ನಗರದ ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಸ್ವಾಮಿ ಮಹಿಪಾಲಾನಂದ ಸ್ವಾಮೀಜಿ ಉದ್ಘಾಟಿಸಿದರು. ಆರ್.ದಿನೇಶ್, ಡಾ.ಹನುಮಂತಚಾರ್ ಜೋಶಿ ಇದ್ದರು.
- ಸ್ವಾಮಿ ಮಹಿಪಾಲಾನಂದ ಸ್ವಾಮೀಜಿ ಅಭಿಮತ
- ಶಾರದಾ ವಿಲಾಸ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ
ಸ್ವಾಮಿ ವಿವೇಕಾನಂದರು ಹೇಳಿರುವಂತೆ ಮಾರ್ಗದರ್ಶನವಿಲ್ಲದ ಶಿಕ್ಷಣ ಅಪಾಯಕಾರಿ. ಮಕ್ಕಳನ್ನು ಕಾಲೇಜಿಗೆ ದಾಖಲಿಸಿದರೆ ಸಾಲದು ಅವರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಸ್ವಾಮಿ ಮಹಿಪಾಲಾನಂದ ಅವರು ತಿಳಿಸಿದರು.
ನಗರದ ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿಯ ಪ್ರೊ.ಚಿನ್ನಸ್ವಾಮಿ ಶೆಟ್ಟಿ ಸಭಾಂಗಣದಲ್ಲಿ ನೂತನ ವಿಧ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದರು.
ಹೆತ್ತವರು ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅವರನ್ನು ಉತ್ತಮ ಪ್ರಜೆಯಾಗಿ, ಸಂಸ್ಕಾರಯುತ ವ್ಯಕ್ತಿಯಾಗಿ ರೂಪಿಸುವುದು ಜವಾಬ್ದಾರಿಯಲ್ಲ, ಕರ್ತವ್ಯ ಎಂದು ತಿಳಿಸಿದರು.
ಮಕ್ಕಳಿಗೆ ಕಾಲೇಜು ಶಿಕ್ಷಣದೊಂದಿಗೆ, ಅಧ್ಯಾತ್ಮಿಕ, ಮೌಲ್ಯಯುತ ಶಿಕ್ಷಣ ನೀಡಬೇಕು. ವೈರಾಗ್ಯ ಎಂದರೆ ಎಲ್ಲವನ್ನು ತ್ಯಜಿಸುವುದಲ್ಲ, ಒಳಗಿನ ಜ್ಞಾನವನ್ನು ಹುಡುಕುವ ವಿವೇಕ. ಹಾಗಾಗಿ ನಾವೆಲ್ಲರೂ ವಿದ್ಯಾವಂತರಾಗುವ ಜತೆಗೆ ವಿವೇಕವಂತರಾಗಬೇಕು. ಹೊರಗಿನ ಯಾವುದೇ ವಿಷಯ ವಸ್ತು ನಮ್ಮನ್ನು ಪ್ರಚೋದಿಸಿದರೂ ಸ್ಥಿತಪ್ರಜ್ಞೆ ಇರುವ ವ್ಯಕ್ತಿಗಳಾಗೋಣ ಎಂದರು.
ವಿದ್ಯಾರ್ಥಿಗಳ ಆಲೋಚನೆಗಳು ಶುದ್ಧವಾಗಿರಬೇಕು. ನಿಮ್ಮ ಆಲೋಚನೆಗಳ ಪ್ರತಿರೂಪವೇ ನಿಮ್ಮ ವ್ಯಕ್ತಿತ್ವ. ಸೇವೆ ಮಾಡುವಾಗ ಯಾವದೇ ನಿರೀಕ್ಷೆ ಇಟ್ಟುಕೊಳ್ಳಬಾರದು, ನಿಮ್ಮ ಬಳಿ ಬರುವ ರೋಗಿಗಳಿಗೆ ನೀವು ಸೂಚಿಸುವ ಔಷಧಿಗಿಂತ ನಿಮ್ಮ ಸಾಂತ್ವನದ ಮಾತುಗಳು ಅವರನ್ನು ಗುಣಪಡಿಸುತ್ತವೆ. ನೀವೆಲ್ಲರೂ ಭಾವನಾತ್ಮಕವಾಗಿ ಅವರ ಮೇಲೆ ಪ್ರಭಾವ ಬೀರುತ್ತೀರಿ ಎಂದು ಭಗವದ್ಗೀತೆಯ ಶ್ಲೋಕದ ಮೂಲಕ ತಿಳಿಸಿದರು.
ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷ ಮಾರ್ಗ ಅನುಸರಿಸಿ ಸನಾತನ ಧರ್ಮದ ಮೌಲ್ಯ ವಿಚಾರಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳಿ ಎಂದರು.
ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಆರ್.ದಿನೇಶ್ ಮಾತನಾಡಿ, 160 ವರ್ಷ ಸುದೀರ್ಘ ಶಿಕ್ಷಣ ಸೇವೆಯಲ್ಲಿರುವ ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಸಾಧನೆಯನ್ನು ಹಂಚಿಕೊಂಡರು.
ಪ್ರಾಂಶುಪಾಲ ಡಾ.ಹನುಮಂತಚಾರ್ ಜೋಶಿ ಇದ್ದರು.