ರೈಲ್ವೆ ಕಂಬಿ ತಡೆಗೋಡೆಗೆ ಸಿಲುಕಿ ಕೆಲ ಹೊತ್ತು ಒದ್ದಾಡಿದ್ದ ಕಾಡಾನೆ
ಸಾಮಾಜಿಕ ಜಾಲತಾಣದಲ್ಲಿ ವೈರಲ್
ಹನಗೋಡು: ನಾಗರಹೊಳೆ ಉದ್ಯಾನದಿಂದ ಮೇವನ್ನು ಅರಸಿಕೊಂಡು ಹೊರಬಂದಿದ್ದ ಕಾಡಾನೆಯೊಂದು ಮರಳಿ ಕಾಡಿಗೆ ಸೇರುವ ಸಂದರ್ಭ ರೈಲ್ವೆ ಕಂಬಿ ತಡೆಗೋಡೆಗೆ ಸಿಲುಕಿ ಕೆಲ ಹೊತ್ತು ಒದ್ದಾಡಿದ ಘಟನೆ ಹುಣಸೂರು ವನ್ಯಜೀವಿ ವಲಯದ ಅಯ್ಯನಕೆರೆ ಹಾಡಿ ಬಳಿ ನಡೆದಿದೆ. ಕಳೆದೆರಡು ದಿನಗಳ ಹಿಂದೆ ಉದ್ಯಾನದಿಂದ ಹೊರಬಂದಿದ್ದ 25 ವರ್ಷದ ಕಾಡಾನೆಯು ಸುತ್ತಮುತ್ತಲ ತೋಟಗಳಿಗೆ ನುಗ್ಗಿ, ಬೆಳೆ ತಿಂದು ಹೊಟ್ಟೆ ತುಂಬಿಸಿಕೊಂಡಿತ್ತು.
ಶುಕ್ರವಾರ ನಸುಕಿನಲ್ಲಿ ಗ್ರಾಮದ ಜನರು ಕಾಡಾನೆಯನ್ನು ಕಂಡು ಕೂಗಾಟ ನಡೆಸಿದಾಗ ಕಾಡಿನತ್ತ ಓಡಿತು. ಈ ಸಂದರ್ಭ ರೈಲ್ವೆ ಕಂಬಿ ಹಳಿಯನ್ನು ನುಸುಳಲು ಹೋಗಿ ಸಿಲುಕಿಕೊಂಡಿತು.
ಘೀಳಿಡುತ್ತಾ ಕೆಲ ಸಮಯ ಒದ್ದಾಡಿದ ಆನೆ ಕೊನೆಗೆ ಕಂಬಿ ದಾಟಿಕೊಂಡು ಕಾಡು ಸೇರಿದೆ. ಸ್ಥಳಕ್ಕೆ ಆನೆ ಕಾವಲು ಪಡೆ, ಅರಣ್ಯ ಸಿಬ್ಬಂದಿ ಧಾವಿಸಿ ಪರಿಶೀಲಿಸಿದ್ದಾರೆ ಎಂದು ಆರ್ ಎಫ್ ಒ ಸುಬ್ರಮಣಿ ತಿಳಿಸಿದ್ದಾರೆ. ಉದ್ಯಾನದೊಳಕ್ಕೆ ಸೇರುವ ಭರದಲ್ಲಿ ರೈಲ್ವೆಕಂಬಿ ತಡೆಗೋಡೆ ಕೆಳಗೆ ಆನೆ ಸಿಲುಕಿ ಕೊಂಡಿತ್ತು. ಕೊನೆಗೆ ತಾನೇ ಬಿಡಿಸಿಕೊಂಡು ಉದ್ಯಾನವನ ಸೇರಿಕೊಂಡಿದೆ ಎಂದು ಎಸಿಎಫ್ ಲಕ್ಷ್ಮಿಕಾಂತ್ ಮಾಹಿತಿ ನೀಡಿದ್ದಾರೆ.
ಆನೆ ಸಿಲುಕಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.