ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ವಿದ್ಯಾರ್ಥಿನಿಲಯಗಳ ಸಮುಚ್ಚಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಿ.ನಿರಂಜನಮೂರ್ತಿ, ಡಾ.ರೇಚಣ್ಣ, ಮಮತಾ ಸುರೇಶ್, ಜಿ.ಗುರುಪಾದಸ್ವಾಮಿ , ರಶ್ಮಿ ಇದ್ದರು.
ಇತ್ತೀಚಿನ ದಿನಗಳಲ್ಲಿ ದೇಸಿ ಆಟಗಳು ನಶಿಸಿ ಹೋಗುತ್ತಿವೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಬೇಸರ ವ್ಯಕ್ತಪಡಿಸಿದರು.
ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ವಿದ್ಯಾರ್ಥಿನಿಲಯಗಳ ಸಮುಚ್ಚಯ ವತಿಯಿಂದ ಭಾನುವಾರ ಮಹಿಳಾ ದಿನದ ಅಂಗವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಅಂತರ ವಸತಿನಿಲಯಗಳ ದೇಸಿ ಆಟಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಸಿ ಆಟಗಳಿಂದ ದೇಶದ ಸಂಪ್ರದಾಯ ಹಾಗೂ ಪಾರಂಪರಿಕ ಮಹತ್ವವನ್ನು ತಿಳಿಯಬಹುದು. ಹಾಗಾಗಿ ಈ ರೀತಿ ಆಟಗಳನ್ನು ಯುವ ಪೀಳಿಗೆಗೆ ಪರಿಚಯಿಸಿ, ಉಳಿಸಬೇಕು ಎಂದು ಹೇಳಿದರು.
ವಸತಿನಿಲಯದ ಹಳೆಯ ವಿದ್ಯಾರ್ಥಿನಿಯೂ ಆದ ವಿದ್ಯಾವರ್ಧಕ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕಿ ನಿಸರ್ಗಾ ಮಾತನಾಡಿ, ಜೆಎಸ್‌ಎಸ್ ಸಂಸ್ಥೆಗಳಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಪ್ರಾಧಾನ್ಯ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಓದಿನ ಜತೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡು ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರೇಚಣ್ಣ ಮಾತನಾಡಿದರು. ದೇಸಿ ಆಟಗಳಾದ ಹಗ್ಗ-ಜಗ್ಗಾಟ, ಅಳುಗುಳಿ ಮಣೆ, ಚೌಕಾಬಾರ, ಲಗೋರಿ ಆಟದಲ್ಲಿ ರಾಜ್ಯ ಮಟ್ಟದ ವಸತಿನಿಲಯಗಳ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ವಸತಿನಿಲಯಗಳ ಮುಖ್ಯನಿಲಯಪಾಲಕಿ ಮಮತಾ ಸುರೇಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಗುರುಪಾದಸ್ವಾಮಿ, ಜೆಎಸ್‌ಎಸ್ ಮಹಿಳಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಕಿ ರಶ್ಮಿ ಮತ್ತಿತರರು ಇದ್ದರು.