ಅಪರಾಧ 
ಮೈಸೂರು

ಡ್ರಾಪ್ ನೆಪದಲ್ಲಿ ಇಂಜಿನಿಯರ್ ಮೇಲೆ ಹಲ್ಲೆ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ನಗದು, ಚಿನ್ನಾಭರಣ ದೋಚಿ ಮೂವರು ದುಷ್ಕರ್ಮಿಗಳು ಪರಾರಿ
  • ಮೈಸೂರು ರೈಲ್ವೆ ನಿಲ್ದಾಣದ ಬಳಿ ಘಟನೆ
ಮೈಸೂರು: ನಗರದ ಹೃದಯ ಭಾಗದಲ್ಲಿರುವ ಜೆ.ಕೆ. ಮೈದಾನದ ಬಳಿ ಡ್ರಾಪ್ ನೆಪದಲ್ಲಿ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿ, ಕಾರು ಸೇರಿದಂತೆ ನಗದು, ಚಿನ್ನಾಭರಣವನ್ನು ಕಿತ್ತು ಮೂವರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಮೈಸೂರು ತಾಲೂಕಿನ ಹಡಜನ ಗ್ರಾಮದ ಸಮೀಪದ ಬಡಾವಣೆಯೊಂದರ ನಿವಾಸಿ ಆಕಾಶ್ ಆದಿತ್ಯ (42) ಹಲ್ಲೆಗೊಳಗಾದವರು.
ಮಧ್ಯರಾತ್ರಿ 12ರ ವೇಳೆಗೆ ಆಕಾಶ್ ಆದಿತ್ಯ ಅವರು ಮೈಸೂರು ರೈಲ್ವೆ ನಿಲ್ದಾಣದ ಬಳಿ ಕಾರಿನಲ್ಲಿ ಬಂದು ಚಹಾ ಸೇವಿಸುತ್ತಿದ್ದರು. ಈ ಸಂದರ್ಭದಲ್ಲಿ ಮೂವರು, ನಮ್ಮನ್ನು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಡ್ರಾಪ್ ಮಾಡಿ ಎಂದು ಕೋರಿಕೊಂಡಿದ್ದಾರೆ.
ಇದಕ್ಕೆ ಸ್ಪಂದಿಸಿದ ಆಕಾಶ್, ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ತೆರಳುತ್ತಿದ್ದರು. ಆಗ ಜೆ.ಕೆ.ಮೈದಾನದ ಬಳಿ ಕಾರನ್ನು ನಿಲ್ಲಿಸುವಂತೆ ಹೇಳಿದ್ದಾರೆ. ಬಳಿಕ ಮೂವರು ದುಷ್ಕರ್ಮಿಗಳು, ಹಲ್ಲೆ ನಡೆಸಿ, ಅವರ ಬಳಿ ಇದ್ದ ಹಣ, ಕ್ರೆಡಿಟ್ ಕಾರ್ಡ್, ಪರ್ಸ್, ಬೆಳ್ಳಿ ಚೈನ್, ಕಡಗವನ್ನು ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಪ್ರಜ್ಞೆ ಕಳೆದುಕೊಂಡ ಆಕಾಶ್‌ಗೆ ಬಳಿಕ ಎಚ್ಚರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.