ಹುಣಸೂರು ತಾಲೂಕು ಬಿಲ್ಲೇನಹೊಸಳ್ಳಿ ಹಾಡಿಯಲ್ಲಿ ಸೌರಶಕ್ತಿ ಮತ್ತು ಜೈವಿಕ ಇಂಧನಗಳ ಬಳಕೆಯೊಂದಿಗೆ ಸ್ಥಾಪಿಸಿರುವ ಮೈಕ್ರೋಗ್ರಿಡ್ ಮೂಲಕ ಬಲ್ಬ್ ಉರಿಯುತ್ತಿರುವುದನ್ನು ಜೈವಿಕ ಇಂಧನಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಇ.ಸುಧೀಂದ್ರ ವೀಕ್ಷಿಸಿದರು. ಶ್ಯಾಂಸುಂದರ್, ಇಒ ಕೆ.ಹೊಂಗಯ್ಯ ಇತರರಿದ್ದಾರೆ.
ಹುಣಸೂರು: ನವೀಕರಿಸಬಹುದಾದ ಇಂಧನಗಳ ಬಳಕೆಯಿಂದ ದೇಶದ ಆರ್ಥಿಕತೆ ಸಬಲತೆಯತ್ತ ಸಾಗಲು ಸಾಧ್ಯವೆಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಇ.ಸುಧೀಂದ್ರ ಅಭಿಪ್ರಾಯಪಟ್ಟರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಬಿಲ್ಲೇನಹೊಸಹಳ್ಳಿ ಹಾಡಿಯಲ್ಲಿ ಅಳವಡಿಸಿರುವ ಸೌರಶಕ್ತಿ ಮತ್ತು ಜೈವಿಕ ಇಂಧನ ಬಳಸಿರುವ ಮೈಕ್ರೋಗ್ರಿಡ್ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ಗಿರಿಜನ ಹಾಡಿಯಲ್ಲಿ ಬೆಂಗಳೂರಿನ ಆಶ್ರಯಹಸ್ತ ಟ್ರಸ್ಟ್ ವತಿಯಿಂದ ಆಳವಡಿಸಿರುವ ಮೈಕ್ರೋಗ್ರಿಡ್ ಮೂಲಕ ಹಾಡಿಯ 70 ಕುಟುಂಬಗಳು ಬೆಳಕು ಕಾಣುತ್ತಿವೆ. ಕಾಡಂಚಿನ ಭಾಗದಲ್ಲಿ ಹಗಲಿರುಳು ವಿದ್ಯುತ್‌ದೀಪ ಇರುವುದು ಅವರು ಬದುಕಿಗೆ ಆಸರೆಯಾಗಿದ್ದು, ಮಾನವ- ವನ್ಯಜೀವಿ ಸಂಘರ್ಷ ನಿಯಂತ್ರಣವೂ ಸಾಧ್ಯವಾಗಲಿದೆ. ಬಹು ಉಪಯೋಗಿ ವ್ಯವಸ್ಥೆಯಾದ ಜೈವಿಕ ಇಂಧನ ಬಳಕೆ ಮತ್ತು ಅದರೊಂದಿಗೆ ಸೌರಶಕ್ತಿಯನ್ನು ಬಳಸಿಕೊಳ್ಳುವುದು ಇಂದಿನ ಅಗತ್ಯವಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲೂ ಇಂತಹ ಘಟಕಗಳ ಸ್ಥಾಪನೆ ಆದಲ್ಲಿ ಆರ್ಥಿಕ ಹೊರೆ ತಗ್ಗಿಸಬಹುದಾಗಿದೆ. ಹಾಡಿಯ ಗಿರಿಜನರು ಯೋಜನೆಯ ಸದ್ಬಳಕೆ ಮತ್ತು ಉತ್ತಮ ನಿರ್ವಹಣೆ ಮಾಡಿರುವುದು ಶ್ಲಾಘನೀಯ ಎಂದರು.
ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್ ಮಾತನಾಡಿ, ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಇಂತಹ ಘಟಕ ಸ್ಥಾಪಿಸಿ ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾಯತ್ತ ಪಡೆಯಲು ನಿರ್ಧರಿಸಲಾಗಿದ್ದು, ಈ ಕುರಿತು ರಾಜ್ಯದ ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ತಿಳಿಸಿದರು.
ಮೈಸೂರು ಎನ್‌ಐಇ ಕಾಲೇಜಿನ ಪ್ರೊ.ಶಾಮ್ ಸುಂದರ್ ಘಟಕ ಸ್ಥಾಪನೆ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ಒದಗಿಸಿದರು. ಇದು ಒಳ್ಳೆಯ ಹಾಗೂ ಭರವಸೆ ಮೂಡಿಸುವ ಪ್ರಯೋಗ. ಇಂತ ಘಟಕಗಳು ದೇಶವ್ಯಾಪಿ ಹರಡಿ ಸ್ವಾವಲಂಬನೆಗೆ ಹಾಗೂ ನವೀಕರಿಸಬಹುದಾದ ಇಂಧನ ವೃದ್ಧಿಸಲು ಪಡಿಸಲು ಸಹಾಯವಾಗಿ ದೇಶದ ಆರ್ಥಿಕ ಸ್ವಾವಲಂಬನೆಗೆ ದಾರಿಯಾಗುತ್ತದೆ ಎಂದರು.
ಇದೇ ವೇಳೆ ಡೀಡ್ ಸಂಸ್ಥೆ ನಿರ್ದೇಶಕ ಹಾಗೂ ಬಿಲ್ಲೇನಹೊಸಹಳ್ಳಿ ಹಾಡಿ ಜನರು ಆದಿವಾಸಿಗಳಿಗೆ ಈ ಸಾಲಿನಲ್ಲಿ ವಿಶೇಷ ಅನುದಾನವನ್ನು ರಾಜ್ಯ ಬಜೆಟ್ ನೀಡಲು ಮುಖ್ಯಮಂತ್ರಿಗಳಿಗೆ ತಿಳಿಸಲು ಕೋರಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಹೊಂಗಯ್ಯ, ನೇರಳಕುಪ್ಪೆ ಗ್ರಾ.ಪಂ.ಪಿಡಿಒ ವರಲಕ್ಷ್ಮೀ ಸೇರಿದಂತೆ ಸೆಸ್ಕ್ ಮತ್ತಿತರ ಇಲಾಖೆ ಅಧಿಕಾರಿಗಳು ಮತ್ತು ಹಾಡಿಯ ಗಿರಿಜನರು ಹಾಜರಿದ್ದರು.