ಹುಣಸೂರು ತಾಲೂಕು ಹುಂಡಿಮಾಳ ಗ್ರಾಮದ ಶಾಲೆಯಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಅರಿವು ಕಾರ್ಯಕ್ರಮದಲ್ಲಿ ಗಣ್ಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸೋಮಯ್ಯ, ರವಿ, ಶೇಖರ್, ದೇವಕಿ, ಜಯಶ್ರೀ ಅಂಗಡಿ ಇತರರಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೋಮಯ್ಯ ಕರೆ
ಹುಣಸೂರು: ಲಿಂಗ ತಾರತಮ್ಯವನ್ನು ದೂರಾಗಿಸುವ ಮತ್ತು ಮಹಿಳಾ ಸಬಲೀಕರಣವು ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಕ್ರಮದ ಮೂಲ ಉದ್ದೇಶವಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಎಸಿಡಿಪಿಒ) ಸೋಮಯ್ಯ ತಿಳಿಸಿದರು.
ಶನಿವಾರ ತಾಲೂಕಿನ ಹುಂಡಿಮಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬೇಟಿ ಬಚಾವೋ ಬೇಟಿ ಪಡಾವೋ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣುಮಗುವಿನ ಕುರಿತಾದ ಪಾಲಕರಲ್ಲಿನ ತಾತ್ಸಾರ ಮನೋಭಾವ ತೊಲಗಬೇಕಿದೆ. ಮಹಿಳಾ ಸಬಲೀಕರಣ ಎನ್ನುವುದು ಹೆಣ್ಣುಮಕ್ಕಳು ಮಹಿಳೆಯರಾದ ನಂತರ ಆಲೋಚಿಸುವುದಕ್ಕಿಂತ ಈಗಿಂದಲೇ ಬಾಲಕಿಯರಲ್ಲಿ ಈ ಕುರಿತು ಅರಿವು ಮೂಡಿಸಬೇಕು. ಅಡುಗೆ ಮನೆಯನ್ನು ಸಮರ್ಥವಾಗಿ ನಿರ್ವಹಿಸುವ ಮಹಿಳೆ ಗಗನಯಾನದಲ್ಲೂ ತನ್ನನ್ನು ತೊಡಗಿಸಿಕೊಂಡು ಎಲ್ಲರಿಂದ ಮೆಚ್ಚುಗೆ ಗಳಿಸಿದ್ದಾಳೆ. ಸಾಧಿಸುವ ಛಲ ಮಹಿಳೆಯರಿಗೆ ಹೆಚ್ಚು ಇರುತ್ತದೆ. ಹೆಣ್ಣುಭ್ರೂಣ ಹತ್ಯೆಯಂತಹ ಸಾಮಾಜಿಕ ಅನಿಷ್ಠಗಳನ್ನು ತೊಲಗಿಸಬೇಕಿದೆ. 2015ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ಈ ಕಾರ್ಯಕ್ರಮ ಹೆಣ್ಣುಮಕ್ಕಳ ಸಮಗ್ರ ಅಬಿವೃದ್ಧಿಯ ಗುರಿಯನ್ನು ಹೊಂದಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಶಿಕ್ಷಕ ರವಿ ಮಾತನಾಡಿ, ಮಹಿಳಾ ಹೋರಾಟಗಾರರು ಮಹಿಳೆಯರ ರಕ್ಷಣೆಗಾಗಿ ಅನೇಕ ಕ್ರಾಂತಿಕಾರಕ ಹೆಜ್ಜೆಗಳನ್ನು ಇಟ್ಟು ಇತಿಹಾಸ ನಿರ್ಮಿಸಿದ್ದಾರೆ. ಅವರು ನಡೆಸಿದ ಹೋರಾಟದ ಫಲವಾಗಿ ಇಂದು ಮಹಿಳೆಯರು ಸ್ವಾತಂತ್ರ್ಯ ಸಮಾನತೆಯನ್ನು ಪಡೆದುಕೊಂಡು ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲು ಇಡುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ನಮ್ಮ ಶಾಲೆಯ ವ್ಯಾಪ್ತಿಯಲ್ಲಿ ಯಾವುದೇ ಬಾಲ್ಯ ವಿವಾಹಗಳು ಹಾಗೂ ಪೋಕ್ಸೋ ಪ್ರಕರಣಗಳು ದಾಖಲಾಗಿರುವುದಿಲ್ಲ. ಇಲ್ಲಿನ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಈ ಬಗ್ಗೆಯ ಅರಿವು ಕಾರ್ಯಕ್ರಮಗಳು ಆಗಾಗ್ಗೆ ನೀಡುತ್ತಿರುವುದರಿಂದ ಹೆಚ್ಚಿನ ಅರಿವು ದೊರೆತಂತಾಗಿ ಕಾನೂನುಬಾಹಿರ ಕ್ರಮಗಳು ನಡೆದಿಲ್ಲವೆಂದರು.
ಕಾಯಕ್ರಮದಲ್ಲಿ ಪಿಡಿಒ ಟಿ.ಶೇಖರ್, ಸಹ ಶಿಕ್ಷಕ ಕೃಷ್ಣೇಗೌಡ, ದಮಯಂತಿ, ಬಸವ ತರಗಾರ, ಜಯಶ್ರೀ ಅಂಗಡಿ, ಡಿಸಿಪಿಒ ಘಟಕದ ಸಂಯೋಜಕಿ ದೇವಕಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.