ನಗರದ ವಿದ್ಯಾವಿಕಾಶ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಟಿ.ಶ್ಯಾಮ್ ಭಟ್ ‘ಪರಿಸರ ಕಾನೂನು’ ಪುಸ್ತಕ ಬಿಡುಗಡೆಗೊಳಿಸಿದರು. ಡಾ.ಎ.ಜಯಗೋವಿಂದ, ವಿ.ಕವೀಶ್‌ಗೌಡ, ಡಾ.ನಿರಂಜನ ವಾನಳ್ಳಿ, ಡಾ.ಎಸ್.ನಟರಾಜು, ಪ್ರೊ.ಎಂ.ಕೆ.ರಮೇಶ್, ಡಾ.ಪಿ.ಈಶ್ವರ ಭಟ್, ರಾಜೇಶ್ವರಿ, ಎಸ್.ಎಸ್.ಮಂಜುನಾಥ್, ಟಿ.ಎಲ್.ಸ್ಫೂರ್ತಿ ಇದ್ದರು. 
ಮೈಸೂರು

ಅಭಿವೃದ್ಧಿ ಜತೆಗೆ ಪರಿಸರ ಸಂರಕ್ಷಣೆ ಅಗತ್ಯ:ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿಯ ಜತೆಯಲ್ಲಿ ಪರಿಸರ ಸಂರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ
  • ಪರಿಸರ ಹಾನಿಯಿಂದ ಏನೆಲ್ಲ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅರಿತರೆ, ಪರಿಸರ ಮೇಲೆ ಕಾಳಜಿ ಹೆಚ್ಚಾಗಲಿದೆ
ಮೈಸೂರು:ಪರಿಸರದ ಮೇಲೆ ಮಾನವ ಎಸಗುವ ದೌರ್ಜನ್ಯದ ಹಾನಿ ಪರಿಸರಕ್ಕಿಂತ ಮಾನವ ಸಮುದಾಯದ ಮೇಲೆ ಆಗಲಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಎಚ್ಚರಿಸಿದರು.
ನಗರದ ವಿದ್ಯಾವಿಕಾಸ ಎಜುಕೇಷನಲ್ ಟ್ರಸ್ಟ್, ವಿದ್ಯಾವಿಕಾಸ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್‌ನಿಂದ ವಿದ್ಯಾವಿಕಾಶ ಕಾಲೇಜಿನ ಸಭಾಂಗಣದಲ್ಲಿ ಡಾ.ಸಿ.ಕೆ.ಎನ್.ರಾಜ ಅವರ ಮೂರನೇ ವರ್ಷದ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪರಿಸರ ಕಾನೂನು’ ಪುಸ್ತಕ ಬಿಡುಗಡೆೆಗೊಳಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನ, ಪರಿಸರ ನಾಶವಾಗುತ್ತಿದೆ. ಅಭಿವೃದ್ಧಿಯ ಜತೆಯಲ್ಲಿ ಪರಿಸರ ಸಂರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಪರಿಸರ ಹಾನಿಯಿಂದ ಏನೆಲ್ಲ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅರಿತರೆ, ಪರಿಸರ ಮೇಲೆ ಕಾಳಜಿ ಹೆಚ್ಚಾಗಲಿದೆ ಎಂದರು.
ಪರಿಸರ ಸಂರಕ್ಷಣೆಗಾಗಿ ಸಂವಿಧಾನದಲ್ಲಿ ಕಾನೂನು ರಚಿಸಲಾಗಿದೆ. ಅವುಗಳ ಮಾಹಿತಿ ಪಡೆದು, ಪರಿಸರ ಸಂರಕ್ಷಣೆಗೆ ಒತ್ತು ಕೊಡಬೇಕು. ಮಾನವ ಹಕ್ಕುಗಳು ಹಾಗೂ ಪರಿಸರ ಹಕ್ಕುಗಳು ಭಾರತೀಯ ಸಂವಿಧಾನದ 21ನೇ ವಿಧಿಯಡಿ ರಕ್ಷಿಸಲ್ಪಟ್ಟಿವೆ. ಎಂ.ಸಿ.ಮೆಹತಾ ವಿರುದ್ಧ ಭಾರತ ಒಕ್ಕೂಟ ಪ್ರಕರಣದಲ್ಲಿ ಸುಪ್ರೀಂಕೋರ್ಟ್, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಸ್ಪಷ್ಟಪಡಿಸಿದೆ. ಭವಿಷ್ಯದಲ್ಲಿ ವಕೀಲರಿಗೆ ಪರಿಸರ ಕಾನೂನು ಅತ್ಯಗತ್ಯ ಕ್ಷೇತ್ರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ಜಯಗೋವಿಂದ ಮಾತನಾಡಿ, ಜಾಗತಿಕ ರಾಜತಾಂತ್ರಿಕತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಸ್ವರೂಪ ಬದಲಾಗುತ್ತಿದ್ದು, ವಿದ್ಯಾರ್ಥಿಗಳು ದೇಶೀಯ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ವಿಶ್ರಾಂತ ಕುಲಪತಿ ಡಾ.ನಿರಂಜನ ವಾನಳ್ಳಿ ಅವರು ಪರಿಸರ ಕಾನೂನು ಪುಸ್ತಕ ಕುರಿತು ಮಾತನಾಡಿದರು. ವಿದ್ಯಾವಿಕಾಸ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ವಿ.ಕವೀಶ್‌ಗೌಡ, ವಿವಿಐಎಸ್‌ಎಲ್ ನಿರ್ದೇಶಕ ಡಾ.ಎಸ್.ನಟರಾಜು, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಕೆ.ರಮೇಶ್, ಲೀಗಲ್ ಎಜುಕೇಷನ್ ಅಡ್ವೈಸರ್ ಡಾ.ಪಿ.ಈಶ್ವರ ಭಟ್, ಪ್ರಾಂಶುಪಾಲರಾದ ರಾಜೇಶ್ವರಿ, ಐಕ್ಯೂಎಸಿ ಸಂಚಾಲಕ ಎಸ್.ಎಸ್. ಮಂಜುನಾಥ್, ಕಾರ್ಯಕ್ರಮ ಸಂಚಾಲಕರಾದ ಟಿ.ಎಲ್.ಸ್ಫೂರ್ತಿ ಇದ್ದರು.