-ಮೈಸೂರು ನಗರದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳ 8 ಜನರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
- ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಮತ
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ವಾರ್ಷಿಕ ಘಟಿಕೋತ್ಸವ
ಮೈಸೂರು: ಭಾರತವು ಸ್ವಾವಲಂಬಿ ಮತ್ತು ಅಭಿವೃದ್ಧಿಯತ್ತ ಸಾಗುತ್ತಿದೆ. ಇದಕ್ಕೆ ನಾವೀನ್ಯ, ಉದ್ಯಮಶೀಲತೆ ಮತ್ತು ಕೌಶಲ ಅಭಿವೃದ್ಧಿ ಅತ್ಯಗತ್ಯ ಎಂದು ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಹೇಳಿದರು.
ನಗರದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿ, ನವೋದ್ಯಮ ಸಂಸ್ಕೃತಿ, ಗ್ರಾಮೀಣ ಉದ್ಯಮಶೀಲತೆ, ಸಾಮಾಜಿಕ ಉದ್ಯಮ ಎಲ್ಲವೂ ಅಪಾರ ಅವಕಾಶ ನೀಡುತ್ತವೆ.
ವಸುಧೈವ ಕುಟುಂಬಕಂ(ಜಗತ್ತು ಒಂದು ಕುಟುಂಬ) ಎಂಬ ಸಂದೇಶವನ್ನು ಸಾಕಾರಗೊಳಿಸುವ ಮೂಲಕ ನಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಸಂಪರ್ಕದಲ್ಲಿರುವುದು ಅತ್ಯಗತ್ಯ ಎಂದರು.
ಶಿಕ್ಷಣವನ್ನು ಜ್ಞಾನ ವೈಯಕ್ತಿಕ ಸಾಧನೆಗಾಗಿ ಮಾತ್ರವಲ್ಲದೆ ರಾಷ್ಟ್ರ, ಸಮಾಜದ ಕಲ್ಯಾಣಕ್ಕಾಗಿಯೂ ಬಳಸಬೇಕು. ಕೃತಕ ಬುದ್ಧಿಮತ್ತೆ, ಡಿಜಿಟಲ್ ಕ್ರಾಂತಿ ಮತ್ತು ಹಸಿರು ತಂತ್ರಜ್ಞಾನ ಎಲ್ಲವೂ ಜೀವನ ಮತ್ತು ಉದ್ಯೋಗವನ್ನು ಪರಿವರ್ತಿಸುತ್ತಿವೆ. ಈ ಪರಿಸರದಲ್ಲಿ ವಿದ್ಯಾರ್ಥಿಗಳು ನಿರಂತರ ಕಲಿಕೆಯ ಮನೋಭಾವ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬರೂ ಕಲಿಯುತ್ತಲೇ ಇರಬೇಕು. ಪ್ರಗತಿ ಸಾಧಿಸುತ್ತ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ದೂರ ಶಿಕ್ಷಣ ವ್ಯವಸ್ಥೆಯು ಇದೀಗ ಡಿಜಿಟಲ್ ವೇದಿಕೆಗಳ ಮೂಲಕ ಹೆಚ್ಚು ಪರಿಣಾಮಕಾರಿಯಾಗುತ್ತಿದೆ. ಭವಿಷ್ಯದಲ್ಲಿ ಕೌಶಲ ಆಧಾರಿತ ಕೋರ್ಸ್‌ಗಳು, ಉದ್ಯೋಗ-ಆಧಾರಿತ ತರಬೇತಿ ಮತ್ತು ಸಂಶೋಧನೆಯನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದರು.
ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ಜಾಗತಿಕ ಶೈಕ್ಷಣಿಕ ಏಕೀಕರಣದ ಅನ್ವೇಷಣೆಯಲ್ಲಿ ಕರಾಮುವಿ ಫ್ರಾನ್ಸ್, ರಷ್ಯಾದ ಪ್ರಮುಖ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಸಂಶೋಧನೆ, ಅಧ್ಯಾಪನ ವಿನಿಮಯಕ್ಕೆ ಉತ್ತೇಜಿಸುತ್ತದೆ ಎಂದರು.
ಶೈಕ್ಷಣಿಕ ಬೆಳವಣಿಗೆಗೆ ಅನುದಾನ ಸಹ ನೀಡಿದ್ದು, ಹಜ್ ಭವನದಲ್ಲಿನ ಅಲ್ಪಸಂಖ್ಯಾತರ ಪ್ರಾದೇಶಿಕ ಕೇಂದ್ರಕ್ಕೆ 10 ಕೋಟಿ ರೂ., ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 9.5 ಕೋಟಿ ರೂ., ಬೀದರ್ ಕೇಂದ್ರಕ್ಕೆ 3 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
80 ಶೈಕ್ಷಣಿಕ ಕಾರ್ಯಕ್ರಮಗಳು, 10 ಆನ್‌ಲೈನ್ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಪ್ರವೇಶಾತಿ ಮೂರು ಪಟ್ಟು ಹೆಚ್ಚಾಗಿದೆ. ವಿದ್ಯಾರ್ಥಿಗಳ ಸಂಖ್ಯೆ 1.5 ಲಕ್ಷ ಮೀರಿದೆ. ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿಯ ನೋಡಲ್ ಏಜೆನ್ಸಿಯಾಗಿದೆ. ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ ಸಹಯೋಗದೊಂದಿಗೆ ಸೆಂಟರ್ ಫಾರ್ ಫ್ಯೂಚರ್ ಸ್ಕಿಲ್ಸ್ ಸ್ಥಾಪಿಸಿದೆ ಎಂದು ಹೇಳಿದರು.
ಕುಲಸಚಿವ(ಆಡಳಿತ) ಪ್ರೊ.ಎಸ್.ಕೆ.ನವೀನ್‌ಕುಮಾರ್, ಮೌಲ್ಯಮಾಪನ ಕುಲಸಚಿವ ಡಾ.ಸಿ.ಎಸ್.ಆನಂದಕುಮಾರ್, ಡೀನ್(ಶೈಕ್ಷಣಿಕ) ಪ್ರೊ.ಎಂ. ರಾಮನಾಥಂ ನಾಯ್ಡು ಇದ್ದರು.
ಕೇಂದ್ರ ಸಚಿವರು ಗೈರು:
ಘಟಿಕೋತ್ಸವ ಭಾಷಣ ಮಾಡಬೇಕಿದ್ದ ಕೇಂದ್ರ ಶಿಕ್ಷಣ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಡಾ.ಸುಕಾಂತ ಮಜುಂದಾರ್ ಬರಲಿಲ್ಲ. ಅವರ ಎರಡು ನಿಮಿಷದ ವಿಡಿಯೋ ಪ್ರದರ್ಶಿಸಲಾಯಿತು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಹ ಗೈರಾದರು. ರಮೇಶ್ ಕಾಳಪ್ಪ ಗುಬ್ಬೇವಾಡ ಹೊರತುಪಡಿಸಿ ಉಳಿದ ಎಲ್ಲ ಕರಾಮುವಿ ವ್ಯವಸ್ಥಾಪನಾ ಮಂಡಳಿಯ ಸದಸ್ಯರು ಗೈರಾಗಿದ್ದರು.
8 ಜನರಿಗೆ ಗೌರವ ಡಾಕ್ಟರೇಟ್ ಪ್ರದಾನ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ವಿವಿಧ ಕ್ಷೇತ್ರಗಳ 8 ಜನರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಹರ್ಷ ಸಂಸ್ಥೆಯ ಎಸ್.ಶಿವಕುಮಾರ್, ತುಮಕೂರಿನ ಕಿಡ್ಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಸಂಸ್ಥಾಪಕ ಸತೀಶ್‌ಕುಮಾರ್ ಡಿ.ಕೆಗ್ಗೆರೆ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಲಕ್ಷ್ಮೀಜಿ, ಮೈಸೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು, ಯೋಗನರಸಿಂಹಸ್ವಾಮಿ ದೇವಸ್ಥಾನದ ಪ್ರೊ.ಭಾಷ್ಯಂ ಸ್ವಾಮಿ, ಬೀದರಿನ ಐಟಿಐ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶಿವಶಂಕರ್ ಟೊಕರೆ, ಹಾಸನದ ಜ್ಯೋತಿಷಿ ಬಿ.ಎಸ್.ನಾಗಭೂಷಣ ಅಟ್ರಿ, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರು.