ನಗರದ ಜೆಎಸ್‌ಎಸ್ ಕಲ್ಯಾಣ ಮಂಟಪದಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ಸುತ್ತೂರಿನ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಮಲ್ಲನ ಮೂಲೆ ಮಠದ ಶ್ರೀ ಇಮ್ಮಡಿ ಸಿದ್ಧಲಿಂಗ ಸ್ವಾಮೀಜಿ, ದೇವನೂರು ಮಠದ ಶ್ರೀ ಮಹಾಂತ ಸ್ವಾಮೀಜಿ, ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ, ಮಹಾಸಭಾ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಇದ್ದರು.
ನಂಜನಗೂಡು: ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಬಸವಣ್ಣ ಅವರನ್ನು ಸ್ಮರಣೆ ಮಾಡುವ ಜತೆಗೆ ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳಿಗೆ ಮಹತ್ವ ಬರಲಿದೆ ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಜೆಎಸ್‌ಎಸ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳಿಂದ ಏರ್ಪಡಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರು ನಾಡಿಗೆ ನೀಡಿರುವ ಕೊಡುಗೆ ಅಪಾರವಾಗಿದೆ. 12ನೇ ಶತಮಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮಾದರಿಯ ಅನುಭವ ಮಂಟಪವನ್ನು ಸ್ಥಾಪಿಸಿದರು. ಮೇಲು-ಕೀಳು ಎಂಬ ಭೇದಭಾವವಿಲ್ಲದೆ ತಮ್ಮ ತಮ್ಮ ಅನುಭವಗಳನ್ನು ಶರಣರು ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಯಾರನ್ನೂ ಓಲೈಸುವ ಅಥವಾ ತೃಪ್ತಿಪಡಿಸುವ ಉದ್ದೇಶವಿರಲಿಲ್ಲ. ಧಾರ್ಮಿಕ ಆಚರಣೆ ಮತ್ತು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿತ್ತು. ಸತ್ಯದ ಪರಾಮರ್ಶೆ ಪರಸ್ಪರ ವಿಚಾರ ವಿನಿಮಯ ನಡೆಯುತ್ತಿದ್ದವು. ಆದರೆ 21ನೇ ಶತಮಾನದಲ್ಲಿ ಇಂದು ಆಚರಣೆ ಎಷ್ಟು ಮುಖ್ಯ ಅದೇ ರೀತಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಕೇವಲ ಸ್ಮರಣೆಯಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ. ಜತೆಗೆ ಅವರನ್ನು ಅನುಸರಿಸಿದರೆ ಮಾತ್ರ ಸಾಧ್ಯ. ಬಸವಣ್ಣನವರ ವಚನಗಳಲ್ಲಿ ತಿಳಿಸಿರುವಂತೆ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬಳಿಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಮಾತನಾಡಿ, ನನ್ನ ಎರಡು ವರ್ಷಗಳ ಅವಧಿಯಲ್ಲಿ ಕಳೆದ ವರ್ಷ ಅದ್ದೂರಿಯಾಗಿ ಬಸವ ಜಯಂತಿಯನ್ನು ಆಚರಣೆ ಮಾಡಲಾಗಿತ್ತು. ಸಮಾಜದ ಈಶ್ವರ ಕಂಡ್ರೆ, ಬಿ.ವೈ.ವಿಜಯೇಂದ್ರ, ಗಣೇಶ್ ಪ್ರಸಾದ್ ಸೇರಿದಂತೆ ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿತ್ತು. ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಸುಮಾರು ಒಂದು ಸಾವಿರ ಸದಸ್ಯತ್ವವನ್ನು ಕೊಡುಗೆಯಾಗಿ ನೀಡಿದ್ದೇನೆ. ತಾಲೂಕಿನಲ್ಲಿ ಸಮಾಜಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿದ್ದು, ಶ್ರೀಗಳು ಈ ಬಗ್ಗೆ ಹೆಚ್ಚಿನ ಸಹಕಾರವನ್ನು ನೀಡಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಮಲ್ಲನಮೂಲೆ ಮಠ ಅಧ್ಯಕ್ಷ ಶ್ರೀ ಇಮ್ಮಡಿ ಸಿದ್ದಲಿಂಗ ಸ್ವಾಮೀಜಿ, ದೇವನೂರಿನ ಶ್ರೀ ಮಹಾಂತ ಸ್ವಾಮೀಜಿ, ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ ಮಾತನಾಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮಂಗಳ ಮಂಟಪದವರೆಗೆ ಮೆರವಣಿಗೆ ನಡೆಯಿತು. ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನವಿಲೂರು ಮತ್ತು ಚುಂಚನಹಳ್ಳಿ ಕಡಕಲಕಟ್ಟೆ ಮಠಾಧೀಶರಾದ ಶ್ರೀ ಚನ್ನಬಸವ ಸ್ವಾಮೀಜಿ ಹಾಗೂ ಶರಣ ಸಂಗಮ ಮಠದ ನಾಗರಾಜೇಂದ್ರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ಮತ್ತಷ್ಟು ಮೆರುಗು ತಂದವು.