ಬಹುರೂಪಿ ಚಲನಚಿತ್ರೋತ್ಸವವನ್ನು ಭಾನುವಾರ ಲೇಖಕ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು. ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ, ರಂಗಸಮಾಜ ಸದಸ್ಯರಾದ ಎಂ.ಎಸ್.ಜಹಾಂಗೀರ್, ಸುರೇಶ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ, ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಇದ್ದರು. 
ಮೈಸೂರು

ಜಿಲ್ಲೆಗೆ ಒಂದು ಮಿನಿ ಚಿತ್ರಮಂದಿರ ಸ್ಥಾಪಿಸಿ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಲೇಖಕ ಬರಗೂರು ರಾಮಚಂದ್ರಪ್ಪ ಒತ್ತಾಯ
ಮೈಸೂರು: ರಾಜ್ಯ ಸರ್ಕಾರ ಸದಭಿರುಚಿ ಚಿತ್ರಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೂರು ಅಥವಾ ಜಿಲ್ಲೆಗೆ ಒಂದು ಮಿನಿ ಚಿತ್ರಮಂದಿರಗಳನ್ನು ಸ್ಥಾಪಿಸಬೇಕು ಎಂದು ಲೇಖಕ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದರು.
ನಗರದ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಬಹುರೂಪಿ ಚಲನಚಿತ್ರೋತ್ಸವವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಚಿತ್ರರಂಗದಲ್ಲಿ ಸೃಜನಶೀಲತೆಯ ಸಿನಿಮಾಗಳ ನಿರ್ಮಾಣವನ್ನು ಪ್ರೋತ್ಸಾಹಿಸಬೇಕಾದರೇ ಮಿನಿ ಚಿತ್ರಮಂದಿರಗಳನ್ನು ಸ್ಥಾಪನೆ ಮಾಡಬೇಕು. ಈ ಹಿಂದೆಯೇ ಸಿದ್ದರಾಮಯ್ಯ ಅವರ ಭಾಗಿಯಾಗಿದ್ದ ಕಾರ್ಯಕ್ರಮದಲ್ಲೇ ಒತ್ತಾಯ ಮಾಡಿದ್ದೆ. ಸಿದ್ದರಾಮಯ್ಯ ಅವರು ಕೂಡ ರಾಜ್ಯದಲ್ಲಿ ಮಿನಿ ಚಿತ್ರಮಂದಿರಗಳನ್ನು ಮಾಡೇ ಮಾಡುತ್ತೇವೆ ಎಂದು ತಿಳಿಸಿದ್ದರು. ಕಳೆದ ವರ್ಷ ಬಜೆಟ್‌ನಲ್ಲಿ ಇದು ಘೋಷಣೆಯಾಗುತ್ತದೆ ಎಂದು ಭಾವಿಸಿದ್ದೆವು. ಆಸರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದರೂ ಬಜೆಟ್ ನಲ್ಲಿ ಪ್ರಸ್ತಾಪವಾಗಲಿಲ್ಲ. ಈ ವರ್ಷವಾದರೂ ಇದನ್ನು ಅನುಷ್ಠಾನಗೊಳಿಸಬೇಕು. ಈ ವಿಚಾರವಾಗಿ ಮತ್ತೆ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಲಾಗುತ್ತದೆ ಎಂದರು.
ಕೇರಳದಲ್ಲಿ 100 ರಿಂದ 150 ಜನ ಕುಳಿತು ನೋಡುವಂತಹ 100 ಮಿನಿ ಚಿತ್ರಮಂದಿರಗಳನ್ನು ಸ್ಥಾಪನೆ ಮಾಡಿದ್ದಾರೆ. ನಮ್ಮಲ್ಲಿ ಒಂದೇ ಸಲ ಅಷ್ಟನ್ನೂ ಮಾಡಿ ಎನ್ನುತ್ತಿಲ್ಲ. ಜಿಲ್ಲೆಗೊಂದರಂತೆ ಪ್ರಾಯೋಗಿಕವಾಗಿ ಸ್ಥಾಪನೆ ಮಾಡಬೇಕು. ಆಗ ನಮ್ಮಂತಹ ನಿರ್ದೇಶಕರು ಸಿನಿಮಾಗಳನ್ನು ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.
ಸಿದ್ದರಾಮಯ್ಯ ಅವರು ಅನೇಕ ಜನಪರವಾದ ಕೆಲಸಗಳನ್ನು ಮಾಡಿದ್ದಾರೆ. ಇತ್ತೀಚಿಗೆ ಕಾಲಘಟ್ಟದ ದಾಖಲೆಯನ್ನು ಮಾಡಿದ್ದಾರೆ. ಮಿನಿ ಚಿತ್ರ ಮಂದಿರಗಳನ್ನು ನಿರ್ಮಾಣ ಮಾಡುವುದರ ಮುಖಾಂತರವಾಗಿ ಕನ್ನಡದ ಚಲನಚಿತ್ರೋದ್ಯಮಕ್ಕೆ ಸಹಾಯವಾಗುವಂತಹ ಇನ್ನೊಂದು ದಾಖಲೆಯನ್ನು ಮುಖ್ಯಮಂತ್ರಿಗಳು ಮಾಡಬೇಕು ಎಂದು ಅವರು ತಿಳಿಸಿದರು.
ರಂಗಭೂಮಿ ಮತ್ತು ಸಿನಿಮಾದ ಸೃಷ್ಟಿ ಪ್ರಕ್ರಿಯೆಯಲ್ಲಿಯೇ ಒಂದು ಪ್ರಜಾಸತ್ತಾತ್ಮಕತೆ ಇರುತ್ತದೆ. ರಂಗಭೂಮಿ ಮತ್ತು ಚಲನಚಿತ್ರ ಎರಡೂ ಏಕ ವ್ಯಕ್ತಿ ಕಲೆಗಳಲ್ಲ. ಒಬ್ಬರೇ ಕುಳಿತು ಒಂದಿಷ್ಟು ಸ್ಥಿರ ಚಿತ್ರವನ್ನು ಬಿಡಿಸಬಹುದು, ಒಬ್ಬರೇ ಕುಳಿತು ಕಥೆ ಬರೆಯಬಹುದು, ಕಾದಂಬರಿ ಬರೆಯಬಹುದು, ಕವಿತೆ ಬರೆಯಬಹುದು, ಆದರೆ ರಂಗಭೂಮಿ- ಸಿನಿಮಾದಲ್ಲಿ ಇದು ಸಾಧ್ಯವಾಗುವುದಿಲ್ಲ. ಒಂದು ಕೇಂದ್ರ ಪದ್ಧತಿ ಇದ್ದಾಗಲೂ ಸಹ ಬೇರೆ ಬೇರೆ ಕಲಾ ಪ್ರಕಾರಗಳನ್ನು ಏಕಕಾಲಕ್ಕೆ ದುಡಿಸಿಕೊಳ್ಳಬೇಕಾಗಿರುತ್ತದೆ. ಈ ಸೃಷ್ಟಿ ಪ್ರಕ್ರಿಯೆಯೇ ಪ್ರಜಾಸತ್ತಾತ್ಮಕವಾದದ್ದು ಎಂದರು.
ಸಿನಿಮಾ ನಿಜವಾದ ಅರ್ಥದಲ್ಲಿ ಒಂದು ಒಕ್ಕೂಟ ಕಲೆಯಾಗಿದೆ. ಯಾಕೆಂದರೆ ಛಾಯಾಗ್ರಾಹಕನಿಗೆ ಒಂದು ಸ್ವಾಯತ್ತತೆ ಇರುತ್ತದೆ, ಸಂಕಲನಕಾರನಿಗೆ ಇರುತ್ತದೆ, ಕಲಾ ವಿನ್ಯಾಸಕಾರನಿಗೆ ಇರುತ್ತದೆ. ಪ್ರತಿಯೊಂದು ಕಲಾ ಪ್ರಕಾರಗಳಿಗೂ ತನ್ನದೇ ಆದಂತಹ ಒಂದು ಅಸ್ತಿತ್ವ ಇರುತ್ತೆ, ಆದರೆ ಅವರು ಒಂದು ಕೇಂದ್ರ ಪ್ರಜ್ಞೆಗೆ ದುಡಿಯುತ್ತಾ ಇರುತ್ತಾರೆ ಎಂದರು.
ಪ್ರಸ್ತುತ ದಿನಮಾನದಲ್ಲಿ ಸಿನಿಮಾವು ಕಲೋದ್ಯಮವಾಗಿದೆ. ಸಿನಿಮಾ ಉದ್ಯಮ ರಹಿತವಾದ ಕಲೆ ಅಲ್ಲ. ಹಾಗೆಯೇ ಕಲೆ ರಹಿತವಾದ ಉದ್ಯಮವೂ ಅಲ್ಲ. ಎಲ್ಲೆಲ್ಲಿ ಬಂಡವಾಳ ಹೆಚ್ಚಾಗಿ ತೊಡಗುತ್ತೋ ಅದೆಲ್ಲವೂ ಉದ್ಯಮವೇ ಆಗಿರುತ್ತೆ. ಉದ್ಯಮ ರಹಿತ ಕಲೆಯನ್ನು ಊಹಿಸಿಕೊಳ್ಳಲಿಕ್ಕೆ ಸಾಧ್ಯ ಇಲ್ಲ. ಕಲೆ ರಹಿತವಾದ ಉದ್ಯಮವನ್ನು ಊಹಿಸಿಕೊಳ್ಳೋಕೆ ಸಾಧ್ಯ ಇಲ್ಲ. ಕಲಾತ್ಮಕ ಅಥವಾ ಪರ್ಯಾಯ ಸಿನಿಮಾ ನಿರ್ಮಾಣಕ್ಕೂ ಸಹ ಕೆಲವು ಲಕ್ಷ ರೂಪಾಯಿಗಳನ್ನಾದರೂ ಬಂಡವಾಳ ಹಾಕಬೇಕಾಗಿರುತ್ತದೆ. ಆದರೆ ಅಲ್ಲಿ ಕಲೆಯನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುವುದರ ಅರಿವು ಇರಬೇಕು.ಹೀಗಾಗಿ ಕಲೋದ್ಯಮದ ಸ್ವರೂಪವನ್ನು ನಿರ್ವಹಿಸುವುದು ಸಿನಿಮಾದಲ್ಲಿ ಬಹಳ ದೊಡ್ಡ ಸಮಸ್ಯೆಯಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ, ರಂಗಸಮಾಜ ಸದಸ್ಯರಾದ ಎಂ.ಎಸ್.ಜಹಾಂಗೀರ್, ಸುರೇಶ್ ಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ, ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಚಲನಚಿತ್ರೋತ್ಸವ ಸಂಯೋಜಕ ಕೆ.ಮನು, ಸಂಚಾಲಕಿ ಬಿ.ಎನ್.ಶಶಿಕಲಾ ಇದ್ದರು.
"

ಪರ್ಯಾಯ ಸಿನಿಮಾ ಹೆಸರುಗಳಲ್ಲಿ ಬಹಳಷ್ಟು ಸಾರಿ ಅನೇಕರು ನಿದ್ದೆ ಬರಿಸುವ ಸಿನಿಮಾ ಮಾಡಿರುವುದು ಉಂಟು. ನಿಧಾನ ಗತಿಯೇ ಪ್ರಧಾನ ಅಂತ ಭಾವಿಸಿಕೊಂಡಿರುವಂತಹ ಅನೇಕ ಸಿನಿಮಾಗಳು ನಮ್ಮಲ್ಲಿ ಬಂದಿವೆ. ಕಲಾತ್ಮಕ ಚಿತ್ರಗಳ ಜನಕರೆನಿಸಿಕೊಂಡತಹವರೇ ತಮ್ಮ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ಆದರೆ ಕನ್ನಡದಲ್ಲಿ ಶೈಲಿ ಬದಲಾಗಿಲ್ಲ, ಕಾಲದ ಕಲಾತ್ಮಕತೆಯನ್ನು ಬಿಟ್ಟುಕೊಡದೆ, ಕಡೆ ಪಕ್ಷ ಒಂದು ವರ್ಗದ ಜನರನ್ನು ತಲುಪುವ ಸಿನಿಮಾಗಳನ್ನು ನಾವು ಮಾಡುವುದಕ್ಕೆ ಸಾಧ್ಯವಿಲ್ಲವೇ ಅಂತ ಪರ್ಯಾಯ ಸಿನಿಮಾದವರು ಯೋಚಿಸಬೇಕು.