ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಬಿ. ಆರ್.ನಾಗರತ್ನಾ ಅವರ ‘ತೆರೆಮರೆಯ ಸಾಧಕರು’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಡಾ.ಯು.ಜಿ.ಶೆಣೈ, ಡಾ.ಎಸ್.ಪಿ.ಯೋಗಣ್ಣ, ಎಲ್.ಶಿವಲಿಂಗಪ್ಪ, ಜಮುನಾರಾಣಿ, ಶ್ರೀಕಂಠಮೂರ್ತಿ ಇನ್ನಿತರರಿದ್ದರು. 
ಮೈಸೂರು

ವಿನಯಶೀಲತೆ ಇಲ್ಲದ ವಿದ್ಯೆಗೆ ಬೆಲೆ ಇಲ್ಲ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ತಜ್ಞ ವೈದ್ಯ ಡಾ.ಯು.ಜಿ.ಶೆಣೈ ಅಭಿಪ್ರಾಯ
  • ಸಾಧಕರೊಂದಿಗೆ ಸಂವಾದ
ಮೈಸೂರು: ಕಲಿಕೆ, ಕೌಶಲವೃದ್ಧಿ ಮತ್ತು ವೈಯಕ್ತಿಕ ಬೆಳವಣಿಗೆಗೆ ಆಸಕ್ತಿಯೇ ಪ್ರಮುಖವಾದ ಶಕ್ತಿಯಾಗಿದೆ. ಜೀವನದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ಸಹ ವಿಸ್ತಾರವಾಗುತ್ತದೆ ಎಂದು ಮಕ್ಕಳ ತಜ್ಞ ವೈದ್ಯ ಡಾ.ಯು.ಜಿ.ಶೆಣೈ ಹೇಳಿದರು.
ನಗರದ ರಾಮಾನುಜ ರಸ್ತೆಯಲ್ಲಿರುವ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯೆ, ಜ್ಞಾನವಿದ್ದರೂ ಅದಕ್ಕೆ ತಕ್ಕಂತೆ ವಿನಯಶೀಲತೆ, ನಮ್ರತೆ ಇಲ್ಲದಿದ್ದರೆ ಆ ವಿದ್ಯೆಗೆ ಬೆಲೆ ಇರಲ್ಲ. ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸುವುದು ಮುಖ್ಯ. ಸೌಂದರ್ಯ, ಹಣ, ಅಂತಸ್ತಿಗಿಂತ ಮಾನವೀಯ ಗುಣ, ಮನುಷ್ಯತ್ವವೇ ಮುಖ್ಯ. ಯಾವುದೇ ಒಬ್ಬ ವ್ಯಕ್ತಿಯನ್ನು ಗೌರವಿಸುವುದು ಅವನ ಆಸ್ತಿಯನ್ನು ನೋಡಿಯಲ್ಲ. ಬದಲಿಗೆ ಅವನಲ್ಲಿರುವ ಸದ್ಗುಣದಿಂದ ಎಂದರು.
ಸಂಕಷ್ಟದ ಸಂದರ್ಭವು ಪ್ರತಿಯೊಬ್ಬರ ಜೀವನದ ಒಂದು ಅನಿವಾರ್ಯ ಭಾಗ. ಅದನ್ನು ಸವಾಲು ಸ್ವೀಕರಿಸಿ ಸಾಗಿದರೆ ಅಸಾಧ್ಯವಾದುದು ಯಾವುದು ಇರಲ್ಲ. ಒಂದೇ ದಿನದಲ್ಲಿ ಯಶಸ್ಸು ಸಿಗಲ್ಲ. ಪ್ರಯತ್ನ ಮುಖ್ಯ. ಸ್ಪಷ್ಟವಾದ ಗುರಿ ಇಟ್ಟುಕೊಂಡು ಮುನ್ನಡೆದರೆ ಮಾತ್ರ ಯಶಸ್ಸು, ಸಾಧನೆ ಸಾಧ್ಯ ಎಂದು ಹೇಳಿದರು.
ವೈದ್ಯರು ಕರ್ತವ್ಯದ ಸಮಯದಲ್ಲಿ ಎಂದಿಗೂ ಧೃತಿಗೆಡಬಾರದು. ಸಂಯಮ, ತಾಳ್ಮೆಯಿಂದ ಇರುವುದು ಅವಶ್ಯ ಎಂದು ಹೇಳಿದರು.
ವೈದ್ಯರು, ವೈದ್ಯಕೀಯ ಕ್ಷೇತ್ರದಲ್ಲಿ ಇರುವವರು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಕಠಿಣ ಸವಾಲು ಎದುರಾದರೂ ಮಾನಸಿಕವಾಗಿ ದೃಢವಾಗಿರಬೇಕು. ಚಿಕಿತ್ಸೆಗೆ ಬಂದಿರುವ ವ್ಯಕ್ತಿಯೂ ವೈದ್ಯರನ್ನು ನಂಬಿಕೊಂಡು ಬಂದಿರುತ್ತಾರೆ. ಕೊನೆಯವರೆಗೂ ಪ್ರಯತ್ನ ಮಾಡಲೇಬೇಕು. ಒಂದೊಂದು ಸಲ ನಮಗೆ ಅರಿವಿಗೆ ಬಾರದಂತೆ ಆಶ್ಚರ್ಯಕರ ಘಟನೆ ಸಂಭವಿಸಿ ರೋಗಿಗಳು ಚೇತರಿಕೆ ಕಂಡದ್ದು ಇದೆ ಎಂದು ತಿಳಿಸಿದರು.
ವೈದ್ಯರು ದಿನದ 24 ಗಂಟೆಯೂ ಕರ್ತವ್ಯದಲ್ಲೇ ಇರುತ್ತಾರೆ. ಕುಟುಂಬದೊಂದಿಗೆ ಕಾಲ ಕಳೆಯುವುದಕ್ಕೆ ಅವರಿಗೆ ಹೆಚ್ಚಿನ ಸಮಯ ದೊರೆಯಲ್ಲ. ಮನರಂಜನೆಗೂ ಸಮಯ ಸಿಗಲ್ಲ. ನಮ್ಮಿಂದ ಚಿಕಿತ್ಸೆ ಪಡೆದವರು ನಮ್ಮನ್ನು ನೆನಸಿಕೊಂಡಾಗ ವೈದ್ಯರಿಗೆ ಸಾರ್ಥಕ ಭಾವನೆ ಮೂಡುತ್ತದೆ. ವೃತ್ತಿಯ ಬಗ್ಗೆಯೂ ಹೆಮ್ಮೆಯಾಗುತ್ತದೆ ಎಂದರು.
ಲೇಖಕಿ ಬಿ.ಆರ್.ನಾಗರತ್ನಾ ರಚಿತ ‘ತೆರೆಮರೆಯ ಸಾಧಕರು’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಮೈಸೂರು ಆರ್ಟ್ ಗ್ಯಾಲರಿ ಸ್ಥಾಪಕ ಅಧ್ಯಕ್ಷ ಎಲ್.ಶಿವಲಿಂಗಪ್ಪ, ಕಾರ್ಯದರ್ಶಿ ಜಮುನಾರಾಣಿ, ಪ್ರಧಾನ ಸಂಚಾಲಕ ಶ್ರೀಕಂಠಮೂರ್ತಿ, ಎನ್.ಎಚ್.ಜಯರಾಮ್, ಆರ್.ರಮೇಶ್ ಕಿಣಿ, ಕರ್ನಲ್ ವಿ.ರಮೇಶ್, ಎಚ್.ಆರ್.ರಮೇಶ್ ಪಾಲ್ಗೊಂಡಿದ್ದರು.