ಸರಗೂರು ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ ಕಾಡಾನೆ ಹಿಂಡು ದಾಳಿಗೆ ಬಾಳೆ ತೋಟ ನಾಶಗೊಂಡಿರುವುದು. 
ಮೈಸೂರು

ಲಗ್ಗೆ ಇಟ್ಟ ಕಾಡಾನೆ ಹಿಂಡು * ಮನುಗನಹಳ್ಳಿಯಲ್ಲಿ ಬಾಳೆ ತೋಟ ನಾಶ

ಎ. ಆರ್. ರಘುರಾಮ
ಸರಗೂರು : ತಾಲೂಕಿನ ಮನುಗನಹಳ್ಳಿ ಗ್ರಾಮದ ಜಮೀನುಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಬಾಳೆ ತೋಟದ ಫಸಲನ್ನು ತಿಂದು, ತುಳಿದು ನಾಶಗೊಳಿಸಿವೆ.
ಗ್ರಾಮದ ಉಮೇಶ್ ಎಂಬುವರ ಎರಡು ಎಕರೆ ತೋಟದಲ್ಲಿ 2,000 ಬಾಳೆ ಗಿಡ ನಾಟಿ ಮಾಡಲಾಗಿತ್ತು. ಶನಿವಾರ ರಾತ್ರಿ ಲಗ್ಗೆ ಇಟ್ಟ ಕಾಡಾನೆ ಹಿಂಡು ಬಹುತೇಕ ಬಾಳೆ ಗಿಡದ ಫಸಲು ತಿಂದು ನಾಶಗೊಳಿಸಿವೆ. ಇದಲ್ಲದೆ ಬಸವಣ್ಣ ಅವರ ಒಂದು ಎಕರೆ, ಮಹಾದೇವ ಸ್ವಾಮಿ ಅವರ ಒಂದು ಎಕರೆ, ಶ್ರೀಧರ ಅವರ ಅರ್ಧ ಎಕರೆ ಬಾಳೆತೋಟ ಮತ್ತು ನಂಜಪ್ಪ ಅವರ ಒಂದು ಎಕರೆ ಟೊಮ್ಯಾಟೋ ತೋಟವನ್ನು ಸಂಪೂರ್ಣವಾಗಿ ನೆಲಸಮಗೊಳಿಸಿದೆ. ನೊಂದ ಕೃಷಿಕರು ತಮ್ಮ ಅಳಲು ತೋಡಿಕೊಂಡಿದ್ದು, ಅಧಿಕಾರಿಗಳು ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ನುಗು ವನ್ಯಜೀವಿ ವಲಯ, ಸರಗೂರು ವಲಯ ಅರಣ್ಯ ಪ್ರದೇಶ ವ್ಯಾಪ್ತಿಯ ಚಿಕ್ಕದೇವಮ್ಮನ ಬೆಟ್ಟದಿಂದ ಗ್ರಾಮದತ್ತ ಬರುವ ಕಾಡಾನೆಗಳು, ರೈತರ ಜಮೀನುಗಳಿಗೆ ನುಗ್ಗಿ ತೋಟವನ್ನು ನಾಶಗೊಳಿಸಿವೆ. ಇದರಿಂದಾಗಿ ಲಕ್ಷಾಂತರ ರೂ.ನಷ್ಟವಾಗಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಯಡಿಯಾಲ ಡಿಸಿಎಫ್ ಪರಮೇಶ್ ಅವರಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಹೀಗಾದರೆ ರೈತರ ಗೋಳನ್ನು ಕೇಳುವವರು ಯಾರು? ಕೂಡಲೇ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಉಗ್ರ ಪ್ರತಿಭಟನೆ ನಡೆಸುತ್ತೇವೆ:
ಕಾಡುಪ್ರಾಣಿಗಳು ಅರಣ್ಯ ವ್ಯಾಪ್ತಿಯಿಂದ ಹೊರಬರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೆ ಕಂಬಿಗಳನ್ನು ಅಳವಡಿಸಬೇಕು. ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ನೊಂದವರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು. ರಾತ್ರಿ ಆನೆ ಕಾವಲನ್ನು ಸಮಪರ್ಕವಾಗಿ ಕಾಯಲು ಬೀಟ್ ಸಿಬ್ಬಂದಿಗೆ ಸೂಚನೆ ನೀಡಬೇಕು. ಕಾಡಾನೆಗಳನ್ನು ಬೇರೆಡೆಗೆ ಓಡಿಸಲು ಕ್ರಮವಹಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಅರಣ್ಯ ಇಲಾಖೆ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡ ಉಮೇಶ್ ಎಚ್ಚರಿಕೆ ನೀಡಿದ್ದಾರೆ.