ತಿ.ನರಸೀಪುರ ತಾಲೂಕಿನ ತಾಲೂಕಿನ ತಲಕಾಡು ಗ್ರಾಮದ ಹೊರ ವಲಯದಲ್ಲಿರುವ ಎನ್.ಆರ್.ಪಟೇಲ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಎನ್.ಆರ್.ಪಟೇಲ್ ಕಲಾ ವೈಭವದ ಪ್ರತಿಭೆ ಸಂಸ್ಕೃತಿ ಮತ್ತು ಶ್ರೇಷ್ಠತೆಯ ಸಮಾರಂಭವನ್ನು ನಿವೃತ್ತ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಉದ್ಘಾಟಿಸಿದರು. ಎನ್.ಸ್ವಾಮಿನಾಥ್, ಎಸ್. ರಾಮ್ ಪ್ರಸಾದ್, ಟಿ.ಆರ್.ಕೃಷ್ಣೇಗೌಡ, ಟಿ.ಎನ್. ಲೋಕೇಶ್, ಟಿ.ಎನ್. ಅಶೋಕ್ ಪಟೇಲ್ ಇತರರು ಇದ್ದರು. 
ಮೈಸೂರು

ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಣ ಅಗತ್ಯ

ನಾಗೇಶ ಎಸ್
ತಿ.ನರಸೀಪುರ: ಭವಿಷ್ಯದ ಪ್ರಜೆಗಳಾಗಿ ಬೆಳೆಯುವ ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸುವ ಶಿಕ್ಷಣವನ್ನು ನೀಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕರ್ನಾಟಕ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಜಿ.ಶಿವಶಂಕರೇಗೌಡ ಸಲಹೆ ನೀಡಿದರು.
ತಾಲೂಕಿನ ತಲಕಾಡು ಗ್ರಾಮದ ಹೊರ ವಲಯದಲ್ಲಿರುವ ಎನ್.ಆರ್.ಪಟೇಲ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಎನ್.ಆರ್.ಪಟೇಲ್ ಕಲಾ ವೈಭವದ ಪ್ರತಿಭೆ ಸಂಸ್ಕೃತಿ ಮತ್ತು ಶ್ರೇಷ್ಠತೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬದುಕನ್ನು ರೂಪಿಸಿಕೊಳ್ಳಲು ಕಲಿಯುವ ಶಿಕ್ಷಣ ಭವಿಷ್ಯದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು ಎಂದರು.
ಗಂಗರಸರ ರಾಜಧಾನಿ, ಚರಿತ್ರೆಯ ನಾಡು ತಲಕಾಡು ನಾಡಿನ ಹಿರಿಮೆಯನ್ನು ಹೆಚ್ಚಿಸಲು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೊಡುಗೆಯನ್ನು ನೀಡಿದೆ. ಶಿಕ್ಷಣ ಸೇವೆಯನ್ನು ನೀಡಿದ ಮಹನೀಯರು ನಮ್ಮವರೇ ಆಗಿದ್ದಾರೆ. ಇಂತಹ ಐತಿಹಾಸಿಕ ಊರಿನಲ್ಲಿ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಎನ್.ಆರ್.ಪಟೇಲ್ ಶಿಕ್ಷಣ ಸಂಸ್ಥೆ ಶ್ರಮಿಸುತ್ತಿದೆ. ನಗರ ಪ್ರದೇಶದ ಮಕ್ಕಳಿಗೆ ಸಿಗುವ ಶಿಕ್ಷಣ ಸ್ಥಳೀಯವಾಗಿಯೂ ಸಿಗಬೇಕು. ಹಿನ್ನೆಲೆಯಲ್ಲಿ ಹಳ್ಳಿಗಾಡಿನ ಬಡವರು ಮತ್ತು ಮಧ್ಯಮ ವರ್ಗದ ಜನರ ಮಕ್ಕಳು ಶಿಕ್ಷಣದ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಟಿ.ಜಿ.ಶಿವಶಂಕರೇಗೌಡ ತಿಳಿಸಿದರು.
ಮೈಸೂರಿನ ನಿವೃತ್ತ ಪ್ರಾಂಶುಪಾಲ ಎನ್.ಸ್ವಾಮಿನಾಥ್ ಮಾತನಾಡಿ, ತಲಕಾಡು ಬಳಿ ಪ್ರಶಾಂತವಾದ ಸ್ಥಳದಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆದಿರುವುದರಿಂದ ಪ್ರಕೃತಿಯ ಮಡಿಲಿನಲ್ಲಿ ಪಾಠ ಕಲಿಯುವುದು ಈ ಭಾಗದ ಮಕ್ಕಳ ಸೌಭಾಗ್ಯವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಗುಣಾತ್ಮಕ ಅಂಶಗಳಿರುವ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಹೆಚ್ಚಿನ ಅಧ್ಯಯನದ ಮೂಲಕ ಜ್ಞಾನದ ಸಾಮರ್ಥ್ಯವನ್ನು ವೃದ್ಧಿಸಿಕೊಂಡು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಪಟೇಲ್ ಫೌಂಡೇಷನ್ ಗೌರವಾಧ್ಯಕ್ಷ ಟಿ.ಆರ್.ಕೃಷ್ಣೇಗೌಡ ಮಾತನಾಡಿ, ಹಳ್ಳಿಗಾಡಿನ ಮಕ್ಕಳಿಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತಿನ ಜತೆಗೆ ಸಿಗುವಂತಹ ಉತ್ತಮ ಶಿಕ್ಷಣ ಕಲ್ಪಿಸಬೇಕೆಂಬ ಉದ್ದೇಶದಿಂದಲೇ ಪಟೇಲ್ ಫೌಂಡೇಷನ್ ಸೇವಾ ಸಂಸ್ಥೆ ಆರಂಭಿಸಿದ ಅಶೋಕ್ ಪಟೇಲ್ ಅವರು, ಶಿಕ್ಷಕರ ತಂಡವನ್ನು ಕಟ್ಟಿಕೊಂಡು ಸಂಸ್ಥೆಯನ್ನು ಆರಂಭಿಸಿದ್ದಾರೆ. ಹಲವು ವರ್ಷಗಳಿಂದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮಾತೃಶ್ರೀ ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಾಲಕರಿಗೆ ಆಯೋಜಿಸಿದ್ದ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪಟೇಲ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಟಿ.ಎನ್.ಅಶೋಕ್ ಪಟೇಲ್, ಮೈಸೂರು ತಾಲೂಕು ಉಪ ತಹಸೀಲ್ದಾರ್ ಟಿ.ಎನ್.ಲೋಕೇಶ್, ನಿವೃತ್ತ ಮುಖ್ಯ ಶಿಕ್ಷಕ ಎಸ್.ರಾಮ್ ಪ್ರಸಾದ್, ಮುಖ್ಯ ಶಿಕ್ಷಕರಾದ ಯೋಗೇಂದ್ರ, ಎಸ್.ಮಹೇಶ್ವರಿ ಇತರರು ಇದ್ದರು.