ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕೆ. ಹರೀಶ್ ಗೌಡ, ಡಾ.ಡಿ.ತಿಮ್ಮಯ್ಯ, ಡಾ.ಮಾನಸ, ಅರುಣ್, ರಫಿ, ಮಂಜುನಾಥ್, ಚನ್ನಕೇಶವ, ಬಿ.ಜಿ.ಕೇಶವ, ರವಿನಂದನ್, ಮಂಜು ಶೆಟ್ಟಿ, ಸಿದ್ದಾಪಾಜಿ ಇತರರಿದ್ದರು.
ಮೈಸೂರು: ಆರ್ಥಿಕವಾಗಿ ಸದೃಢರಾಗಿ ಗೌರವದಿಂದ ಜೀವನ ನಡೆಸಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ತಮ್ಮ ಹೆಣ್ಣು ಮಕ್ಕಳಿಗೆ ಎಲ್ಲ ಪಾಲಕರು ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.
ಜಿಲ್ಲಾಡಳಿತ , ಕನ್ನಡ ಮತ್ತು ಸಂಸ್ಕೃತ ಇಲಾಖೆ, ನಗರ ಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಚನಗಳು ಜೀವನದಲ್ಲಿ ನೈತಿಕ ಮೌಲ್ಯದ ಶಿಕ್ಷಣ ನೀಡುವ ಜತೆಗೆ ಹೆಣ್ಣು ಮಕ್ಕಳು, ಹಿರಿಯರನ್ನು ಗೌರವಿಸಬೇಕು ಎಂಬ ಪಾಠವನ್ನು ಕಲಿಸುತ್ತವೆ. ಜೀವನವನ್ನು ಕಟ್ಟಿಕೊಡುತ್ತವೆ ಎಂದರು.
ಪ್ರತಿದಿನ ಮಾಚಿದೇವ ಸೇರಿದಂತೆ ಎಲ್ಲ ಶ್ರೇಷ್ಠ ವಚನಕಾರರನ್ನು ಸ್ಮರಿಸಬೇಕು. ಅವರ ವಚನಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳ ಮೂಲಕ ಸಮಾಜದ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಡಿವಾಳ ಸಮುದಾಯದವರು ಸಲ್ಲಿಸಿರುವ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜತೆಗೆ ಶೇಷಾದ್ರಿಪುರಂ ಸರ್ಕಲ್‌ಗೆ ಮಡಿವಾಳ ಮಾಚಿದೇವರ ಹೆಸರು ಇಡಲು ಚರ್ಚೆ ನಡೆಸುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಅವರ ಅನುಭವ ಮಂಟಪದಲ್ಲಿ ಯಾವುದೇ ಜಾತಿ, ಮೇಲು ಕೀಳು ಎಂಬ ಭೇದ ಭಾವವಿಲ್ಲದೆ ಎಲ್ಲ ವರ್ಗದ ವಚನಕಾರರು ಒಗ್ಗೂಡಿದ್ದರು. ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಪ್ರಯತ್ನಿಸುತ್ತಿದ್ದರು ಹಾಗೂ ಚರ್ಚೆಗಳನ್ನು ನಡೆಸುತ್ತಿದ್ದರು ಎಂದರು.
ಅನುಭವ ಮಂಟಪದಲ್ಲಿ ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಹರಳಯ್ಯ,ದೋಹಾರ ಕಕ್ಕಯ್ಯ ಸೇರಿದಂತೆ ಎಲ್ಲ ವಚನಕಾರರು ದುಡಿಮೆಯ ದೇವರು, ಕಾಯಕದ ಮೂಲಕ ಕೈಲಾಸ ನೋಡಿ ಹಾಗೂ ಪ್ರತಿಯೊಂದು ಕಾಯಕವನ್ನು ಗೌರವಿಸಿ ಸಮ ಸಮಾಜ ನಿರ್ಮಾಣ ಮಾಡಿ ಎಂಬ ಸಂದೇಶವನ್ನು ವಚನಗಳ ಮೂಲಕ ತಿಳಿಸಿದರು ಎಂದರು.
ಕೊಳೆ ಬಟ್ಟೆ ತೊಳೆದು ಶುದ್ಧ ಮೂಡುವಂತೆ ಮನಸ್ಸಿನಲ್ಲಿ ಮೇಲು ಕೀಳು ಎಂಬ ಕಲ್ಮಶವಿದ್ದರೆ ಜನಸಮಾನ್ಯರು ಮೊದಲು ಅದನ್ನು ತೊಳೆದು ಶುದ್ಧ ಮಾಡಿಕೊಳ್ಳವೇಕು. ಜನರು ತನು ಮನವನ್ನು ಶುದ್ಧ ಮಾಡಿಕೊಳ್ಳಬೇಕು ಎಲ್ಲರು ವಿದ್ಯಾವಂತರಾಗ ಬೇಕು ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾತನಾಡಿದರು. ಪ್ರಮುಖರಾದ ಅರುಣ್, ರಫಿ, ಮಂಜುನಾಥ್, ಚನ್ನಕೇಶವ, ಬಿ.ಜಿ.ಕೇಶವ, ರವಿನಂದನ್, ಮಂಜು ಶೆಟ್ಟಿ, ಸಿದ್ದಾಪಾಜಿ ಇತರರಿದ್ದರು.