ಮೈಸೂರು: ಕರ್ತವ್ಯದಲ್ಲಿ ಉದಾಸೀನ ತೋರಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರಿನ ಸಿಸಿಬಿಯ ಎಂಟು ಮಂದಿ ಪೊಲೀಸರನ್ನು ಎತ್ತಂಗಡಿ ಮಾಡಲಾಗಿದೆ. ಮಾತ್ರವಲ್ಲ ರೌಡಿ ಪ್ರತಿಬಂಧಕ ದಳದ ಮೂವರನ್ನು ವರ್ಗ ಮಾಡಲಾಗಿದ್ದು, ವರ್ಗಾವಣೆ ಆದೇಶದ ಮರು ಕ್ಷಣದಲ್ಲೇ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಬಹಳ ವರ್ಷಗಳ ಕಾಲ ಸಿಸಿಬಿಯಲ್ಲೇ ಉಳಿದಿದ್ದ ಶಿವಣ್ಣ, ದೊಡ್ಡೇಗೌಡ, ಅನಿಲ್, ರಾಜು, ಉಮಾ ಮಹೇಶ್ವರ್, ರಾಮಸ್ವಾಮಿ, ಪ್ರಕಾಶ್, ಗೋವಿಂದ ವರ್ಗಾವಣೆಗೊಂಡವರು.
ಮೈಸೂರಿನಲ್ಲಿ ಇತ್ತೀಚೆಗೆ ಡ್ರಗ್ ದಂಧೆ ನಿರೀಕ್ಷೆಗೂ ಮೀರಿ ನಡೆದಿದ್ದು, ಮಹಾರಾಷ್ಟ್ರ ಹಾಗೂ ಗುಜರಾತ್ ಪೊಲೀಸರು ಮೈಸೂರಿನ ಎರಡು ಕಡೆ ಎರಡು ಬಾರಿ ಪ್ರತ್ಯೇಕವಾಗಿ ದಾಳಿ ಮಾಡಿ ನೂರಾರು ಕೋಟಿ ರೂ. ಮೌಲ್ಯದ ಡ್ರಗ್ ಜಪ್ತಿ ಮಾಡಿದ್ದಲ್ಲದೆ, ಹಲವರನ್ನು ವಶಕ್ಕೆ ಪಡೆದಿದ್ದರು. ಇದರಿಂದ ಅವಮಾನಕ್ಕೊಳಗಾದ ಮೈಸೂರು ನಗರ ಪೊಲೀಸರು ಡ್ರಗ್ ವಿರುದ್ಧ ನಡೆದ ವಿಶೇಷ ಕಾರ್ಯಾಚರಣೆ ವೇಳೆ ಹಲವಾರು ಮಂದಿ ಡ್ರಗ್ ಸಮೇತ ಸಿಕ್ಕಿಬಿದ್ದು ಜೈಲಿನಲ್ಲಿದ್ದಾರೆ.
ಡ್ರಗ್ ಜಾಲ ವ್ಯಾಪಕವಾಗಿ ಹರಡಿದ್ದರೂ, ಅದನ್ನು ಹತ್ತಿಕ್ಕುವಲ್ಲಿ ಸಿಸಿಬಿ ಘಟಕ ವಿಫಲವಾಗಿತ್ತು. ಸಿಸಿಬಿ ಮಾತ್ರವಲ್ಲದೆ, ರೌಡಿ ಪ್ರತಿಬಂಧಕ ದಳದ ಮೂವರು ಸಿಬ್ಬಂದಿ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.