ನಗರದ ಈದ್ಗಾ ಮೈದಾನದಲ್ಲಿ ಮೈಸೂರು ಜಿಲ್ಲಾ ವಕ್ಫ್ ಮಂಡಳಿ ವತಿಯಿಂದ ತಾಲೂಕಿನ ಮಸೀದಿಗಳಿಗೆ ರಂಜಾನ್ ಹಬ್ಬದ ಪ್ರಯುಕ್ತ ಆಹಾರ ಕಿಟ್‌ಗಳನ್ನು ಅಧ್ಯಕ್ಷ ಅಜೀಜುಲ್ಲ ಅಜ್ಜು ವಿತರಿಸಿದರು. ಉಪಾಧ್ಯಕ್ಷ ಹಲೀಲ್, ಮುಸ್ತಂ ಅಹಮದ್, ಯಾಮಿನ್ ಅಲಿ, ನಗರಸಭಾ ಸದಸ್ಯ ಸಿದ್ದಿಕ್, ಅಬ್ದುಲ್ ಖಾದರ್ ಇತರರಿದ್ದರು.
ನಂಜನಗೂಡು: ಪವಿತ್ರ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ ಮಂಡಳಿ ಹಾಗೂ ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿಯಿಂದ ನಗರದ ಈದ್ಗಾ ಮಸೀದಿಯಲ್ಲಿ ಸೋಮವಾರ ತಾಲೂಕಿನ ಮಸೀದಿಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.
ಆಹಾರ ಕಿಟ್ ವಿತರಣೆ ಮಾಡಿ ಮೈಸೂರು ಜಿಲ್ಲಾ ಸಮಿತಿ ಅಧ್ಯಕ್ಷ ಅಜೀಜುಲ್ಲ ಅಜ್ಜು ಮಾತನಾಡಿ, ವಕ್ಫ್ ಮಂಡಳಿ ವತಿಯಿಂದ ಈ ವರ್ಷದಿಂದ ಮಸೀದಿಗಳಿಗೆ ಆಹಾರದ ಕಿಟ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ರಂಜಾನ್ ಹಬ್ಬದಲ್ಲಿ ಮಸೀದಿಯಲ್ಲಿನ ಗುರುಗಳು ಹೆಚ್ಚಿನ ಕೆಲಸವನ್ನು ಮಾಡುತ್ತಾರೆ. ಅವರನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತಿದ್ದೇವೆ. ಅವರ ಆಶೀರ್ವಾದದಿಂದ ಮಂಡಳಿ ಅಭಿವೃದ್ಧಿಯಾದರೆ ಇನ್ನು ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಧರ್ಮದ ಬಡಜನರಿಗೆ ಮಂಡಳಿಯಿಂದ ಶೇ.30ರಷ್ಟು ಹಣ ಮೀಸಲಿಟ್ಟಿದ್ದೇವೆ. ಅತಿ ಕಡಿಮೆ ವಯಸ್ಸಿನಲ್ಲಿ ವಿಧವೆಯರಾದ ಸುಮಾರು 120 ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಲಿಗೆ ಯಂತ್ರವನ್ನು ವಿತರಿಸಿದ್ದೇವೆ ಎಂದು ತಿಳಿಸಿದರು.
ಉಪಾಧ್ಯಕ್ಷ ಹಲೀಲ್, ಮುಸ್ತಂ ಅಹಮದ್, ಯಾಮಿನ್ ಅಲಿ, ನಗರಸಭಾ ಸದಸ್ಯ ಸಿದ್ದಿಕ್, ಮಂಡಳಿ ಅಧಿಕಾರಿ ಇಮಯಂ ಶರೀಫ್, ಮುಖಂಡ ಅಬ್ದುಲ್ ಖಾದರ್, ಯಾನುಷ್ ಜಾವಿದ್ ಶರೀಫ್ ಸೇರಿದಂತೆ ತಾಲೂಕಿನ ಮಸೀದಿಗಳ ಮೌಲ್ವಿಗಳು ಹಾಜರಿದ್ದರು.