ಹುಣಸೂರು ನಗರಸಭೆಯ 2025-26ನೇ ಸಾಲಿನ ಆಯವ್ಯಯವನ್ನು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮಂಡಿಸಿದರು. ಶಾಸಕ ಜಿ.ಡಿ.ಹರೀಶ್‌ಗೌಡ, ಪೌರಾಯುಕ್ತೆ ಕೆ.ಮಾನಸ ಇತರರಿದ್ದರು. 
ಮೈಸೂರು

66.27 ಲಕ್ಷ ರೂ. ಉಳಿತಾಯ ಬಜೆಟ್

ಹುಣಸೂರು : ನಗರಸಭೆಯ 2026-27ನೇ ಸಾಲಿಗಾಗಿ 66.27 ಲಕ್ಷ ರೂ.ಗಳ ಉಳಿತಾಯದ ಬಜೆಟ್ ಅನ್ನು ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮಂಡಿಸಿದರು.
ನಗರಸಭೆಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಜೆಟ್ ಮಂಡನಾ ಸಭೆಯಲ್ಲಿ 55.70 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದರು. ಈ ಬಾರಿ ನಗರಸಭೆಯಲ್ಲಿ 44.84 ಕೋಟಿ ರೂ.ಗಳ ವಿವಿಧ ಮೂಲಗಳಿಂದ ಆದಾಯದ ನಿರೀಕ್ಷೆ ಮಾಡಲಾಗಿದ್ದರೆ, 55.04 ಕೋಟಿ ರೂ.ಗಳ ನಿರೀಕ್ಷಿತ ಖರ್ಚು ಅಂದಾಜಿಸಲಾಗಿದ್ದು, ಒಟ್ಟು 66,27,000 ರೂ.ಗಳ ಉಳಿತಾಯವನ್ನು ನಿರೀಕ್ಷಿಸಲಾಗಿದೆ.
ಸರ್ಕಾರದ ಅನುದಾನಗಳ ಅವಲಂಬನೆ: ಜಿಲ್ಲಾಧಿಕಾರಿ ಮಂಡಿಸಿರುವ ಆಯವ್ಯಯದಲ್ಲಿ ನಗರಸಭೆ ಆದಾಯ ಮೂಲಗಳು ಸರ್ಕಾರದ ವಿವಿಧ ಅನುದಾನಗಳನ್ನೇ ನೆಚ್ಚಿಕೊಂಡಿವೆ. ನಗರಸಭೆ ಸ್ವಂತ ಸಂಪನ್ಮೂಲಗಳು 8.77 ಕೋಟಿ ರೂ.ಗಳಾಗಿದ್ದು, ಈ ಪೈಕಿ ಆಸ್ತಿ ತೆರಿಗೆ ಬಹುಪಾಲು 6.24 ಕೋಟಿ ರೂ.ಗಳನ್ನು ಒಳಗೊಂಡಿದ್ದರೆ, ನೀರು ಸರಬರಾಜಿನಿಂದ 1.12 ಕೋಟಿ ರೂ.ಗಳ ಸಂಗ್ರಹಣೆಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದರೆ ಸರ್ಕಾರದ ಅನುದಾನದ ಒಟ್ಟು ಮೊತ್ತ 21.10 ಲಕ್ಷ ರೂ.ಗಳ ನಿರೀಕ್ಷೆಯಿದ್ದು, ಮೂರು ವರ್ಷಗಳಿಂದ 15ನೇ ಹಣಕಾಸು ನಿಧಿ ಬಂದಿಲ್ಲ. ಕಾರಣ ಆಡಳಿತ ಮಂಡಳಿ ಇಲ್ಲದ ಕಾರಣ ಕೇಂದ್ರ ಸರ್ಕಾರ ಮಂಜೂರು ಮಾಡಿಲ್ಲ.(4.21 ಕೋಟಿ ರೂ.ಗಳು) 16ನೇ ಹಣಕಾಸು ಆಯೋಗದ ಅನುದಾನ 5.37 ಕೋಟಿ ರೂ.ಗಳ ನಿರೀಕ್ಷೆ ಮಾಡಲಾಗಿದೆ. ಎಸ್‌ಬಿಎಂ ಯೋಜನೆಗೆ 2.30 ಕೋಟಿ ರೂ.ಗಳ ಅನುದಾನ ನಿರೀಕ್ಷಿಸಲಾಗಿದೆ. ರಾಜಸ್ವ ಮತ್ತು ಬಂಡವಾಳದ ಮೊತ್ತ ಒಟ್ಟು 29.87 ಕೋಟಿ ರೂ.ಗಳಾಗಿದ್ದು, ಅಸಾಧಾರಣ ಸ್ವೀಕೃತಿಗಳು 14.96 ಕೋಟಿ ರೂ.ಗಳಾಗಿದ್ದು, ಒಟ್ಟು ಸ್ವೀಕೃತಿಯು 44.84 ಕೋಟಿ ರೂ.ಗಳೆಂದು ಆಯವ್ಯಯದಲ್ಲಿ ತಿಳಿಸಲಾಗಿದೆ.
ಬಂಡವಾಳ ವೆಚ್ಚ 23.83 ಕೋಟಿಗಳು: ಕ್ಯಾಪಿಟಲ್ ಎಕ್ಸ್‌ಪೆಂಡೀಚರ್ ವಿಭಾಗದಲ್ಲಿ ಬೀದಿದೀಪಗಳ ಅಭಿವೃದ್ಧಿಗೆ 2 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಘನತ್ಯಾಜ್ಯ ನಿರ್ವಹಣೆ(ಎಸ್‌ಬಿಎಂ 2ಗೆ) 2.30 ಕೋಟಿ ರೂ.ಗಳು, ಮಳೆ ನೀರು ಚರಂಡಿ, ಹಾಗೂ ತೆರೆದ ಚರಂಡಿ ಕಾಮಗಾರಿಗಳಿಗೆ 4.14 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದ್ದು ಒಟ್ಟು 23.83 ಕೋಟಿ ರೂ.ಗಳ ಬಂಡವಾಳ ವೆಚ್ಚ ಮಾಡುವ ನಿರೀಕ್ಷೆ ಹೊಂದಲಾಗಿದೆ.
ರಾಜಸ್ವ ವೆಚ್ಚಗಳು 17.63 ಕೋಟಿ ರೂ.ಗಳು: ವೇತನ ಪಾವತಿಗಾಗಿ 4.54 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಸ್ಟೇಷನರಿ ಖರ್ಚು 2 ಕೋಟಿ ರೂ.ಗಳಾಗಿದೆ. ಘನತ್ಯಾಜ್ಯ ನಿರ್ವಹಣೆ ವಿಭಾಗದ ವೇತನ, ವಿಮೆ, ದುರಸ್ತಿಗೆ ಸಂಬಂಧಿಸಿದಂತೆ 4.41 ಕೋಟಿ ರೂ.ಗಳು, ಮಾರಾಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಪತ್ರಕರ್ತರಿಗೆ 5 ಲಕ್ಷ ರೂ.ಗಳ ಸಹಾಯಧನ ಮೀಸಲಿರಿಸಲಾಗಿದೆ.
ವಿಶೇಷ ಯೋಜನೆಗಳು
ಪ್ರಸ್ತುತ ಸಾಲಿಗಾಗಿ ಕೈಗೊಳ್ಳಲು ಉದ್ದೇಶಿಸಿರುವ ವಿಶೇಷ ಯೋಜನೆಗಳ ಪೈಕಿ ಅಂಬೇಡ್ಕರ್ ಭವನ ಅಭಿವೃದ್ಧಿಗೆ 5 ಲಕ್ಷ ರೂ.ಗಳು, ಪತ್ರಕರ್ತರ ಭವನ ನಿರ್ಮಾಣಕ್ಕೆ 10 ಲಕ್ಷ ರೂ.ಗಳು, ನಗರಸಭೆ ಮೈದಾನದಲ್ಲಿ ಬಯಲುರಂಗಮಂದಿರ ಮತ್ತು ಹೈಟೆಕ್ ಶೌಚಗೃಹಕ್ಕಾಗಿ 40 ಲಕ್ಷ ರೂ.ಗಳು, ಆಂಜನೇಸ್ವಾಮಿ ದೇವಾಲಯದ ಆವರಣದ ಕಲ್ಯಾಣಿಯ ಅಭಿವೃದ್ಧಿ, ನಗರಸಭೆ ರೆಕಾರ್ಡ್ ರೂಂ, ಆಧುನೀಕರಣಕ್ಕಾಗಿ 40 ಲಕ್ಷ ರೂ.ಗಳು ಮತ್ತು ಲಕ್ಷ್ಮಣತೀರ್ಥ ನದಿ ಶುದ್ಧೀಕರಣಕ್ಕಾಗಿ 2 ಕೋಟಿ ರೂ.ಗಳ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಪೌರಾಯುಕ್ತೆ ಕೆ.ಮಾನಸಾ, ಲೆಕ್ಕಾಧಿಕಾರಿ ಶಾರದಮ್ಮ ಇತರರು ಇದ್ದರು.