ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿರುವ ಜಿಐ ಆಂಕಾಲಜಿ ಶೃಂಗಸಭೆಯನ್ನು ಗಣ್ಯರು ಉದ್ಘಾಟಿಸಿದರು. ಡಾ.ಕೆ.ಜಿ.ಶ್ರಿನಿವಾಸ್, ಡಾ.ರಾಮಕೃಷ್ಣ, ಅನುಜ್ ಎಸ್. ಗುಪ್ತಾ ಇತರರಿದ್ದರು.
- ಜಿಐ ಆಂಕಾಲಜಿ ಶೃಂಗಸಭೆಯಲ್ಲಿ ವೈದ್ಯರ ಅಭಿಪ್ರಾಯ
ಮೈಸೂರು: ಜಠರಗರುಳಿನ (ಜಿಐ) ಕ್ಯಾನ್ಸರ್‌ಗಳ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ತ್ವರಿತ ಬದಲಾವಣೆಗಳಾಗುತ್ತಿದ್ದು, ರೋಗಿಗಳಿಗೆ ಸಮಗ್ರ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡಲು ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರ ಜಂಟಿ ಭಾಗವಹಿಸುವಿಕೆ ಅಗತ್ಯ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟರು.
ನಗರದ ನಗರದ ಖಾಸಗಿ ಹೋಟೆಲ್‌ನಲ್ಲಿ ಕ್ಲಿಯರ್‌ಮೆಡಿ ಹೆಲ್ತ್‌ಕೇರ್, ಮೈಸೂರು ಗಟ್ ಕ್ಲಬ್, ಐಎಸ್‌ಜಿ ಕರ್ನಾಟಕ ಘಟಕ ಹಾಗೂ ಸಿಆರ್‌ಎಸ್‌ಎಫ್ ಸಹಯೋಗದಲ್ಲಿ ಆಯೋಜಿಸಿದ್ದ ಜಿಐ ಆಂಕಾಲಜಿ ಶೃಂಗಸಭೆಯಲ್ಲಿ ದೇಶ-ವಿದೇಶಗಳ ತಜ್ಞ ವೈದ್ಯರು ಭಾಗವಹಿಸಿ ಜಿಐ ಕ್ಯಾನ್ಸರ್‌ಗಳ ಆಧುನಿಕ ಚಿಕಿತ್ಸಾ ವಿಧಾನಗಳ ಕುರಿತು ಚರ್ಚಿಸಿದರು.
ಆಂಕಾಲಜಿ ಸೇವೆಗಳ ನಿರ್ದೇಶಕ ಹಾಗೂ ಹಿರಿಯ ವೈದ್ಯಕೀಯ ಆಂಕಾಲಜಿ ಸಲಹೆಗಾರ ಡಾ. ಕೆ.ಜಿ.ಶ್ರಿನಿವಾಸ್ ಮತ್ತು ಕ್ಲಿಯರ್‌ಮೆಡಿ ಹಾಸ್ಪಿಟಲ್ಸ್‌ನ ಹಿರಿಯ ವೈದ್ಯಕೀಯ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಹಾಗೂ ಮೈಸೂರು ಗಟ್ ಕ್ಲಬ್ ಅಧ್ಯಕ್ಷ ಡಾ. ರಾಮಕೃಷ್ಣ ಮಾತನಾಡಿ, ಆರಂಭಿಕ ಹಂತದಲ್ಲೇ ರೋಗ ಪತ್ತೆ, ಸುಧಾರಿತ ಎಂಡೋಸ್ಕೋಪಿ, ಗುರಿನಿರ್ದಿಷ್ಟ ಚಿಕಿತ್ಸೆ (ಟಾರ್ಗೆಟೆಡ್ ಥೆರಪಿ) ಹಾಗೂ ಇಮ್ಯುನೊಥೆರಪಿಗಳು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿವೆ ಎಂದರು.
ಈ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಮೈಸೂರಿನಲ್ಲಿಯೇ ಲಭ್ಯವಾಗುತ್ತಿದ್ದು, ವಿಶೇಷ ಚಿಕಿತ್ಸೆಗಾಗಿ ರೋಗಿಗಳು ಬೆಂಗಳೂರಿಗೆ ತೆರಳುವ ಅಗತ್ಯವನ್ನು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಕ್ಲಿಯರ್‌ಮೆಡಿ ಹೆಲ್ತ್‌ಕೇರ್‌ನ ಜಿಸಿಒಒ ಅನುಜ್ ಎಸ್. ಗುಪ್ತಾ ಮಾತನಾಡಿ, ಕೃತಕ ಬುದ್ಧಿಮತ್ತೆ (ಎಐ), ರೋಬೋಟಿಕ್ ಶಸ್ತ್ರಚಿಕಿತ್ಸೆ ಹಾಗೂ ಸುಧಾರಿತ ಎಂಡೋಸ್ಕೋಪಿ ತಂತ್ರಜ್ಞಾನಗಳ ಬಳಕೆಯಿಂದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೆಚ್ಚಿನ ನಿಖರತೆ ಸಾಧಿಸಲು ಸಾಧ್ಯವಾಗಿದೆ. ವೈದ್ಯಕೀಯ ಪರಿಣತಿಯೊಂದಿಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಅಗತ್ಯ ಎಂದರು.
ಶೃಂಗಸಭೆಯಲ್ಲಿ ಅನ್ನನಾಳ, ಜಠರ, ಮೇದೋಜೀರಕ ಗ್ರಂಥಿ ಹಾಗೂ ಕೊಲೊರೆಕ್ಟಲ್ ಕ್ಯಾನ್ಸರ್‌ಗಳಿಗೆ ಲಭ್ಯವಿರುವ ಆಧುನಿಕ ಚಿಕಿತ್ಸಾ ವಿಧಾನಗಳ ಕುರಿತು ವಿವಿಧ ಗೋಷ್ಠಿಗಳು ನಡೆದವು. ಡಲ್ಲಾಸ್‌ನ ನಾಟೇರಾ ಸಂಸ್ಥೆಯ ಡಾ. ವಸಂತ್ ಸಿರುವಲ್ಲೂರ್ ಮುರಳಿ ಅವರು ಸರ್ಕ್ಯುಲೇಟಿಂಗ್ ಟ್ಯೂಮರ್ ಡಿಎನ್‌ಎ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕ್ಲಿಯರ್‌ಮೆಡಿ ಪ್ರಾದೇಶಿಕ ನಿರ್ದೇಶಕ ರವಿ ಕುಮಾರ್ ಸಂಜೀವಣ್ಣ ವಂದಿಸಿದರು. ಮೈಸೂರಿನಲ್ಲಿ ವಿಶ್ವಮಟ್ಟದ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.