಕೆಯ ಬಯೋಗ್ಯಾಸ್ ಘಟಕಗಳು ಮತ್ತು ನಾಟಿ ಕೋಳಿ ಸಾಕಾಣಿಕೆ ಘಟಕಗಳನ್ನೂ ವೀಕ್ಷಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಅನಿಲ್ ಚೌಧರಿ, ಜನರನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುವ ಸ್ಪಷ್ಟ ಮಾರ್ಗಸೂಚಿ ಈ ಯೋಜನೆಯ ಪ್ರಮುಖ ಅಂಶವಾಗಿದೆ. ಕೇವಲ ಒಂದು ಬಾರಿಯ ಆರ್ಥಿಕ ನೆರವಿಗಿಂತ ನಿರಂತರ ಬದ್ಧತೆ ಮತ್ತು ಫಲಿತಾಂಶದ ಜವಾಬ್ದಾರಿಯೇ ದೀರ್ಘಕಾಲೀನ ಸಾಮಾಜಿಕ ಪರಿವರ್ತನೆಗೆ ಅಗತ್ಯ ಎಂದು ಹೇಳಿದರು.

ಟೈಟಾನ್‌ನ ಮುಖ್ಯ ಸುಸ್ಥಿರತಾ ಅಧಿಕಾರಿ ಎನ್.ಇ. ಶ್ರೀಧರ್ ಮಾತನಾಡಿ, ಸಮುದಾಯಗಳಿಗಾಗಿ ಕೆಲಸ ಮಾಡುವುದಕ್ಕಿಂತ ಸಮುದಾಯಗಳೊಂದಿಗೆ ದೀರ್ಘಕಾಲೀನ ಸಹಭಾಗಿತ್ವ ನಿರ್ಮಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಮೈಸೂರು ವ್ಯಾಪ್ತಿಯಲ್ಲಿ ಎಸ್‌ವಿವೈಎಂ ಜತೆಗಿನ ಸಹಭಾಗಿತ್ವದಡಿ 453 ಗೃಹಬಳಕೆಯ ಬಯೋಗ್ಯಾಸ್ ಘಟಕಗಳನ್ನು ಸ್ಥಾಪಿಸಲಾಗಿದ್ದು, ಪರಿಸರ ಹಾನಿಕಾರಕ ಉರುವಲು ಕಟ್ಟಿಗೆಯ ಬಳಕೆಯನ್ನು ಕಡಿಮೆ ಮಾಡಿ ಶುದ್ಧ ಅಡುಗೆ ಅನಿಲದ ಸೌಲಭ್ಯ ಒದಗಿಸಲಾಗಿದೆ ಎಂದರು.

ಎಸ್‌ವಿವೈಎಂ ಸಿಇಒ ಸವಿತಾ ಸುಳುಗೋಡು ಮಾತನಾಡಿ, ಶಾಲಾ ಶಿಕ್ಷಣದಿಂದ ಆರಂಭಿಸಿ ಉನ್ನತ ಶಿಕ್ಷಣ, ವೃತ್ತಿ ಕೌಶಲ್ಯ, ಜೀವನೋಪಾಯ ಮತ್ತು ಉದ್ಯಮಶೀಲತೆಯವರೆಗೆ ನಿರಂತರ ಬೆಂಬಲ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜೀವನೋಪಾಯ ತರಬೇತಿ ಕೇಂದ್ರಗಳನ್ನು ಉತ್ಕೃಷ್ಟತಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದು ತಿಳಿಸಿದರು.

700ಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳಿಗೆ ನೆರವು

2013-14ರಲ್ಲಿ ಎಚ್.ಡಿ.ಕೋಟೆ ತಾಲೂಕಿನ ಹೊಸಹಳ್ಳಿ ಬಳಿಯ ವಿವೇಕ ಬುಡಕಟ್ಟು ಕಲಿಕಾ ಕೇಂದ್ರದಲ್ಲಿ 125 ಮಕ್ಕಳಿಗೆ ಶಿಕ್ಷಣ ನೆರವಿನೊಂದಿಗೆ ಆರಂಭವಾದ ಯೋಜನೆ ಇದೀಗ 700ಕ್ಕೂ ಹೆಚ್ಚು ಗಿರಿಜನ ವಿದ್ಯಾರ್ಥಿಗಳನ್ನು ತಲುಪಿದೆ. ಈ ಪೈಕಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು 10ನೇ ತರಗತಿ ಪೂರ್ಣಗೊಳಿಸಿ ಕಾಲೇಜು ಶಿಕ್ಷಣ ಮುಂದುವರಿಸಿದ್ದಾರೆ. 2024-25 ಮತ್ತು 2025-26ರಲ್ಲಿ ಪದವಿ ಪೂರ್ಣಗೊಳಿಸಿದವರಲ್ಲಿ ಶೇ.60ಕ್ಕೂ ಹೆಚ್ಚು ಮಂದಿ ಕಾರ್ಪೊರೇಟ್ ಮತ್ತು ಸಾರ್ವಜನಿಕ ಉದ್ಯೋಗ ಕ್ಷೇತ್ರ ಪ್ರವೇಶಿಸಿದ್ದಾರೆ.

ವಿವೇಕ ಗ್ರಾಮೀಣ ಜೀವನೋಪಾಯ ಕೇಂದ್ರದ ಮೂಲಕ 2020-21ರಿಂದ 3,788 ಯುವಕರು, ಮಹಿಳೆಯರು, ಸಣ್ಣ ರೈತರು ಹಾಗೂ ದಿವ್ಯಾಂಗರಿಗೆ ತರಬೇತಿ ನೀಡಲಾಗಿದೆ. ತರಬೇತಿ ಪಡೆದವರಲ್ಲಿ ಶೇ.85ರಷ್ಟು ಮಂದಿ ಉದ್ಯೋಗ ಅಥವಾ ಸ್ವಯಂ ಉದ್ಯೋಗ ಪಡೆದಿದ್ದು, 722 ಮಂದಿ ತಿಂಗಳಿಗೆ ಸರಾಸರಿ ₹12 ಸಾವಿರದವರೆಗೆ ಆದಾಯ ಗಳಿಸುತ್ತಿದ್ದಾರೆ. 2 ಸಾವಿರಕ್ಕೂ ಹೆಚ್ಚು ರೈತರಿಗೆ ತರಬೇತಿ ನೀಡಲಾಗಿದ್ದು, 1,952 ರೈತರು ಆದಾಯ ಹೆಚ್ಚಳ ದಾಖಲಿಸಿದ್ದಾರೆ.

ಮಹಿಳೆಯರಿಗೆ ಉದ್ಯಮಶೀಲತೆಗೆ ಉತ್ತೇಜನ

ಯೋಜನೆಯಡಿ ವಿದ್ಯಾರ್ಥಿವೇತನ ಪಡೆದವರಲ್ಲಿ ಶೇ.75ಕ್ಕೂ ಹೆಚ್ಚು ಮಂದಿ ಗ್ರಾಮೀಣ ಯುವತಿಯರಾಗಿದ್ದಾರೆ. ವಿವೇಕ ಚೇತನ ಕಾರ್ಯಕ್ರಮದಡಿ 70ಕ್ಕೂ ಹೆಚ್ಚು ಪ್ರತಿಭಾವಂತ ಗ್ರಾಮೀಣ ಹೆಣ್ಣುಮಕ್ಕಳಿಗೆ ವಸತಿ ಸಹಿತ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಶಿಕ್ಷಣ ನೀಡಲಾಗುತ್ತಿದೆ. ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ 80 ನವ ಉದ್ಯಮಿಗಳ ಪೈಕಿ ಬಹುತೇಕರು ಮಹಿಳೆಯರಾಗಿದ್ದು, ಸಿರಿಧಾನ್ಯ ಸಂಸ್ಕರಣೆ, ಸೈಲೇಜ್ ತಯಾರಿಕೆ ಮತ್ತು ಹೈನುಗಾರಿಕೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಯಶಸ್ಸಿನ ಮಾದರಿಯಾದ ಗ್ರಾಮೀಣ ಯುವಕರು

ನಾಗರಹೊಳೆ ಅಂಚಿನ ಬ್ರಹ್ಮಗಿರಿಹಾಡಿಯ ಸರಸು ಎಂಬ ಮಹಿಳೆ ಕೋಳಿ ಸಾಕಾಣಿಕೆ ತರಬೇತಿ ಪಡೆದು 30 ಮರಿಗಳಿಂದ ಆರಂಭಿಸಿ ಕೋಳಿಗಳ ಸಂಖ್ಯೆಯನ್ನು 65ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ತಿಂಗಳಿಗೆ ಸುಮಾರು ₹4,200 ನಿವ್ವಳ ಲಾಭ ಗಳಿಸುತ್ತಿದ್ದಾರೆ.

ಸುಣಕಲ್ಮುಂಟಿಯ ಯುವ ರೈತ ಯಶಸ್ ಎಚ್.ಆರ್. ರೇಷ್ಮೆ ಕೃಷಿ ತರಬೇತಿ ಪಡೆದು ಮೊದಲ ಬ್ಯಾಚ್ ರೇಷ್ಮೆ ಗೂಡುಗಳ ಮಾರಾಟದಿಂದ ₹19,978 ಆದಾಯ ಗಳಿಸಿದ್ದಾರೆ. ಚಾಕೂರು ಗ್ರಾಮದ ಸಂತೋಷ್ ಸುಧಾರಿತ ಹೈನುಗಾರಿಕೆ ತರಬೇತಿ ಹಾಗೂ ₹50 ಸಾವಿರ ಆವರ್ತಕ ನಿಧಿಯ ನೆರವಿನಿಂದ ಹಸುಗಳ ಸಂಖ್ಯೆಯನ್ನು 21ಕ್ಕೆ ಹೆಚ್ಚಿಸಿಕೊಂಡಿದ್ದು, ಹಾಲು ಮಾರಾಟದಿಂದ ತಿಂಗಳಿಗೆ ಸುಮಾರು ₹1.2 ಲಕ್ಷ ಆದಾಯ ಗಳಿಸುತ್ತಿದ್ದಾರೆ.

453 ಬಯೋಗ್ಯಾಸ್ ಘಟಕ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ 38 ಗ್ರಾಮಗಳಲ್ಲಿ ಕಳೆದ 18 ತಿಂಗಳಲ್ಲಿ 453 ಗೃಹಬಳಕೆಯ ಬಯೋಗ್ಯಾಸ್ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಬಡ ಕುಟುಂಬಗಳಿಗೆ ಒಟ್ಟಾರೆ ₹26 ಲಕ್ಷಕ್ಕೂ ಅಧಿಕ ಉಳಿತಾಯವಾಗಿದೆ. ನೀಲುವಾಗಿಲು ಗ್ರಾಮದಲ್ಲೇ 28 ಘಟಕಗಳಿಂದ ಅಂದಾಜು 56 ಎಲ್‌ಪಿಜಿ ಸಿಲಿಂಡರ್‌ಗಳ ಬಳಕೆ ತಪ್ಪಿದ್ದು, ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸರಾಸರಿ ₹1,900ರಷ್ಟು ಅಡುಗೆ ವೆಚ್ಚ ಉಳಿತಾಯವಾಗುತ್ತಿದೆ.

ಶಿಕ್ಷಣ, ಉದ್ಯೋಗ, ಕೃಷಿ, ಉದ್ಯಮಶೀಲತೆ ಮತ್ತು ಶುದ್ಧ ಇಂಧನವನ್ನು ಒಂದೇ ವೇದಿಕೆಯಲ್ಲಿ ಜೋಡಿಸಿರುವ ಟೈಟಾನ್–ಎಸ್‌ವಿವೈಎಂ ಸಹಭಾಗಿತ್ವವು ಗ್ರಾಮೀಣ ಹಾಗೂ ಬುಡಕಟ್ಟು ಸಮುದಾಯಗಳ ಸ್ವಾವಲಂಬನೆಗೆ ಹೊಸ ದಿಕ್ಕು ನೀಡಿದೆ.