ಹುಣಸೂರು ತಾಲೂಕು ಕೃಷ್ಣಪುರ ಮತ್ತು ಸಿರಿಯೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಇತ್ತೀಚೆಗೆ ಸಮಗ್ರ ತೋಟಗಾರಿಕೆ ಕೃಷಿ ಕುರಿತು ರೈತರಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಬನ್ನಿಕುಪ್ಪೆ: ಹುಣಸೂರು ತಾಲೂಕು ಕೃಷ್ಣಪುರ ಮತ್ತು ಸಿರಿಯೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಇತ್ತೀಚೆಗೆ ಸಮಗ್ರ ತೋಟಗಾರಿಕೆ ಕೃಷಿ ಕುರಿತು ರೈತರಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಕಿರಣ್ ಮಾತನಾಡಿ, ಧರ್ಮಸ್ಥಳದ ಸಂಸ್ಥೆ ವತಿಯಿಂದ ಸಾಲವನ್ನು ಬ್ಯಾಂಕಿನ ಮೂಲಕ ಕೊಡಿಸುವುದಲ್ಲದೆ, ಗ್ರಾಮೀಣ ಭಾಗದ ರೈತರಿಗೆ ಕೆರೆ, ಶಾಲೆಗಳು, ನಿರ್ಗತಿಕರಿಗೆ ಸೂರಿನ ವ್ಯವಸ್ಥೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಾಗುತ್ತಿದೆ. ಇಂತಹ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಗತಿಪರ ಕೃಷಿಕ ಚೆಲುವರಾಜ ಮಾತನಾಡಿ, ಇಂದು ನಾವೆಲ್ಲರೂ ಅರಣ್ಯ, ಜಲವನ್ನು ಉಳಿಸಿದರೆ ಮುಂದಿನ ಪೀಳಿಗೆಯನ್ನು ಉಳಿಸಬಹುದು. ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಮರಗಳನ್ನು ಬೆಳೆಸುವುದರಿಂದ ಒಳ್ಳೆಯ ವಾತಾವರಣ ಸಿಗಲಿದೆ. ಅಲ್ಲದೆ ಭೂಮಿ ಮೇಲೆ ಜೀವಸಂಕುಲಯಗಳು ಉಳಿಯುವುದು ಸಮಗ್ರ ಕೃಷಿಯಿಂದ. ರೈತನು ತೋಟಗಾರಿಕೆ, ಕಾಡು ಕೃಷಿ, ಮೇಕೆ, ಕುರಿ, ಕೋಳಿ ಇತ್ಯಾದಿಗಳನ್ನು ಕೃಷಿಯ ಜತೆಯಲ್ಲಿ ಉಪಕಸುಬಾಗಿ ಮಾಡಿಕೊಂಡರೆ ಆರ್ಥಿಕ ಲಾಭ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ರೈತರು ಬೆಳೆಗಳಿಗೆ ಹೆಚ್ಚು ರಸಗೊಬ್ಬರನ್ನು ಬಳಸಿ ಬೆಳೆಯನ್ನು ಹಾಳು ಮಾಡಿಕೊಳ್ಳುವುದಲ್ಲದೆ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕೊಟ್ಟಿಗೆ ಗೊಬ್ಬರವನ್ನು ಬಳಸಿ ಬೆಳೆಯನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ವಿದೇಶಿ ಹಸುಗಳನ್ನು ಸಾಕುತ್ತಿರುವುದು ಸಂತೋಷಕರ. ಆದರೆ ದೇಶಿಯ ತಳಿಗಳಾದ ಹಳ್ಳಿಕಾರ್ ಹಸುಗಳನ್ನು ಹಾಕಬೇಕು ಹಾಗೂ ಅವುಗಳ ಪ್ರಯೋಜನವನ್ನು ತಾವು ತಿಳಿದುಕೊಳ್ಳಬೇಕು. ರೈತರು ತಾವು ಬೆಳೆದ ಸೊಪ್ಪು, ತರಕಾರಿ, ಹಣ್ಣುಗಳನ್ನು ತಾವೇ ಆದಷ್ಟು ಮಾರಾಟ ಮಾಡಿದರೆ, ಲಾಭ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಮಹೇಶ್, ಮುಖಂಡರಾದ ಚಂದ್ರನಾಯಕ, ಸೇವಾ ಪ್ರತಿನಿಧಿಗಳು, ಸಂಘದ ಪದಾಧಿಕಾರಿಗಳು, ರೈತರು ಭಾಗವಹಿಸಿದ್ದರು.