ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ ಭವನದಲ್ಲಿ ಗಣರಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರೊ.ಎನ್.ಕೆ.ಲೋಕನಾಥ್, ಎಂ.ಕೆ.ಸವಿತಾ ಇನ್ನಿತರರಿದ್ದರು 
ಮೈಸೂರು

ಸುಸ್ಥಿರ ರಾಷ್ಟ್ರೀಯ ಅಭಿವೃದ್ಧಿಯ ಅಡಿಪಾಯ ಶಿಕ್ಷಣ

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಭಿಮತ
  • ಸಾಂವಿಧಾನಿಕ ನೈತಿಕತೆಯ ಕುರಿತಾದ ಅವರ ಒತ್ತಾಯವು ಇಂದಿಗೂ ಬಹಳ ಪ್ರಸ್ತುತ
ಮೈಸೂರು: ಶಿಕ್ಷಣವು ಸುಸ್ಥಿರ ರಾಷ್ಟ್ರೀಯ ಅಭಿವೃದ್ಧಿಯ ಅಡಿಪಾಯವಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಯುವ ಜನತೆಯಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ಕೌಶಲಾಭಿವೃದ್ಧಿ ಬೆಳೆಸಬೇಕು ಎಂದು ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯವು ರಾಷ್ಟ್ರ ನಿರ್ಮಾಣದಲ್ಲಿ ಹಿಂದಿನಿಂದಲೂ ಬಹುದೊಡ್ಡ ಪರಂಪರೆ ಹೊಂದಿದೆ. ಶಿಕ್ಷಣ ಮತ್ತು ಸಾಂವಿಧಾನಿಕ ಬದ್ಧತೆಯ ಮೂಲಕ ನಾವೆಲ್ಲ ಒಟ್ಟಾಗಿ ದೇಶವನ್ನು ಕಟ್ಟೋಣ ಎಂದರು.
1950ರ ಜನವರಿ 26ರಂದು ಭಾರತೀಯ ಸಂವಿಧಾನದ ಐತಿಹಾಸಿಕ ಅಂಗೀಕಾರವನ್ನು ಸೂಚಿಸುತ್ತದೆ. ಗಣರಾಜ್ಯೋತ್ಸವವು ನ್ಯಾಯ, ಸ್ವಾತಂತ್ರೃ, ಸಮಾನತೆ, ಭ್ರಾತೃತ್ವದ ಮೂಲ ಮೌಲ್ಯದ ದ್ಯೋತಕ. ನಾಗರಿಕರಿಗೆ ಅವರ ಹಕ್ಕುಗಳ ಜತೆಗೆ ಅವರ ಕರ್ತವ್ಯವನ್ನೂ ನೆನಪಿಸುತ್ತದೆ. ಭಾರತೀಯ ಸಂವಿಧಾನವು ಈ ದೇಶದ ವಿಶಾಲ ವೈವಿಧ್ಯತೆಗೆ, ಏಕೀಕೃತ ಚೌಕಟ್ಟು ಒದಗಿಸುತ್ತದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಘನತೆ, ಸಮಾನ ಅವಕಾಶವನ್ನು ಖಾತ್ರಿಪಡಿಸುತ್ತದೆ ಎಂದರು.
ಗಣರಾಜ್ಯೋತ್ಸವವು ವಸಾಹತುಶಾಹಿ ಅಧೀನತೆಯ ಮೇಲೆ ಪ್ರಜಾಪ್ರಭುತ್ವದ ಆದರ್ಶಗಳ ವಿಜಯವನ್ನು ಸಂಕೇತಿಸುತ್ತದೆ. ಭಾರತವು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಪ್ರಭುತ್ವ ಗಣರಾಜ್ಯವೆಂಬ ಅಸ್ಮಿತೆ ದೃಢಪಡಿಸುತ್ತದೆ ಎಂದರು.
 ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ಮಹೋನ್ನತ ಸಂವಿಧಾನದ ಮುಖ್ಯ ಶಿಲ್ಪಿ. ಅವರು ಸಾಮಾಜಿಕ ನ್ಯಾಯ, ದಮನಿತರ ಸಬಲೀಕರಣವನ್ನು ಬಲವಾಗಿ ಪ್ರತಿಪಾದಿಸಿದರು. 
ಅವರು ಶಿಕ್ಷಣವನ್ನು ವಿಮೋಚನೆ ಮತ್ತು ಪ್ರಗತಿಗೆ ಪ್ರಬಲ ಸಾಧನವೆಂದು ಪರಿಗಣಿಸಿದ್ದರು. ಪ್ರಜಾಪ್ರಭುತ್ವವು ಸಾಮಾಜಿಕ, ಆರ್ಥಿಕ ಸಮಾನತೆಯಲ್ಲಿ ಬೇರೂರಿರಬೇಕೆಂದು ಅವರು ದೃಢವಾಗಿ ನಂಬಿದ್ದರು. ಸಾಂವಿಧಾನಿಕ ನೈತಿಕತೆಯ ಕುರಿತಾದ ಅವರ ಒತ್ತಾಯವು ಇಂದಿಗೂ ಬಹಳ ಪ್ರಸ್ತುತವಾಗಿದೆ ಎಂದು ಹೇಳಿದರು.
ಸಮಾನತೆಯ ಭಾರತಕ್ಕಾಗಿ ಅವರ ಜೀವಮಾನದ ಹೋರಾಟವನ್ನು ಗಣರಾಜ್ಯೋತ್ಸವವು ಗೌರವಿಸುತ್ತದೆ. ಬಾಬಾ ಸಾಹೇಬರ ಆಲೋಚನೆಗಳು, ನೀತಿ-ನಿರೂಪಣೆ, ರಾಷ್ಟ್ರ ನಿರ್ಮಾಣಕ್ಕೆ ಸದಾ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ. ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆಯಲ್ಲಿ ಭಾರತವು ತ್ವರಿತ ಪ್ರಗತಿ ಸಾಧಿಸುತ್ತಿದೆ ಎಂದರು.
ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜ, ವಿದ್ಯಾರ್ಥಿಕ್ಷೇಮಪಾಲನಾ ನಿರ್ದೇಶಕ ಪ್ರೊ. ಗುರುಸಿದ್ದಯ್ಯ ಇನ್ನಿತರರಿದ್ದರು.