ಸರ್ಕಾರಿ ಶಾಲೆ 
ಮೈಸೂರು

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಸರತ್ತು

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ನಗರದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತ
  • ಸೌಕರ್ಯ ಕೊಟ್ಟರೂ ಆಸಕ್ತಿ ತೋರದ ಪಾಲಕರು
  • ತಮ್ಮ ಮಕ್ಕಳನ್ನು ಕಾನ್ವೆಂಟ್ ಸ್ಕೂಲ್‌ನಲ್ಲಿ ಓದಿಸಲು ಪಾಲಕರು ಒಲವು

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಮಕ್ಕಳ ಕೊರತೆಯಿಂದ ಸೊರಗುತ್ತಿರುವ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಕಸರತ್ತು ಮಾಡಲಾಗುತ್ತಿದೆ. ಇದು ಫಲ ನೀಡಲಿದೆಯೇ? ಎಂಬ ಪ್ರಶ್ನೆ ಕಾಡುತ್ತಿದೆ.
ಜನಸಾಮಾನ್ಯರು, ಬಡವರ ಪಾಲಿಗೆ ಆಶಾಕಿರಣವಾಗಿರುವ ಸರ್ಕಾರಿ ಶಾಲೆಗಳ ದಾಖಲಾತಿ ಉತ್ತಮಪಡಿಸಲು ಪ್ರಚಾರ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ.
ಜಿಲ್ಲೆಯಲ್ಲಿ 3,477 ಪ್ರಾಥಮಿಕ, ಪ್ರೌಢಶಾಲೆಗಳ ಪೈಕಿ ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳೇ ಅಧಿಕ. ಜಿಲ್ಲೆಯಲ್ಲಿ ಇವುಗಳ ಸಂಖ್ಯೆ 2094. ಜತೆಗೆ 117 ಸಮಾಜ ಕಲ್ಯಾಣ ಇಲಾಖೆ, ಬುಡಕಟ್ಟು ಇಲಾಖೆಯ ಶಾಲೆಗಳಿವೆ.
 ಉಳಿದಂತೆ 263 ಅನುದಾನಿತ, 989 ಖಾಸಗಿ, 14 ಕೇಂದ್ರ ಸರ್ಕಾರದ ವ್ಯಾಪ್ತಿಯ ಶಾಲೆಗಳಿವೆ. 2025-26ನೇ ಸಾಲಿನಲ್ಲಿ 1ರಿಂದ 10ರ ಶಾಲೆಯವರೆಗೆ 39,7669 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ಪೈಕಿ 1ನೇ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆ 29,722ರಷ್ಟಾಗಿದೆ. 
ಮಕ್ಕಳನ್ನು ಕಾನ್ವೆಂಟ್ ಸ್ಕೂಲ್‌ನಲ್ಲಿ ಓದಿಸಲು ಪಾಲಕರು ಒಲವು 
ಹೊಸ ಜಮಾನದ ಮಕ್ಕಳು ಸರ್ಕಾರ ಶಾಲೆಯನ್ನು ಬಿಟ್ಟು ಖಾಸಗಿ ಶಾಲೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಸಾಲಸೋಲ ಮಾಡಿ ತಮ್ಮ ಮಕ್ಕಳನ್ನು ಕಾನ್ವೆಂಟ್ ಸ್ಕೂಲ್‌ನಲ್ಲಿ ಓದಿಸಲು ಪಾಲಕರು ಒಲವು ತೋರುತ್ತಿದ್ದಾರೆ. ಇದರಿಂದ ನಗರದ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. 
ಗ್ರಾಮಾಂತರ ಪ್ರದೇಶದಲ್ಲಿ ಕೊಂಚ ಉತ್ತಮ ಸ್ಥಿತಿಯಲ್ಲಿ ಇದೆ. ಆದಾಗ್ಯೂ. ಗ್ರಾಮಗಳಲ್ಲೂ ಸಹ ಖಾಸಗಿ ಶಾಲೆಗಳು ತಲೆ ಎತ್ತುತ್ತಿರುವುದರಿಂದ ಸರ್ಕಾರಿ ಶಾಲೆಗಳಿಗೆ ಹೊಡೆತ ಕೊಡುತ್ತಿವೆ. ಅನೇಕ ಸೌಲಭ್ಯ, ಸವಲತ್ತು ಕಲ್ಪಿಸಿಕೊಟ್ಟರೂ ಸಹ ಮಕ್ಕಳು ಸರ್ಕಾರಿ ಶಾಲೆಗಳಿಗೆ ಏಕೆ ಬರುತ್ತಿಲ್ಲ? ದುಬಾರಿ ಶುಲ್ಕ ಕೊಟ್ಟು ಏಕೆ ಖಾಸಗಿ ಶಾಲೆಗಳಿಗೆ ಮಕ್ಕಳು ಹೋಗುತ್ತಿದ್ದಾರೆ ಎಂಬುದರ ಕುರಿತು ರಾಜ್ಯ ಸರ್ಕಾರ, ಶಾಲಾ ಶಿಕ್ಷಣ ಇಲಾಖೆ ಯೋಚಿಸಬೇಕಿದೆ.
1ರಿಂದ 5ನೇ ತರಗತಿಯಲ್ಲಿ ದ್ವಿಭಾಷಾ ಮಾಧ್ಯಮ ತರಗತಿ
ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಿಗೆ ತಕ್ಕ ಪೈಪೋಟಿ ನೀಡಲು 1ರಿಂದ 5ನೇ ತರಗತಿಯಲ್ಲಿ ದ್ವಿಭಾಷಾ ಮಾಧ್ಯಮ ತರಗತಿ ಪ್ರಾರಂಭಿಸಲಾಗುತ್ತಿದೆ. 
ಸರ್ಕಾರಿ ಶಾಲೆಗಳನ್ನು ಉತ್ತಮ ಪಡಿಸಲು ಪೂರ್ವ ಪ್ರಾಥಮಿಕ ತರಗತಿಯಿಂದ ಪದವಿ ಪೂರ್ವ ಶಿಕ್ಷಣದ ವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡಲು ಸ್ಥಳಾವಕಾಶ ಮತ್ತು ಉತ್ತಮ ದಾಖಲಾತಿ ಹೊಂದಿರುವ ಆಯ್ದ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಣಗೊಳಿಸಲಾಗಿದೆ. ಜಿಲ್ಲೆಯಲ್ಲಿರುವ 32 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳು ಮೇಲ್ದರ್ಜೆಗೇರಿವೆ. ಅವುಗಳಿಗೆ ಇನ್ನೂ ಪೂರ್ಣಪ್ರಮಾಣದಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. 
2026-27ನೇ ಶೈಕ್ಷಣಿಕ ಸಾಲಿನಿಂದ ಕೆಪಿಎಸ್ ಶಾಲೆಗಳಲ್ಲಿ ಎಲ್‌ಕೆಜಿಯಿಂದ 5ನೇ ತರಗತಿ ವರೆಗೆ ಏಕ ತರಗತಿ ಪಠ್ಯಪುಸ್ತಕ ಆಧಾರಿತ ದ್ವಿಭಾಷಾ ಮಾಧ್ಯಮ ಬೋಧನೆ ಅಳವಡಿಸಿಕೊಳ್ಳಲಾಗಿದೆ. ಕನ್ನಡ ಸೇರಿದಂತೆ 6 ಪ್ರಸ್ತುತ ಇರುವ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ತರಗತಿ ಸಹ ಶುರು ಮಾಡಲಾಗಿದೆ.
 ಮಾಧ್ಯಮವಾರು ಏಕ ತರಗತಿ ಪಠ್ಯಪುಸ್ತಕ ಆಧಾರಿತ ತರಗತಿಗಳು, ಕ್ರಿಯಾಶೀಲ ಬೋಧನಾ ಪದ್ಧತಿ  ಜಾರಿಗೆ ತರಲಾಗಿದೆ. 1ನೇ ಕ್ಲಾಸ್‌ನಿಂದಲೇ ಕಂಪ್ಯೂಟರ್ ಶಿಕ್ಷಣದ ಪರಿಚಯ, 6ನೇ ತರಗತಿಯಿಂದ ಉದ್ಯಮ ಸಮ್ಮಿಳಿತ ವೃತ್ತಿಪರ ಕೌಶಲ ಆಧಾರಿತ ಪಠ್ಯಕ್ರಮದ ಪರಿಚಯ, 8ನೇ ತರಗತಿಯಿಂದ ಮಂಡಳಿ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಗತಿ ಪ್ರಾರಂಭಿಸಲಾಗುತ್ತಿದೆ.
ಪಠ್ಯಕ್ರಮವನ್ನು ಉದ್ಯಮ ಪಾಲುದಾರರ ಸಹಾಯದಿಂದ ವಿನ್ಯಾಸ
ಜತೆಗೆ, ಭವಿಷ್ಯದ ವೃತ್ತಿಪರ ತರಬೇತಿಯನ್ನು 6ನೇ ತರಗತಿಯಿಂದ ಆರಂಭಿಸಲು ಪಠ್ಯಕ್ರಮವನ್ನು ಉದ್ಯಮ ಪಾಲುದಾರರ ಸಹಾಯದಿಂದ ವಿನ್ಯಾಸಗೊಳಿಸಿ ಜಂಟಿ ಪ್ರಮಾಣ ಪತ್ರ ನೀಡಲು ಕ್ರಮ ವಹಿಸಲಾಗುತ್ತಿದೆ. ಅಗತ್ಯತೆ ಅನುಗುಣವಾದ ಶಿಕ್ಷಕರ ತರಬೇತಿ, ಸಾಮರ್ಥ್ಯ ಅಭಿವೃದ್ಧಿ ಉಪಕ್ರಮಗಳ ಮೂಲಕ ತರಗತಿ ಕಲಿಕೆಯ ಅಭ್ಯಾಸವನ್ನು ಬಲಪಡಿಸಲಾಗುತ್ತಿದೆ. ಇದು ಪರಿಣಾಮಕಾರಿ ಶಿಕ್ಷಣಶಾಸ್ತ್ರ ಮತ್ತು ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ.

ಪ್ರೌಢ ತರಗತಿಗಳ ಫಲಿತಾಂಶ ಸುಧಾರಣೆ ವಿಶೇಷ ಒತ್ತು

ಪ್ರೌಢಶಾಲಾ ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಮತ್ತು 10, 12ನೇ ತರಗತಿಯ ಮಂಡಳಿ ಪರೀಕ್ಷೆಗಳಲ್ಲಿ ಫಲಿತಾಂಶ ವೃದ್ಧಿಸುವ ಕಡೆ ಗಮನ ಹರಿಸಲಾಗುತ್ತಿದ್ದು, ಪ್ರೌಢ ತರಗತಿಗಳ ಫಲಿತಾಂಶ ಸುಧಾರಣೆ ವಿಶೇಷ ಒತ್ತು ನೀಡಲಾಗುತ್ತಿದೆ. 
ಸ್ಟ್ರಿಮ್ ಶಿಕ್ಷಣ, ವೃತ್ತಿಪರ ತರಬೇತಿ, ವೃತ್ತಿ ಸಲಹೆ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ, 21ನೇ ಶತಮಾನದ ಕೌಶಲಗಳಾದ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ಸಹಯೋಗ, ಸಂವಹನ, ಜೀವನ ಕೌಶಲಗಳ ಅಭಿವೃದ್ಧಿಯನ್ನು ಸಮ್ಮಿಳಿತಗೊಳಿಸಲಾಗುತ್ತಿದೆ.
ಕೃತಕಬುದ್ಧಿಮತ್ತೆ(ಎಐ) ತಂತ್ರಜ್ಞಾನ, ಡಿಜಿಟಲ್ ಸಂಪನ್ಮೂಲಗಳನ್ನು ಸಂಯೋಜಿಸುವ ಮೂಲಕ, ಮೂಲಸೌಕರ್ಯ ಸುಧಾರಿಸುವ ಮತ್ತು ವ್ಯಾಪ್ತಿಯನ್ನು ವಿಸ್ತರಿಸುವುದರೊಂದಿಗೆ ಶಾಲೆಗಳು ಸಾರ್ವಜನಿಕ ಶಿಕ್ಷಣದ ಪ್ರಗತಿಪರ ಮರುಕಲ್ಪನೆ ನೀಡಲಾಗುತ್ತಿದೆ. ಈ ಶಾಲೆಗಳು ಹಂತ ಹಂತವಾಗಿ ಉಚಿತ ಸಾರಿಗೆ ಸೌಲಭ್ಯ ಮತ್ತು ತಾಂತ್ರಿಕ ಸಮ್ಮಿಳಿತದ ಕಲಿಸುವಿಕೆಯೊಂದಿಗೆ ಮಕ್ಕಳ ಶಿಕ್ಷಣ ಗುಣಮಟ್ಟವನ್ನು ಉತ್ತಮಪಡಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ.

ಮಕ್ಕಳ ಪ್ರವೇಶಾತಿಗೆ ವಿವಿಧ ಉಪ ಕ್ರಮ 

ಮಕ್ಕಳ ಕಲಿಕೆಯನ್ನು ಉತ್ತಮಪಡಿಸಲು ಮತ್ತು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಸುಧಾರಿಸಲು ತರಗತಿವಾರು, ವಿಷಯವಾರು ಪಠ್ಯ ಆಧಾರಿತ ಮೌಲ್ಯಮಾಪನ ನಡೆಸಲಾಗುತ್ತದೆ. ಅದಕ್ಕಾಗಿ ಎಲ್ಲ ತರಗತಿಗಳಿಗೆ ‘ಸಮಗ್ರ ಪ್ರಶ್ನೆಗಳ ಬ್ಯಾಂಕ್’ ಸಿದ್ಧಪಡಿಸಲಾಗುತ್ತಿದೆ. 
ಫಲಿತಾಂಶ ಸುಧಾರಣೆಗೆ ವಿಷಯವಾರು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ವಿಶೇಷ ತರಗತಿ ನಡೆಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ಉತ್ತಮ ಪಡಿಸಲು ಕ್ರಿಯಾಯೋಜನೆಯನ್ನೂ ರೂಪಿಸಲಾಗಿದೆ. ಹೀಗೆ ಮಕ್ಕಳ ಪ್ರವೇಶಾತಿಗೆ ವಿವಿಧ ಉಪ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಇದು ನಗರದಿಂದ ಹಳ್ಳಿಯ ಕಟ್ಟಕಡೆಯ ಶಾಲೆಯ ವರೆಗೆ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತದೆಯೇ? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ.
ಇಂಗ್ಲಿಷ್ ಮಾಧ್ಯಮ ಇದೀಗ ಪ್ರತಿಷ್ಠೆಯ ಸಂಕೇತ
ಆಂಗ್ಲ ಮಾಧ್ಯಮದಲ್ಲಿ ತಮ್ಮ ಮಕ್ಕಳನ್ನು ಕಲಿಸುವುದು ಇದೀಗ ಪಾಲಕರಿಗೆ ಪ್ರತಿಷ್ಠೆಯ ಸಂಕೇತ. ಈ ಮಾಧ್ಯಮದಲ್ಲಿ ಕಲಿಸುವ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ.
ನಗರದ ಪ್ರದೇಶಕ್ಕೆ ಹೊಂದಿಕೊಂಡಿರುವ ಹಳ್ಳಿಯಲ್ಲಿ ಸರ್ಕಾರಿ ಶಾಲೆಗಳಿಗೆ ಬಲವಾದ ಹೊಡೆತ ಬಿದ್ದಿದೆ. ಇಂತಹ ಕಡೆಯ ಮಕ್ಕಳು ನಗರದ ಖಾಸಗಿ ಶಾಲೆಗಳಿಗೆ ಹೋಗುತ್ತಿದ್ದಾರೆ. ಇವರ ಪಾಲಕರ ಮನವೊಲಿಸುವುದು ಸರ್ಕಾರಿ ಶಾಲಾ ಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ. 
ಮಕ್ಕಳು ಏಕೆ ಬರುತ್ತಿಲ್ಲ ?
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯಾವಿಕಾಸ ಯೋಜನೆಯಡಿ ಉಚಿತವಾಗಿ ಪಠ್ಯಪುಸ್ತಕ, ಎರಡು ಜತೆ ಸಮವಸ್ತ್ರ, ಶೂ-ಸಾಕ್ಸ್ ಮತ್ತು ಮಧ್ಯಾಹ್ನ ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು, ಹಾಲು ವಿತರಿಸಲಾಗುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 1.28 ಲಕ್ಷ ಮಕ್ಕಳು ಸಮವಸ್ತ್ರ, ಶೂ-ಸಾಕ್ಸ್ ಸೌಲಭ್ಯ ಪಡೆದುಕೊಂಡಿದ್ದಾರೆ.
 ಸರ್ಕಾರಿ, ಅನುದಾನಿತ ಶಾಲೆಗಳ 1.70 ಲಕ್ಷ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ಭಾಗ್ಯ ಕಲ್ಪಿಸಿಕೊಡಲಾಗಿತ್ತು. ಇಷ್ಟಾದರೂ ಸರ್ಕಾರಿ ಶಾಲೆಗಳಿಗೆ ಮಕ್ಕಳು ಏಕೆ ಬರುತ್ತಿಲ್ಲ ಎಂಬ ಯಕ್ಷಪ್ರಶ್ನೆಗೆ ಉತ್ತರ ಹುಡುಕಬೇಕಿದೆ.
  • 2026 - 27ನೇ ಶೈಕ್ಷಣಿಕ ವೇಳಾಪಟ್ಟಿ 
  •  ಮೇ 29ರಿಂದ ಶಾಲೆಗಳು ಆರಂಭ 
  •  ದಾಖಲಾತಿ ಪ್ರಕ್ರಿಯೆ ಜೂನ್ 30ರ ಒಳಗೆ ಪೂರ್ಣ 
  •  ಮೊದಲ ಅವಧಿ ಮೇ 29ರಿಂದ ಅ.2 ರ ವರೆಗೆ 
  •  ಎರಡನೇ ಅವಧಿ ಅಕ್ಟೋಬರ್ 22ರಿಂದ 2027ರ ಏಪ್ರಿಲ್ 10ರ ವರೆಗೆ  
  •  ಅ.3ರಿಂದ 21 ರವರೆಗೆ ದಸರಾ ರಜೆ *  2027ರ ಏ.11ರಿಂದ ಬೇಸಿಗೆ ರಜೆ 
    "

    ದಾಖಲಾತಿ ಹೆಚ್ಚಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನಗಣತಿ ಸಮೀಕ್ಷೆ ಸಂದರ್ಭದಲ್ಲಿ ನಮ್ಮ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ ಮಕ್ಕಳ ದಾಖಲಾತಿ ಕುರಿತು ವಿಚಾರಿಸುತ್ತಿದ್ದಾರೆ. ಜತೆಗೆ, ಮೇ 15ರ ನಂತರ ಶಾಲಾ ಮುಖ್ಯಸ್ಥರ, ಮೇ 20ರ ಬಳಿಕ ಪಾಲಕರ, ಎಸ್‌ಡಿಎಂಸಿ ಸಭೆ ನಡೆಸಲಾಗುತ್ತಿದೆ. 5-10ರ ವರ್ಷ ವಯಸ್ಸಿನ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರಲಾಗುತ್ತಿದೆ. ಕಳೆದ ವರ್ಷಕ್ಕಿಂತ ಹೆಚ್ಚು ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ.

    — ಡಿ.ಉದಯಕುಮಾರ್ ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ