ರಾಣಿಬಹದ್ದೂರು ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಜಿ.ಕುಮಾರ್ ನಾಯಕ್, ಜಿ.ಟಿ.ದೇವೇಗೌಡ, ಡಾ.ಹೊಸಕೋಟೆ ಮಂಜುನಾಥ್, ಎಂ.ಅಪ್ಪಣ್ಣ, ಎಂ.ರಾಮಚಂದ್ರ, ಶಿವಕುಮಾರ್ ಇತರರಿದ್ದರು.
- ಪ್ರತಿಭಾ ಪುರಸ್ಕಾರ, ಗೌರವ ಸಮರ್ಪಣೆ
- ಶಿಕ್ಷಣದಿಂದಲೇ ಸಮಾಜ ಸುಧಾರಣೆ ಸಾಧ್ಯ.
- ನಾಯಕ ಸಮುದಾಯ ಸೇರಿದಂತೆ ಎಲ್ಲರೂ ಶಿಕ್ಷಣ ಪಡೆದುಕೊಳ್ಳುವುದು ಮೊದಲ ಆದ್ಯತೆಯಾಗಲಿ
ಮೈಸೂರು: ಶಿಕ್ಷಣದಿಂದಲೇ ಸಮಾಜ ಸುಧಾರಣೆ ಸಾಧ್ಯ. ಹೀಗಾಗಿ, ನಾಯಕ ಸಮುದಾಯ ಸೇರಿದಂತೆ ಎಲ್ಲರೂ ಶಿಕ್ಷಣ ಪಡೆದುಕೊಳ್ಳುವುದು ಮೊದಲ ಆದ್ಯತೆಯಾಗಬೇಕು ಎಂದು ರಾಯಚೂರು ಸಂಸದ ಜಿ.ಕುಮಾರ್ ನಾಯಕ್ ಹೇಳಿದರು.
ಮೈಸೂರು ತಾಲೂಕು ನಾಯಕರ ಸಂಘದಿಂದ ಮಾನಸಗಂಗೋತ್ರಿಯ ರಾಣಿಬಹಾದ್ದೂರು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ನಾಯಕ ಸಮುದಾಯದಲ್ಲಿ ಶಿಕ್ಷಣವಂತರ ಸಂಖ್ಯೆ ಕಡಿಮೆ ಇತ್ತು. ಇದೀಗ ಹಿಂದಿಗಿಂತ ಪರಿಸ್ಥಿತಿ ಸುಧಾರಿಸಿದೆ. ಈ ವಿಷಯದಲ್ಲಿ ನೂರರಷ್ಟು ಪ್ರಗತಿಯಾಗಬೇಕಿದೆ. ಪ್ರತಿಯೊಬ್ಬರೂ ಅಕ್ಷರವಂತರಾಗಿ ಉನ್ನತ ಸ್ಥಾನಕ್ಕೇರಬೇಕು ಎಂದು ಹೇಳಿದರು.
ಗುರುವಿಲ್ಲದೆ ಏಕಲವ್ಯ ಸಾಧನೆ ಮಾಡಿದರು. ಅದೇ ರೀತಿ ವಿದ್ಯಾರ್ಥಿಗಳು ಸಹ ದೃಢಸಂಕಲ್ಪ ಮಾಡಿ ಗುರಿಯತ್ತ ಪರಿಶ್ರಮ ಹಾಕಬೇಕು. ಇದಕ್ಕೆ ಶಿಕ್ಷಣವೇ ರಹದಾರಿಯಾಗಿದೆ ಎಂದರು.
ಶಿಕ್ಷಣ ಬಹಳ ಮುಖ್ಯ. ಅದನ್ನು ಬಳಕೆ ಮಾಡಿಕೊಂಡು ಅಳವಡಿಸಿಕೊಳ್ಳಬೇಕು. ಆಗಲೇ ವ್ಯಕ್ತಿತ್ವ ವಿಕಸನವಾಗುತ್ತದೆ. ಉನ್ನತ ಗುರಿಯತ್ತ ಅದೇ ಕರೆದುಕೊಂಡು ಹೋಗುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ದಿನಕ್ಕೆ ಇಂತಿಷ್ಟು ಗಂಟೆ ಅಭ್ಯಾಸ ಮಾಡಬೇಕು. ನಿರಂತರ ಪರಿಶ್ರಮ ಹಾಕಿ ತಮ್ಮ ಜ್ಞಾನಭಂಡಾರವನ್ನು ವಿಸ್ತರಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಬಳಿಕ ತಮ್ಮ ಅಭಿರುಚಿ, ಆಸಕ್ತಿಗೆ ತಕ್ಕ ಕೋರ್ಸ್ ಆಯ್ದುಕೊಳ್ಳಿ. ಈ ಕುರಿತು ಪಾಲಕರ ಸಲಹೆ ಪಡೆದುಕೊಳ್ಳಿ. ಆಗಲೇ ಕಲಿಕೆ ಸರಳ, ಸುಲಭವಾಗಲಿದೆ. ಕಷ್ಟಪಟ್ಟು ಓದಬೇಡಿ. ಇಷ್ಟಪಟ್ಟು ಓದಿ. ಉನ್ನತಮಟ್ಟದ ಅಧಿಕಾರ ಪಡೆದುಕೊಳ್ಳುವತ್ತ ಗಮನ ನೀಡಿ. ಇದರಿಂದ ಸಮಾಜ ಮತ್ತು ಸಮುದಾಯಕ್ಕೆ ಸಹಾಯ ಮಾಡಲು ಸಾಧ್ಯವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಿಂದಿಗಿಂತ ಇದೀಗ ಅವಕಾಶಗಳ ಸಾಗರವೇ ತೆರೆದುಕೊಂಡಿದೆ. ಸ್ವಪ್ರಯತ್ನದೊಂದಿಗೆ ಪರಿಶ್ರಮ ಹಾಕಿ ತಮ್ಮನ್ನು ತಾವು ಸನ್ನದ್ಧರಾಗಿಸಿಕೊಳ್ಳಿ. ಆಗ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದರು.
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಮಾಡಿದ ಕರಾಮುವಿ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಹೊಸಕೋಟೆ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮೊಬೈಲ್ ದೊಡ್ಡ ಶತ್ರು. ಅದಕ್ಕೆ ದಾಸರಾಗಿ ಕಲಿಕೆಯಿಂದ ದೂರವಾಗುತ್ತಿದ್ದಾರೆ. ಸಮೀಕ್ಷೆ ಪ್ರಕಾರವೊಂದರ ಯುವ ಸಮೂಹ ದಿನಕ್ಕೆ ಆರು ಗಂಟೆ ಕಾಲ ಮೊಬೈಲ್, ಸಾಮಾಜಿಕ ಜಾಲತಾಣದಲ್ಲೇ ಕಳೆಯುತ್ತಿದ್ದಾರೆ ಎಂಬುದು ಕಳವಳಕಾರಿ ಎಂದರು.
ಇಂಜಿನಿಯರಿಂಗ್, ವೈದ್ಯಕೀಯಗಿಂತ ಮಿಗಿಲಾದ ವೃತ್ತಿಶಿಕ್ಷಣದ ಕೋರ್ಸ್‌ಗಳತ್ತ ವಿದ್ಯಾರ್ಥಿಗಳ ಆಸಕ್ತಿ ಬೆಳೆಸಿಕೊಳ್ಳಬೇಕು. ಉದ್ಯೋಗಾಧಾರಿತ ಇಂತಹ ಕೋರ್ಸ್‌ಗಳ ಕಲಿಕೆಯಿಂದ ವಿವಿಧ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದರು.
ಶಿಕ್ಷಣವೇ ನಿಜವಾದ ಆಸ್ತಿ. ಹೀಗಾಗಿ, ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಶಿಕ್ಷಣ ಕೊಡಿಸುವ ಮೂಲಕ ಅವರನ್ನೇ ಒಂದು ಆಸ್ತಿಯಾಗಿ ಪರಿವರ್ತನೆ ಮಾಡಿ ಎಂದೂ ಪಾಲಕರಿಗೆ ಸಲಹೆ ನೀಡಿದರು.
ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಮಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಜಿ.ಟಿ.ದೇವೇಗೌಡ, ಜಂಗಲ್ ಲಾಡ್ಜ್ ಆ್ಯಂಡ್ ರೆಸಾರ್ಟ್ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ, ಮೈಸೂರು ಮತ್ತು ಚಾಮರಾಜನಗರ ನಾಯಕರ ಸಂಗದ ಅಧ್ಯಕ್ಷ ಎಂ.ರಾಮಚಂದ್ರ, ಮಾಜಿ ಮೇಯರ್ ಶಿವಕುಮಾರ್, ಮುಂಂಡರಾದ ಚಾಮುಂಡಿಬೆಟ್ಟ ಶಂಭಣ್ಣ, ಉದ್ಬೂರು ಕೃಷ್ಣನಾಯಕ್, ಉದ್ಬೂರು ಎನ್.ಮಹದೇವಸ್ವಾಮಿ, ಜಯಪುರ ಜವರನಾಯಕ, ರಮ್ಮನಹಳ್ಳಿ ವೆಂಕಟಯ್ಯ ಇನ್ನಿತರರಿದ್ದರು