ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ)ನಿಂದ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿರುವ ‘ಮೈರಿಯಾಲ್ಟಿ- 2026’ ರಿಯಲ್ ಎಸ್ಟೇಟ್ ಎಕ್ಸ್‌ಪೋ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಕೆ.ಶ್ರೀರಾಮ್, ಅಶ್ವಿನ್ ಆರ್. ಪಾಳೇಗಾರ್, ಕೆ.ಎಸ್.ಪ್ರಕಾಶ್, ನಾಗರಾಜ್ ವಿ. ಬೈರಿ ಇತರರು ಇದ್ದರು.
- ಭಾರತದ ಆರ್ಥಿಕ ಬೆಳವಣಿಗೆಯು ವೇಗವಾಗಿ ಸಾಗುತ್ತಿದ್ದರೂ, ಆರ್ಥಿಕ ಅಸ್ಥಿರತೆ ಸವಾಲು ಎದುರಾಗಿದೆ
- ರಿಯಲ್ ಎಸ್ಟೇಟ್ ಮತ್ತು ಕೈಗಾರಿಕಾ ವಲಯದವರು ಆತಂಕಕ್ಕೆ ಒಳಗಾಗದೆ ತಾಳ್ಮೆಯಿಂದ ನಡೆದುಕೊಳ್ಳಬೇಕು
ಮೈಸೂರು:ದೇಶದ ಆರ್ಥಿಕ ಪರಿಸ್ಥಿತಿ ಗಂಭೀರವಾಗಿರುವ ಸಂದರ್ಭದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳು ಮುಂದಿನ ಆರು ತಿಂಗಳ ಕಾಲ ಶಾಂತವಾಗಿರಬೇಕು ಎಂದು ಬಿಲ್ಡರ್ಸ್ ಅಸೋಸಿಯೇಷನ್‌ನ ಸಾಮಾನ್ಯ ಮಂಡಳಿ ಮತ್ತು ವ್ಯವಸ್ಥಾಪಕ ಸಮಿತಿಯ ಸದಸ್ಯ ಕೆ.ಶ್ರೀರಾಮ್ ಸಲಹೆ ನೀಡಿದರು.
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ), ಕ್ರೆಡಾಯ್, ಮೈಸೂರು ಬಿಲ್ಡರ್ಸ್ ಚಾರಿಟಬಲ್ ಫೌಂಡೇಷನ್‌ನಿಂದ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿರುವ ‘ಮೈರಿಯಾಲ್ಟಿ- 2026’ ರಿಯಲ್ ಎಸ್ಟೇಟ್ ಎಕ್ಸ್‌ಪೋ ಪ್ರದರ್ಶನಕ್ಕೆಚಾಲನೆ ನೀಡಿ ಮಾತನಾಡಿದರು.
ಭಾರತದ ಆರ್ಥಿಕ ಬೆಳವಣಿಗೆಯು ವೇಗವಾಗಿ ಸಾಗುತ್ತಿದ್ದರೂ, ಆರ್ಥಿಕ ಅಸ್ಥಿರತೆ ಸವಾಲು ಎದುರಾಗಿದೆ. ಆದ್ದರಿಂದ ರಿಯಲ್ ಎಸ್ಟೇಟ್ ಉದ್ಯಮ, ನಿರ್ಮಾಣ ಕ್ಷೇತ್ರ ಕೊಂಚ ಹಿನ್ನಡೆ ಉಂಟಾಗಿದೆ ಎಂದರು.
ಇದರ ನಡುವೆಯೂ ರಿಯಲ್ ಎಸ್ಟೇಟ್ ಮತ್ತು ಕೈಗಾರಿಕಾ ವಲಯದವರು ಆತಂಕಕ್ಕೆ ಒಳಗಾಗದೆ ತಾಳ್ಮೆಯಿಂದ ನಡೆದುಕೊಳ್ಳಬೇಕು. ಆತುರದ ನಿರ್ಧಾರ ಕೈಗೊಳ್ಳದೆ ಚೇತರಿಕೆಯ ಕಡೆ ನೋಡಬೇಕು. ಕ್ರಿಕೆಟ್‌ನಲ್ಲಿ ಕೆಟ್ಟ ಪಿಚ್‌ನಲ್ಲೂ ಉತ್ತಮ ಬ್ಯಾಟ್ಸ್‌ಮನ್‌ಗಳು ಹೇಗೆ ಆಡುತ್ತಾರೋ, ಹಾಗೆಯೇ ನಾವು ಸಹ ಧೈರ್ಯದಿಂದ ಈ ಪರಿಸ್ಥಿತಿ ಎದುರಿಸಬೇಕು ಎಂದು ಅಭಿಪ್ರಾಯಪಟ್ಟರು.
ಭವಿಷ್ಯದಲ್ಲಿ ತಂತ್ರಜ್ಞಾನ ಭದ್ರಬುನಾದಿಯಾಗಲಿದ್ದು, ಭಾರತವು ಪ್ರಗತಿ ಸಾಧಿಸುವಲ್ಲಿ ಮಹತ್ವದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ಮುಂದೆ ಸುವರ್ಣ ಅವಧಿ ಶುರುವಾಗಲಿದ್ದು, ಕಟ್ಟಡ ನಿರ್ಮಾಣ ವಲಯದ ಹೊಸ ವಿಷಯ ತಿಳಿಯಲು ಎಕ್ಸ್‌ಪೋ ಸಹಕಾರಿಯಗಿದೆ ಎಂದು ತಿಳಿಸಿದರು.
ದೇಶದ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವೆಚ್ಚವು ಜಿಡಿಪಿಯ ಶೇ.15ರಿಂದ 8ಕ್ಕೆ ಇಳಿದಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿಕಸಿತ ರಾಷ್ಟ್ರಗಳಲ್ಲಿ ಈ ವೆಚ್ಚ ಶೇ.5 ಶೇಕಡಕ್ಕಿಂತ ಕಡಿಮೆ ಇರುತ್ತದೆ. ಭಾರತವು ಈ ದಿಕ್ಕಿನಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.
ಈ ವರ್ಷ ಮಳೆಯ ಅಸ್ಥಿರತೆ ಎದುರಾಗುವ ಸಾಧ್ಯತೆ ಇದ್ದು, ಕೃಷಿ ಆಧರಿತ ಭಾರತದ ಆರ್ಥಿಕತೆಗೆ ಇದು ದೊಡ್ಡ ಸವಾಲಾಗಬಹುದು. ಅಲ್ಲದೆ ಗಲ್ಫ್ ರಾಷ್ಟ್ರಗಳ ಆರ್ಥಿಕ ಸಮಸ್ಯೆಗಳ ಪರಿಣಾಮವಾಗಿ ವಿದೇಶದಲ್ಲಿರುವ ಭಾರತೀಯರಿಂದ ಬರುತ್ತಿದ್ದ ಹಣ ವರ್ಗಾವಣೆ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಮೈ ರಿಯಾಲ್ಟಿ-2026ರ ಚೇರ್ಮನ್ ಅಶ್ವಿನ್ ಆರ್. ಪಾಳೇಗಾರ್, ಗೌರವ ಕಾರ್ಯದರ್ಶಿ ಕೆ.ಎಸ್.ಪ್ರಕಾಶ್, ಬಿಎಐ ಚೇರ್‌ಮನ್ ಕೆ.ಆರ್. ಪ್ರಭಾಕರ್ ರಾವ್, ಗೌರವ ಕಾರ್ಯದರ್ಶಿ ಎಂ.ಡಿ.ಪ್ರವೀಣ್‌ಪಾಲ್, ಕ್ರೆಡಾಯ್ ಮೆಸೂರು ಚಾಪ್ಟರ್ ಅಧ್ಯಕ್ಷ ಹರೀಶ್ ಶೆಣೆ, ಗೌರವ ಕಾರ್ಯದರ್ಶಿ ನಾಗರಾಜ್ ವಿ.ಬೈರಿ, ಉದ್ಯಮಿ ಶ್ರೀಹರಿ ಇತರರು ಇದ್ದರು.
ವಿವಿಧೆಡೆಯಿಂದ ಆಗಮಿಸಿದ್ದ ರಿಯಲ್ ಎಸ್ಟೇಟ್ ವಲಯದ ಕಂಪನಿಗಳ 7 ಪ್ಲಾಟಿನಂ, 6 ಗೋಲ್ಡಸ್, 6 ಸಿಲ್ವರ್ ಹಾಗೂ 31 ಸಾಮಾನ್ಯ ಮಳಿಗೆಗಳನ್ನು ತೆರೆಯಲಾಗಿದೆ. ವಿವಿಧ ನಮೂನೆಯ ಫ್ಲಾಟ್‌ಗಳು ಹಾಗೂ ಮನೆಗಳ ಮಾರಾಟ ಪ್ರಕ್ರಿಯೆ ಆರಂಭಿಸಲಾಗಿದ್ದು, ಆಸ್ತಿ ಖರೀದಿದಾರರ ನೆರವಿಗಾಗಿ ಬ್ಯಾಂಕುಗಳ ಶಾಖೆಗಳು ಇವೆ. ಮೇಳ 25ರವರೆಗೂ ನಡೆಯಲಿದೆ.
ಪ್ರದರ್ಶನದಲ್ಲಿ ವಾಸ್ತುಶಿಲ್ಪಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಬಿಲ್ಡರ್ಸ್ ಭಾಗವಹಿಸಿದ್ದಾರೆ. ಗೃಹೋಪಯೋಗಿ ವಸ್ತು, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಆಟೋಮೊಬೈಲ್ ಉಪಕರಣ, ಯಂತ್ರೋಪಕರಣ, ಗೃಹ ಅಲಂಕಾರಿಕ ಉತ್ಪನ್ನಗಳ ಪ್ರದರ್ಶನ ಆಯೋಜಿಸಲಾಗಿದೆ.