ಮೈಸೂರು ತಾಲೂಕು ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಲಾಯಿತು. ಪಿ.ಎನ್. ವೀಣಾ, ಟಿ. ಸತೀಶ್ ಜವರೇಗೌಡ, ಭಾಗ್ಯಾ, ಕಲ್ಪನಾ, ಸುಹೇಲ್ ಇತರರು ಇದ್ದರು.
- ಹವಾಮಾನ ವೈಪರೀತ್ಯಗಳು ಸಂಭವಿಸುತ್ತಿದ್ದು, ಇದು ಜೀವ ಸಂಕುಲಕ್ಕೆ ತುಂಬ ಅಪಾಯಕಾರಿ
- ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಮಣ್ಣಿನ ಮಾಲಿನ್ಯ ಹೆಚ್ಚಿದೆ. ಮಳೆ ನೀರು ಭೂಮಿಯಲ್ಲಿ ಇಂಗುತ್ತಿಲ್ಲ
ಮೈಸೂರು:ಮಾನವ ಸ್ವಾರ್ಥದಿಂದ ಪರಿಸರದ ಮೇಲೆ ದೌರ್ಜನ್ಯ ನಡೆದಿದ್ದು, ಸಮತೋಲನ ವ್ಯವಸ್ಥೆ ಹದಗೆಟ್ಟಿದೆ ಎಂದು ಸಾಹಿತಿ ಮತ್ತು ಶಿಕ್ಷಕ ಟಿ. ಸತೀಶ್ ಜವರೇಗೌಡ ಆತಂಕ ವ್ಯಕ್ತಪಡಿಸಿದರು.
ಮೈಸೂರು ತಾಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪರಿಸರ ನಾಶದಿಂದ ಮನುಷ್ಯ ಮಾತ್ರವಲ್ಲದೆ, ಇಡೀ ಜೀವ ವ್ಯವಸ್ಥೆಯೇ ವಿನಾಶದ ಹಾದಿಯಲ್ಲಿದೆ. ನೆಮ್ಮದಿ ದೂರವಾಗುತ್ತಿದೆ. ತತ್ಪರಿಣಾಮವಾಗಿ ಹವಾಮಾನ ವೈಪರೀತ್ಯಗಳು ಸಂಭವಿಸುತ್ತಿದ್ದು, ಇದು ಜೀವ ಸಂಕುಲಕ್ಕೆ ತುಂಬ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.
ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಮಣ್ಣಿನ ಮಾಲಿನ್ಯ ಹೆಚ್ಚಿದೆ. ಮಳೆ ನೀರು ಭೂಮಿಯಲ್ಲಿ ಇಂಗುತ್ತಿಲ್ಲ. ಅಂತರ್ಜಲ ಮಟ್ಟ ಕ್ಷೀಣಿಸಿದೆ. ಯಾರೂ ನೀರಿನ ಮಿತಳಕೆಯ ಬಗ್ಗೆ ಗಮನ ವಹಿಸುತ್ತಿಲ್ಲ. ಮನುಷ್ಯ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದರೆ, ಮುಂದೆ ಪ್ರಕೃತಿಯೇ ತನ್ನ ವಿಕೋಪಗಳ ಮೂಲಕ ತಕ್ಕ ಪಾಠ ಕಲಿಸಲಿದೆ ಎಂದರು.
ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ ಮಾತನಾಡಿ, ವಿದ್ಯಾರ್ಥಿಗಳು ಪರಿಸರವನ್ನು ಪ್ರೀತಿಸಬೇಕು. ಎಲ್ಲ ಕಡೆ ಗಿಡಗಳನ್ನು ನೆಟ್ಟು ಹಾರೈಕೆ ಮಾಡಬೇಕು. ಆಗ ಸುಂದರವಾದ ಪ್ರಕೃತಿ ನಗುತ್ತದೆ. ಉತ್ತಮ ವಾತಾವರಣ ನಿರ್ಮಾಣಗೊಳ್ಳುತ್ತದೆ. ಶಾಲೆಯ ಆವರಣದಲ್ಲಿ ಗಿಡಮರಗಳನ್ನು ಸಂರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರಾದ ಪಿ.ಎಲ್. ಭಾಗ್ಯ, ಕಲ್ಪನ, ಆರ್.ಎಚ್. ಶ್ರೀದೇವಿ, ಬಿ.ಎಂ. ಸರಸ್ವತಿ, ಸೌಜನ್ಯಾ, ಕೆ. ವಸಂತಲಕ್ಷ್ಮಿ, ಸುನೀಲ್ಕುಮಾರ್, ರಂಗಸ್ವಾಮಿ, ಮಹಮ್ಮದ್ ಸುಹೇಲ್, ಕೀರ್ತಿ ಕುಮಾರ್ ಇತರರು ಇದ್ದರು.
ಮಕ್ಕಳು ಮತ್ತು ಶಿಕ್ಷಕರು ಶಾಲಾವರಣದಲ್ಲಿ ಹೂ, ಹಣ್ಣು, ತರಕಾರಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.